More

    Success Story | ಮೊದಲ ಪ್ರಯತ್ನದಲ್ಲೇ ಯಶಸ್ಸು; ತಂದೆಯ ಕೆಲಸದ ಸ್ಫೂರ್ತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದ್ರು ಈ ಅಧಿಕಾರಿ…

    ಜನರ ಸೇವೆ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಆದರೆ ಸಿವಿಲ್​ ಸರ್ವಿಸ್​ ಸೇರ ಬಯಸುವವರಿಗೆ ಇದೊಂದು ಉತ್ತಮ ಅವಕಾಶ. ನಾನೂ ಇದನ್ನು ತಲೆಯಲ್ಲಿಟ್ಟುಕೊಂಡೇ ಈ ಕ್ಷೇತ್ರಕ್ಕೆ ಕಾಲಿಟ್ಟೆ. ಅಪ್ಪನ ಕೆಲಸ ನೋಡಿ ಸ್ಫೂರ್ತಿ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದೆ. ಮೊದಲ ಪ್ರಯತ್ನದಲ್ಲೇ ಯಶಸ್ಸು ನನ್ನ ಪಾಲಿಗೆ ಒಲಿಯಿತು ಎನ್ನುವ ಯುಕೇಶ್​ ಕುಮಾರ್​ ಸದ್ಯ ಕೋಲಾರ ಜಿಲ್ಲಾ ಪಂಚಾಯಿತಿ ಸಿಇಒ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಹೇಗಿರಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ…

    ಶ್ವೇತಾ ನಾಯ್ಕ್​ ಬೆಂಗಳೂರು

    ತಮಿಳುನಾಡಿನಲ್ಲಿ ಹುಟ್ಟಿದರೂ ತಂದೆ ಸೇನೆಯಲ್ಲಿ ಇದ್ದಿದ್ದರಿಂದ ಪ್ರಾಥಮಿಕ ಮತ್ತು ಪ್ರೌಢಶಿಣ ಬೇರೆ ಬೇರೆ ಊರಿನಲ್ಲಿ ಆಯಿತು. ತಂದೆಯೊಂದಿಗೆ ನಾವೂ ಊರೂರು ಸುತ್ತುತ್ತಿದ್ದರಿಂದ ಎಲ್ಲ ಕಡೆ ಶಿಕ್ಷಣ ಪಡೆಯುವಂತಾಯಿತು. ಆದರೆ ಪೂರ್ತಿ ಪ್ರಾಥಮಿಕ ಮತ್ತು ಪ್ರೌಢ ಶಿಣ ಕೇಂದ್ರೀಯ ವಿದ್ಯಾಲಯದಲ್ಲೇ ಪೂರ್ಣಗೊಳಿಸಲಾಯಿತು. ಎನ್​ಐಟಿ ನಾಗ್ಪುರದಲ್ಲಿ ಬಿಟೆಕ್​ ಕಂಪ್ಯೂಟರ್​ ಸೈನ್ಸ್​ ಮುಗಿಸಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡೆ.

    ಖಾಸಗಿ ಕಂಪನಿಯಲ್ಲಿ ಇದ್ದಾಗಲೇ ಯುಪಿಎಸ್​ಸಿ ಪರೀಕ್ಷೆಗೆ ತಯಾರಿ ಆರಂಭವಾಗಿತ್ತು. ಪ್ರಾರಂಭದಲ್ಲಿ ಕೆಲಸ ಮಾಡಿಕೊಂಡು ಜೊತೆ ಜೊತೆಗೇ ಓದುವುದು ಕಷ್ಟ ಎನಿಸುತ್ತಿತ್ತು. 10ನೇ ತರಗತಿಯಲ್ಲಿದ್ದಾಗ ನಾಗರಿಕ ಸೇವೆ ಪರೀಕ್ಷೆ ಬರೆಯಬೇಕು ಎನ್ನುವ ಕನಸು ಇತ್ತಾದರೂ ಕನಸಿಗೆ ನೀರೆರೆದದ್ದು ಪದವಿ ಮುಗಿದ ಮೇಲೆಯೇ. ನಿರಂತರವಾಗಿ ಓದುತ್ತಿದ್ದೆ. ಕೆಲಸ ಮುಗಿದ ನಂತರ ಉಳಿದ ಸಮಯವನ್ನು ಓದಿಗೇ ಮೀಸಲಿಡುತ್ತಿದ್ದೆ. ಆದರೂ ಕಷ್ಟ ಎನಿಸಿದಾಗ ಕಂಪನಿಯಿಂದ ಒಂದು ವರ್ಷದ ರಜೆ ತೆಗೆದುಕೊಂಡು ಸಂಪೂರ್ಣ ಸಮಯ ಓದಲು ಪ್ರಾರಂಭಿಸಿದೆ.

    ಇದನ್ನೂ ಓದಿ: Success Story: ಕೋಚಿಂಗ್ ಹೋಗಲೇ ಇಲ್ಲೆ… ಆದ್ರೂ ಐಎಎಸ್ ಪಾಸ್; ಏನಿದರ‌ ಗುಟ್ಟು..?

    ಉತ್ತಮ ವೇದಿಕೆ

    ತಂದೆ ಆರ್ಮಿಯಲ್ಲಿ ಇದ್ದಿದ್ದರಿಂದ ಸರ್ಕಾರಿ ಸೇವೆಯಲ್ಲಿರುವವರು ಜನರ ಸೇವೆಯನ್ನು ಹೇಗೆ ಮಾಡಬಹುದು ಎಂಬ ಅರಿವಿತ್ತು. ಜನರನ್ನು ಹತ್ತಿರದಿಂದ ತಿಳಿದುಕೊಳ್ಳಲು ಸಿವಿಲ್​ ಸರ್ವೀಸ್​ ಒಂದು ಉತ್ತಮ ವೇದಿಕೆ ಎನ್ನುವುದು ನನಗೆ ಮನದಟ್ಟಾಗಿತ್ತು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಏನಾಗುತ್ತದೆ ಎಂದು ಹೇಳುವುದು ಕಷ್ಟ. ಎಷ್ಟೇ ಕಷ್ಟ ಪಟ್ಟು ಓದಿದರೂ ಒಮ್ಮೊಮ್ಮೆ ಅವಕಾಶಗಳು ಸಿಗದೇ ಇರಬಹುದು. ಆದ್ದರಿಂದ ಒಂದು ಬ್ಯಾಕ್​ಅಪ್​ ಪ್ಲಾನ್​ ಇದ್ದರೆ ನಂತರ ಪ್ರಯತ್ನ ಮಾಡಬಹುದು ಎಂಬ ಕಾರಣದಿಂದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ ಅನುಭವ ಪಡೆದೆ.

    ಮೊದಲ ಪ್ರಯತ್ನ

    2014ರಲ್ಲಿ ಮೊದಲು ಯುಪಿಎಸ್​ಸಿ ಪರೀಕ್ಷೆ ಎದುರಿಸಿದೆ. ಮೊದಲ ಪ್ರಯತ್ನದಲ್ಲಿ 10 ಅಂಕ ಕಡಿಮೆ ಇದ್ದಿದ್ದರಿಂದ ಲಿಸ್ಟ್​ನಲ್ಲಿ ನನ್ನ ಹೆಸರು ಇರಲಿಲ್ಲ. ನಂತರ ರ‍್ಯಾಂಕ್​ ಬೇಸ್​ನಲ್ಲಿ ರೈಲ್ವೆ ಟ್ರಾಫಿಕ್​ ಸರ್ವಿಸ್​ನಲ್ಲಿ ಕೆಲಸ ಪಡೆದೆ. ಕೆಲಸದೊಂದಿಗೆ ಓದು ಮುಂದುವರಿಸಿ ಮತ್ತೆ ಎದುರಿಸಿದಾಗ 2018ರಲ್ಲಿ ಐಎಎಸ್​ ತೇರ್ಗಡೆಯಾದೆ. ಕೋಚಿಂಗ್​ನೊಂದಿಗೆ ನಮ್ಮ ಓದೂ ಇರುತ್ತಿತ್ತು. ಸಿಲಬಸ್​ ಏನಿದೆ ಎನ್ನುವುದನ್ನು ಅರ್ಥ ಮಾಡಿಕೊಂಡು ಬೇಸಿಕ್​ನಿಂದ ಓದಲು ಪ್ರಾರಂಭಿಸಿದ್ದೆ.

    ಇದನ್ನೂ ಓದಿ: Success Story: ಐಎಎಸ್​ ಆಗದಿದ್ದರೆ ಟೆಕ್ಸ್​ಟೈಲ್​ ಉದ್ಯಮ ಮಾಡಲು ನಿರ್ಧರಿಸಿದ್ದೆ!

    ತರಬೇತಿ ಅಗತ್ಯ

    ಕೆಲವರು ಕೋಚಿಂಗ್​ ಬೇಡ ಎಂದು ಹಿಂದೆ ಸರಿಯುವುದೂ ಇದೆ. ನನ್ನ ಪ್ರಕಾರ ತರಬೇತಿ ಅಗತ್ಯ. ಯಾವುದನ್ನು ಎಷ್ಟು ಸಮಯದಲ್ಲಿ ಓದಬೇಕು, ಹೇಗೆ ಓದಬೇಕು ಎನ್ನುವುದನ್ನೆಲ್ಲ ತಿಳಿಸಲು ಒಳ್ಳೆಯ ಶಿಕರ ಮಾರ್ಗದರ್ಶನ ಖಂಡಿತ ಅಗತ್ಯ. ಕರೊನಾ ನಂತರ ಆನ್​ಲೈನ್​ ಮೂಲಕವೇ ಎಲ್ಲ ಸೌಲಭ್ಯ ಸಿಗುತ್ತಿರುವುದರಿಂದ ಈಗ ಇನ್​ಸ್ಟಿಟ್ಯೂಟ್​ಗಳಿಗೆ ಅಲೆಯುವ ಅಗತ್ಯತೆ ಇರುವುದಿಲ್ಲ. ಓದನ್ನು ಸೀಮಿತಗೊಳಿಸಿಕೊಳ್ಳಬಾರದು. ಪರೀಕ್ಷೆ ಸಮಯದಲ್ಲಿ ಯಾವ ಪ್ರಶ್ನೆ ಬೇಕಾದರೂ ಬರುವ ಸಾಧ್ಯತೆ ಇರುವುದರಿಂದ ನಮ್ಮ ಕವರೇಜ್​ ಜಾಸ್ತಿ ಇರಬೇಕು. ಓದುವಾಗಲೇ ಬೇರೆ ಬೇರೆ ಆಯಾಮಗಳಲ್ಲಿ ಯೋಚಿಸಬೇಕು.

    ರಾತ್ರಿಯಿಂದ ಬೆಳಗಿನವರೆಗೆ ಓದು

    ಇಷ್ಟು ಓದಿದರೂ ಯಾವತ್ತೂ ನನಗೆ ಹೊರೆ ಎನಿಸಲಿಲ್ಲ. ಕಾರಣ ನಾನು ಪ್ರತಿಯೊಂದನ್ನೂ ಇಷ್ಟ ಪಟ್ಟು ಓದುತ್ತಿದ್ದೆ. ಗುರಿಯನ್ನು ಬೆನ್ನಟ್ಟುವಾಗ ಇದ್ಯಾವುದೂ ಗಣನೆಗೆ ಬರುವುದಿಲ್ಲ. ಪ್ರಾರಂಭದಲ್ಲಿ ಕೆಲಸ ಮಾಡುತ್ತಲೇ ಓದುತ್ತಿದ್ದಾಗ ಪೂರ್ತಿ ರಾತ್ರಿ ಓದುತ್ತಿದ್ದೆ. ನಂತರ ಕೆಲಸ ಬಿಟ್ಟು ಸಂಪೂರ್ಣ ಸಮಯವನ್ನು ಓದಿಗೆ ಮೀಸಲಿಟ್ಟೆ. ದಿನಕ್ಕೆ ಕನಿಷ್ಠ 12ರಿಂದ 14 ಗಂಟೆ ಓದು ನನ್ನದಾಗಿತ್ತು.

    ಇದನ್ನೂ ಓದಿ: Success Story: ಕಾರ್ಪೊರೇಟ್​ ಕೆಲಸ ಬಿಟ್ಟು ಐಎಎಸ್ ಅಧಿಕಾರಿಯಾದ ಸಾಧಕ!

    ಸಂದರ್ಶನ ಅಲ್ಲ ವ್ಯಕ್ತಿತ್ವ ಪರೀಕ್ಷೆ

    ಇದನ್ನು ಹೇಳಿ, ಅದನ್ನು ಹೇಳಿ ಎಂದು ಪುಸ್ತಕದಲ್ಲಿನ ಪ್ರಶ್ನೆಗಳನ್ನು ಕೇಳುವುದು ತೀರಾ ಕಡಿಮೆ. ಸಿವಿಲ್​ ಸರ್ವಿಸ್​ ಅಂದರೆ ನಾಗರಿಕ ಸೇವೆ. ಅದರ ಸುತ್ತ ಪ್ರಶ್ನೆಗಳು ಇರಲಿವೆ. ಅದು ಬಿಟ್ಟು ಪುಸ್ತಕದಲ್ಲಿನ ಪ್ರಶ್ನೆಗಳನ್ನು ಕೇಳುವುದು ತೀರಾ ಕಡಿಮೆ. ಇದೊಂದು ನಮ್ಮ ಆತ್ಮವಿಶ್ವಾಸ ಹೆಚ್ಚಿಸುವ ವ್ಯಕ್ತಿತ್ವ ಪರೀಕ್ಷೆಯೇ ಹೊರತು ಪರೀಕ್ಷೆಯಲ್ಲಿ ಬರೆದ ಪ್ರಶ್ನೆಗಳನ್ನೇ ಮತ್ತೆ ಕೇಳುವ ಸಂದರ್ಶನ ಅಲ್ಲ. ಇದನ್ನು ಪ್ರಶ್ನೆ&ಉತ್ತರದ ಸೆಷನ್​ ಅನ್ನುವುದಕ್ಕಿಂತ ಪರಸ್ಪರ ಚರ್ಚೆ ಎನ್ನಬಹುದು. ನಮ್ಮ ನೈತಿಕತೆ, ಎಥಿಕ್ಸ್​ ಇವುಗಳನ್ನು ಪರೀಕ್ಷೆ ಮಾಡುವುದಷ್ಟೇ ಯುಪಿಎಸ್​ಸಿ ಸಂದರ್ಶನದ ತಾತ್ಪರ್ಯ.

    ಸಮಯ ಸದ್ಬಳಕೆಯಾಗಲಿ

    ಸ್ಪರ್ಧಾತ್ಮಕ ಪರೀಕ್ಷೆ ಎನ್ನುವುದಲ್ಲ. ಪರೀಕ್ಷೆ ಯಾವುದೇ ಇರಲಿ. ಪ್ರಾರಂಭದಲ್ಲೇ ಓದಲು ತೊಡಗಬೇಕು. ಒಂದು ನಿರ್ದಿಷ್ಟ ಗುರಿಯೊಂದಿಗೆ ಓದು ಮುಂದುವರಿಸಬೇಕು. ವಿಷಯವನ್ನು ಅರ್ಥ ಮಾಡಿಕೊಳ್ಳದೆ ಓದಿದರೆ ಎಷ್ಟು ಓದಿದರೂ ವ್ಯರ್ಥ. ಯಾವ ಹಂತದಲ್ಲಿ ಓದು ಮುಗಿಸಬೇಕು. ಯಾವುದನ್ನು ನೋಟ್ಸ್​ ಮಾಡಿಕೊಳ್ಳಬೇಕು, ಯಾವುದಕ್ಕೆ ಕೋಚಿಂಗ್​ ಪಡೆಯಬೇಕು ಎಂಬ ಜ್ಞಾನ ನಮಗಿರಬೇಕು. ಮಾಡೋಣ, ನೋಡೋಣ, ಬಂದರೆ ಬರಲಿ, ಇಲ್ಲದಿದ್ದರೆ ಇಲ್ಲ. ಇಂತಹ ದ್ವಂದ್ವ ಮನಸ್ಸಿನಲ್ಲಿ ಇದ್ದರೆ ಯಾವುದೂ ಪರಿಪೂರ್ಣ ಎನಿಸುವುದಿಲ್ಲ. ಒಂದು ಹಂತದಲ್ಲಿ ಓದು ಮುಗಿಸಿ ಪರೀಕ್ಷೆ ಎದುರಿಸಬಲ್ಲೆ ಎಂಬ ಆತ್ಮವಿಶ್ವಾಸ ಬಂದ ಮೇಲಷ್ಟೇ ಓದಲು ಪ್ರಾರಂಭಿಸಿ. ಪ್ರಶ್ನೆ ಪತ್ರಿಕೆ ಅಷ್ಟೇ ಅಲ್ಲದೆ ಸೀನಿಯರ್​ಗಳು ಬರೆದ ಉತ್ತರ ಪತ್ರಿಕೆಗಳನ್ನೂ ನೋಡಬೇಕು. ಆಗ ಪರೀಕ್ಷೆ ಹೇಗೆ ಎದುರಿಸಬಹುದು ಎಂಬ ಐಡಿಯಾ ಬರುತ್ತದೆ.

    ಜನರ ನಾಡಿಮಿಡಿತ ಅರಿತು ಕೆಲಸ ಮಾಡಬೇಕು. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಇದೊಂದು ಅದ್ಬುತ ವೇದಿಕೆ. ಇದನ್ನು ಸದ್ಬಳಕೆ ಮಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇರುತ್ತದೆ. ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಅಧಿಕಾರಿಗಳಿಗೆ ಸಾಕಷ್ಟು ಅಧಿಕಾರ ಕೊಟ್ಟಿದೆ. ಅದನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಂಡು ಸರ್ಕಾರದಿಂದ ಮಂಜೂರಾದ ಯೋಜನೆಗಳನ್ನು ಜನರಿಗೆ ತಲುಪಿಸುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಅಧಿಕಾರಿ ಕೆಲಸ ಮಾಡಬೇಕು.
    > ಯುಕೇಶ್​ ಕುಮಾರ್​.ಎಸ್​, ಜಿಪಂ ಸಿಇಒ, ಕೋಲಾರ

    ಇದನ್ನೂ ಓದಿ: Success Story: ವೆಟರ್ನರಿ ವೈದ್ಯರಾಗಿದ್ದ ಡಾ.ರಾಮ್ ಪ್ರಸಾತ್ ಈಗ ಕರ್ನಾಟಕದಲ್ಲಿ ಐಎಎಸ್ ಆಫೀಸರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts