More

    Success Story: ಕಾರ್ಪೊರೇಟ್​ ಕೆಲಸ ಬಿಟ್ಟು ಐಎಎಸ್ ಅಧಿಕಾರಿಯಾದ ಸಾಧಕ!

    ಅಜ್ಜ, ತಂದೆ, ತಾಯಿ ಸರ್ಕಾರಿ ಸೇವೆಯಲ್ಲಿದ್ದವರೇ. ಪ್ರಸ್ತುತ ಪತ್ನಿ, ಚಿಕ್ಕಪ್ಪ ಕೂಡ ಐಎಎಸ್​ ಆಫೀಸರ್​. ಹೀಗೆ ಕುಟುಂಬ ಸದಸ್ಯರೆಲ್ಲಾ ಒಂದಲ್ಲಾ ಒಂದು ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಐಎಎಸ್​ ಆಫೀಸರ್​ ಆಗುವ ಮೊದಲು ಇವರು ಕೂಡ ವಾರನ್​ ಬೆಟ್​ ಕಂಪೆನಿಯಲ್ಲಿ ಕೆಲಸ ಮಾಡುವ ಅವಕಾಶ ಪಡೆದಿದ್ದರು. ಒಳ್ಳೆಯ ಸಂಬಳವಿತ್ತು. ಆದರೆ ಟಿಪಿಕಲ್​ ಕಾರ್ಪೊರೇಟ್​ ಲೈಫ್ ಎಂಜಾಯ್​ ಮಾಡುವ ಬದಲು ತಾನೊಬ್ಬ ಒಳ್ಳೆಯ ಅಧಿಕಾರಿಯಾಗಿ ಜನರ ಸೇವೆ ಮಾಡಬೇಕೆಂಬ ಅಭಿಲಾಷೆಯಿಂದ ಯುಪಿಎಸ್​ಸಿ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಗಳಿಸಿ, ಆ ನಂತರ ವಿವಿಧೆಡೆ ಏಳು ವರ್ಷಗಳ ಕಾಲ ಸೇವೆಸಲ್ಲಿಸಿ ಪ್ರಸ್ತುತ ಹಾವೇರಿ ಜಿ.ಪಂ.ನಲ್ಲಿ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮೊಹಮ್ಮದ್​ ರೋಶನ್​.

    -ಅಶ್ವಿನಿ ಎಚ್​.ಆರ್​.

    ಮೂರನೇಪ್ರಯತ್ನದಲ್ಲಿ ಯಶಸ್ವಿ

    ಮೊಹಮ್ಮದ್​ ರೋಶನ್​ ಹೈದರಾಬಾದ್​ ಮೂಲದವರು. ತಂದೆ ತಾಯಿ ಇಬ್ಬರೂ ವೈದ್ಯರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹೈದರಾಬಾದ್​ನಲ್ಲಿಯೇ ಮುಗಿಸಿದರು. ಆ ನಂತರ ಪದವಿಯಲ್ಲಿ ಇಂಜಿನಿಯರಿಂಗ್​ ಹಾಗೂ ಎಂಬಿಎನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕುಟುಂಬದವರೆಲ್ಲಾ ಸಿವಿಲ್​ ಸರ್ವೀಸ್​ನಲ್ಲಿ ಇದ್ದುದರಿಂದ ತಾನು ಕೂಡ ಒಮ್ಮೆ ಪ್ರಯತ್ನಿಸೋಣವೆಂದು ಇಂಜಿನಿಯರಿಂಗ್​ 4ನೇ ವರ್ಷದಲ್ಲಿದ್ದಾಗ ಪರೀಕ್ಷೆಗೆ ಸಿದ್ಧತೆ ಶುರು ಮಾಡಿಕೊಳ್ಳಲಾಯಿತು. ಪ್ರಥಮ ಪ್ರಯತ್ನದಲ್ಲಿ ಪ್ರಿಲಿಮ್ಸ್​ನಲ್ಲಿ ಯಶಸ್ವಿಯಾದರೂ, ಮುಖ್ಯ ಪರೀಕ್ಷೆಯಲ್ಲಿ ಆಗಲಿಲ್ಲ. ಮತ್ತೆ ಎಂಬಿಎ ಮಾಡುವಾಗ ಎರಡನೇ ಹಾಗೂ ಮೂರನೇ ಪ್ರಯತ್ನ ಮಾಡಿದರು. ಆದರೆ ಮೂರನೇ ಪ್ರಯತ್ನದಲ್ಲಿ ಯಶ ಕಂಡರು. 2014ರಲ್ಲಿ 44ನೇ ರ‍್ಯಾಂಕ್​ ಪಡೆಯುವ ಮೂಲಕ ಅತ್ಯುತ್ತಮ ಅಂಕ ಪಡೆದರು. ಸಂದರ್ಶನದಲ್ಲಿಯೂ ಸಹ ಒಳ್ಳೆಯ ಮಾರ್ಕ್ಸ್​ ಬಂತು.

    ಅಧಿಕಾರಿ ಆಗುವ ಮುನ್ನ…

    ಯಪಿಎಸ್​ಸಿ ಪರೀಕ್ಷೆ ಬರೆದು, ಲಿತಾಂಶ ಬರುವ ಕೆಲವೇ ದಿನಗಳಿರುವಾಗ ವಾರನ್​ ಬೆಟ್​ ಕಂಪೆನಿಯಲ್ಲಿ ರೋಶನ್​ ಅವರಿಗೆ ಕ್ಯಾಂಪಸ್​ ಸೆಲೆಕ್ಷನ್​ನಲ್ಲಿ ಒಳ್ಳೆಯ ಕೆಲಸ ಸಿಕ್ಕಿತು. ಸಂಬಳ ಕೂಡ ಚೆನ್ನಾಗಿತ್ತು. ಆದರೆ ಒಂದು ತಿಂಗಳು ಕೆಲಸ ಮಾಡಿದ ನಂತರ ಆ ಕೆಲಸ ಬಿಟ್ಟರು. “ಕಾರ್ಪೊರೇಟ್​ ಕಂಪನಿಯಲ್ಲಿ ಕೆಲಸ ಮಾಡಿದ್ದರೆ, ಈ ತರಹ ಜನರ ಸೇವೆ ಮಾಡುವ ಅವಕಾಶ ಸಿಗುತ್ತಿರಲಿಲ್ಲ. ಉದ್ದೇಶಪೂರ್ವಕವಾಗಿ ಖಾಸಗಿ ಕಂಪನಿ ಕೆಲಸ ಬಿಟ್ಟು, ಗ್ರಾಮೀಣ ಭಾಗದಲ್ಲಿ ಕೆಲಸಗಳನ್ನು ಮಾಡಲು, ವಿಶೇಷವಾಗಿ ಅಲ್ಲಿಯ ಜನರ ಸಮಸ್ಯೆ ಬಗೆಹರಿಸಲು ಈ ಹುದ್ದೆಯನ್ನು ಆಯ್ಕೆ ಮಾಡಿಕೊಂಡೆ. ಜನರು ಹಾಗೂ ವಿವಿಧ ಸಂ ಸಂಸ್ಥೆಗಳ ಜತೆ ಇದ್ದು, ಅವರ ಕಷ್ಟಗಳನ್ನು ಬಗೆಹರಿಸುವುದು ನನ್ನ ಮುಖ್ಯ ಉದ್ದೇಶವೆನ್ನುತ್ತಾರೆ’ ರೋಶನ್​.

    ಯಾರು ಐಎಎಸ್​ ಅಧಿಕಾರಿಯಾಗಲು ಸಾಧ್ಯ?

    ಸೋಲೇ ಗೆಲುವಿನ ಮೆಟ್ಟಿಲು. ನಾನೇಕೆ ಸೋತೆ ಎನ್ನುವ ವಿಷಯ ವಿಮರ್ಶೆ ಮಾಡಿ, ಆ ನಂತರ ಅದರ ಕಡೆ ಗಮನ ಕೇಂದ್ರಿಕರಿಸಿದಾಗ ಪರೀಕ್ಷೆಯಲ್ಲಿ ಯಶಸ್ಚಿಯಾಗಬಹುದು. ವಿಶೇಷವಾಗಿ ಐಎಎಸ್​ ಅಧಿಕಾರಿಯಾಗಬೇಕೆನ್ನುವ ಅಭ್ಯರ್ಥಿಗಳಿಗೆ ಬಲವಾದ ಪ್ಯಾಶನ್​ ಇರಬೇಕು.

    ಬಿಸಿಲು, ಮಳೆ ಎನ್ನದೆ ಕೆಲಸ ಮಾಡಲು ಸಿದ್ಧರಿರಬೇಕು. ಎರಡನೇ ಮುಖ್ಯ ಅಂಶವೆಂದರೆ ಐಎಎಸ್​ ಅಧಿಕಾರಿಯಾಗಬೇಕೆನ್ನುವವರು ಪ್ರತಿ ದಿನಾ ಬೇರೆ ಬೇರೆ ವಿಚಾರಗಳ ಬಗ್ಗೆ ಕೆಲಸ, ಚರ್ಚೆ ಮಾಡಬೇಕಾಗುತ್ತದೆ. ಇದು ಡೈನಾಮಿಕ್​ ವೃತ್ತಿ. ಒಂದು ಗಂಟೆ ಶಿಕ್ಷಣವಾದರೆ, ಮತ್ತೊಂದು ಗಂಟೆಗೆ ಮಹಿಳಾ ಮತ್ತು ಕಲ್ಯಾಣ ಅಭಿವೃದ್ಧಿ ಇಲಾಖೆ ನೋಡಬೇಕು, ತದನಂತರ ಟೂರಿಸಂ. ಹೀಗೆ ವಿಪರೀತ ವೈವಿಧ್ಯತೆಗಳಿರುತ್ತವೆ. ಆದ್ದರಿಂದ ಪ್ಯಾಶನ್​ ಇರುವವರು ಈ ಹುದ್ದೆಗೆ ಬರಬೇಕು. ಮೂರನೇ ಆಂಶ ಐಎಎಸ್​ ಜಾಬ್​ ಅಂದರೆ ಅದು ಹೈಯರ್​ ರೈಟಿಂಗ್​. ಪ್ರತಿ ನಿಮಿಷ, ಹಗಲು ರಾತ್ರಿ ಕರೆಗಳು ಬರುತ್ತವೆ. ಜನರನ್ನು ಭೇಟಿಯಾಗಬೇಕು, ಫೀಲ್ಡ್​ಗೆ ಹೋಗಬೇಕು. ಹಾಗಾಗಿ ಇದಕ್ಕೆಲ್ಲಾ ಸಿದ್ಧವಿರುವವರು ಈ ಕೆಲಸವನ್ನು ಆರಿಸಿಕೊಂರೆ ಒಳ್ಳೆಯದು ಎನ್ನುವುದು ರೋಶನ್​ ಅವರ ಅಭಿಪ್ರಾಯ.

    ಈ ಸಮಯದಲ್ಲಿ ಕೋಚಿಂಗ್​ ಬೇಕು…

    “ನನ್ನ ಪ್ರಕಾರ ಮೊದಲನೇ ಹೆಜ್ಜೆಯೇ ಕೋಚಿಂಗ್​ ಅಲ್ಲ, ಕೋಚಿಂಗ್​ ಇಂಟರ್​ಮಿಡಿಯೇಟ್​ ಸ್ಟೆಪ್​. ಮೊಟ್ಟಮೊದಲಿಗೆ ಸೆಲ್ಫ ಸ್ಟಡಿ ಮಾಡ್ಬೇಕು. ದಿನಪತ್ರಿಕೆ ಓದಬೇಕು, ಯುಪಿಎಸ್​ಸಿಯಲ್ಲಿ ಎನ್​ಸಿಇಆರ್​ಟಿ ಪಠ್ಯಪುಸ್ತಕಗಳಲ್ಲಿ ಬಂದಿರುವುದನ್ನೇ ಕೇಳುವುದು. ಪುಸ್ತಕಗಳನ್ನು ಓದಿ, ಅರ್ಥವಾಗದಿದ್ದರೆ ಆಗ ಕಾಲೇಜು ವಿಶ್ವವಿದ್ಯಾಲಯದ ಪ್ರೊೆಸರ್​ ಹತ್ತಿರ ಹೋಗಿ, ಟಾಪಿಕ್​ ಬಗ್ಗೆ ಕೇಳಿ. ಇದನ್ನು ಮೀರಿಯೂ ಅರ್ಥವಾಗದಿದ್ದರೆ ಕೋಚಿಂಗ್​ ಹೋಗಬೇಕು. ನಾನು ಕೂಡ ಆಂತ್ರೋಪಾಲಜಿಯಲ್ಲಿ ಕೆಲವು ವಿಷಯಗಳು ಅರ್ಥವಾಗದಿದ್ದಾಗ ನಮ್ಮ ಪ್ರಾಧ್ಯಪಕರ ಬಳಿ ಆ ವಿಷಯದ ಬಗ್ಗೆ ಕೋಚಿಂಗ್​ ತೆಗೆದುಕೊಂಡೆ’.

    ಪ್ಲಾನ್​ ಹೀಗಿರಲಿ…

    ಈಗ ಎಲ್ಲ ವಿಷಯಗಳು ಆನ್​ಲೈನ್​ನಲ್ಲಿ ಸಿಗುತ್ತಿವೆ. ಎಲ್ಲ ವಿಷಯಗಳನ್ನು ಆನ್​ಲೈನ್​ನಲ್ಲಿ ಹುಡುಕಬಹುದು. ಯುಪಿಎಸ್​ಸಿ ಆಯ್ಕೆ ಮಾಡಿಕೊಂಡಿದ್ದೇವೆ ಎಂದರೆ ಅದಕ್ಕೆ 100% ಶ್ರಮ ಹಾಕಬೇಕು. ಕಾಲೇಜಿಗೆ ಹೋಗಿ ವಾಪಸ್​ ಬಂದ ಮೇಲೂ ಓದಬಹುದು. ನೀವು ಕೆಲಸ ಮಾಡಿಕೊಂಡಿಯೂ ಓದಬಹುದು. ದಿನಕ್ಕೆ ಐದು ತಾಸದರೂ ಓದಬೇಕಾಗುತ್ತದೆ. ಸಮಯ ನಿಗದಿಮಾಡಿಕೊಳ್ಳಬೇಕು. ಸ್ಥಿರತೆ ಮುಖ್ಯ. ದಿನಪತ್ರಿಕೆಗಳನ್ನು ಯುಪಿಎಸ್​ಸಿ ಅಭ್ಯರ್ಥಿ ವಿಶ್ಲೇಷಿಸುವ ರೀತಿ, ದೃಷ್ಟಿಕೋನ ಬೇರೆ ತರಹ ಇರಬೇಕು. ಮಾಮೂಲಿಯಾಗಿರಬಾರದು. ವಿವರಗಳನ್ನು ನೋಡಬೇಕು. ದಿನಪತ್ರಿಕೆಗಳನ್ನು ಪುಸ್ತಕದ ರೀತಿ ಓದಬೇಕು. ನಿಧಾನವಾಗಿ ಒಂದು ವರ್ಷದಲ್ಲಿ ಎಲ್ಲದನ್ನು ಕವರ್​ ಮಾಡುವ ರೀತಿ ಪ್ಲಾನ್​ ಮಾಡಬೇಕು. ಆಗ ಯಶಸ್ಸು ಸಿಗುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನುತ್ತಾರೆ ರೋಶನ್​.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts