

“ನಿರಂತರ ಕಲಿಕೆಯಿಂದ ಎಂಥ ಸಾಧನೆಯಾದರೂ ಸಾಧ್ಯ. ನಾವು ಹೆಚ್ಚು ಓದುವುದರಿಂದ ಸಾಮಾಜಿಕ ಕ್ಷೇತ್ರದಲ್ಲಿ ಕೂಡ ಹೆಚ್ಚಿನ ಅನುಕೂಲ ಮಾಡಿಕೊಡಬಹುದು. ಎಲ್ಲ ಕ್ಷೇತ್ರದಲ್ಲಿ ಅರಿವು, ಅನುಭವದ ಅವಶ್ಯಕವಿದೆ. ಇದು ಭವ್ಯ ಭಾರತ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ’’ ಎಂಬುದು ಐಎಎಸ್ ಅಧಿಕಾರಿ ಡಾ.ರಾಮ್ ಪ್ರಸಾತ್ ವಿ ಮನೋಹರ್ ಮನದಾಳದ ಮಾತು. ಇಂದಿನ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರದ ಗೆಸ್ಟ್ ಆಗಿ ಮಾತನಾಡಿರುವ ರಾಮ್ ಪ್ರಸಾತ್, ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು UPSCಯಲ್ಲಿ ಯಶಸ್ಸು ಕಾಣುವುದು ಹೇಗೆಂದು ಸಂಕ್ಷಿಪ್ತವಾಗಿ ತಿಳಿಸಿದ್ದಾರೆ.
ಗ್ರಾಮೀಣ ಪ್ರತಿಭೆ
ಓದಿದ್ದು ತಮಿಳುನಾಡಿನ ಗ್ರಾಮೀಣ ಪ್ರದೇಶದಲ್ಲಿ. ಪ್ರೈಮರಿ, ಹೈಸ್ಕೂಲ್ ಎಲ್ಲ ಸರ್ಕಾರಿ ಶಾಲೆಯ ತಮಿಳು ಮೀಡಿಯಂನಲ್ಲಿ. ಇನ್ನು ಕಾಲೇಜಿನಲ್ಲಿ ಓದುವಾಗಲೇ ಸೀನಿಯರ್ಸ್ ನೋಡಿ ತಾನು ಐಎಎಸ್ ಅಧಿಕಾರಿಯಾಗಲು ತಯಾರಿ ನಡೆಸಬೇಕೆಂದು ನಿರ್ಧರಿಸಿದವರು ಡಾ.ರಾಮ್ ಪ್ರಸಾತ್ ವಿ ಮನೋಹರ್. ಸ್ನಾತಕೋತ್ತರ ಪದವಿಯಲ್ಲಿ ಜೆನೆಟಿಕ್ಸ್ ವಿಷಯವನ್ನು ಆಯ್ಕೆ ಮಾಡಿಕೊಂಡು, ಕಾಲೇಜಿನಲ್ಲಿ ಓದುವಾಗಲೇ ಯುಪಿಎಸ್ಸಿ ಪರೀಕ್ಷೆ ಬರೆಯಲು ಸಿದ್ಧತೆ ಮಾಡಿಕೊಂಡರು. ಬಳಿಕ ಕಾಲೇಜು ಮುಗಿದ ತಕ್ಷಣವೇ ಪರೀಕ್ಷೆಗೆ ತಯಾರಿ ಹೆಚ್ಚಿತು.
ನಾಲ್ಕನೇ ಪ್ರಯತ್ನದಲ್ಲಿ ಯಶಸ್ವಿ
ಮೊದಲಿನಿಂದಲೂ ಓದಿನಲ್ಲಿ ಮುಂಚೂಣಿಯಲ್ಲಿದ್ದ ರಾಮ್ ಪ್ರಸಾತ್ ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆ ಬರೆದ ಮೊದಲ ಸಲ, ಸಂದರ್ಶನದ ಹಂತದವರೆಗೂ ಹೋದರು. ಆದರೆ ಎರಡನೇ ಪ್ರಯತ್ನದಲ್ಲಿ IRS, ಹಾಗೆಯೇ ಮೂರನೇ ಪ್ರಯತ್ನದಲ್ಲಿ ಐಪಿಎಸ್ ಸಿಕ್ಕಿತ್ತು. ನಾಲ್ಕನೇ ಪ್ರಯತ್ನದಲ್ಲಿ 97ನೇ ರ‍್ಯಾಂಕ್ ಪಡೆಯುವ ಮೂಲಕ ಐಎಎಸ್ ಅಧಿಕಾರಿ ಆದರು. ಐಎಎಸ್ ಅಧಿಕಾರಿಯಾಗುವ ಮುನ್ನ ವೆಟರ್ನರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ, ಆ ನಂತರ ತಮಿಳುನಾಡಿನಲ್ಲಿ ವೆಟರ್ನರಿ ವೈದ್ಯರಾಗಿ ಕೆಲಸ ಮಾಡಿದ್ದಾರೆ ರಾಮ್ ಪ್ರಸಾತ್.
ಈ ಸಮಯದಲ್ಲಿ ಓದಿ
“ನಾನು ಕಚೇರಿ ಕೆಲಸ ಮಾಡುತ್ತಲೇ ಪರೀಕ್ಷೆಗೆ ಓದಿದ್ದು. 8 ಗಂಟೆಗಳ ಕಾಲ ಓದುತ್ತಿದ್ದೆ. ಬೆಳಗ್ಗೆ-ರಾತ್ರಿ ಓದಿಕೊಂಡು ಕೆಲಸ ಮಾಡಿದ್ದು. ಕೋಚಿಂಗ್ಗೆ ಹೋಗಲಿಲ್ಲ. ಆದರೆ ಸಮಯ ಸಿಕ್ಕಾಗಲೆಲ್ಲಾ ಮಾಕ್ ಟೆಸ್ಟ್ಗಳನ್ನು ಎದುರಿಸುತ್ತಿದ್ದೆ. ಯಾವಾಗಲೂ ವಿದ್ಯಾರ್ಥಿಗಳು ಸಿದ್ಧತೆಯನ್ನು ಕಾಲೇಜು ಓದುವಾಗಲೇ ಶುರು ಮಾಡಬೇಕು. ವಿದ್ಯಾರ್ಥಿಗಳಿಗೆ ಓದುವ ಸಮಯದಲ್ಲಿ ಹೆಚ್ಚು ಸಮಯ ಸಿಗುತ್ತದೆ. ಆರ್ಥಿಕವಾಗಿ ಕೂಡ ಹೆಚ್ಚು ಹೊರೆಯಾಗುವುದಿಲ್ಲ. ಆಗ ನೀವು ಹಾಸ್ಟೆಲ್ನಲ್ಲಿ ಉಳಿದಿರುತ್ತೀರಿ. ಪುಸ್ತಕ, ಲೈಬ್ರರಿ ಹೀಗೆ ಒಳ್ಳೆಯ ವಾತವರಣ ಸಿಗುತ್ತದೆ. ಆದರೆ ಕಾಲೇಜು ಮುಗಿದ ನಂತರ ಪ್ರತ್ಯೇಕ ವಸತಿ ಮಾಡಿ ಓದುವುದರಿಂದ ಹೆಚ್ಚು ಖರ್ಚಾಗುತ್ತದೆ. ಹಳ್ಳಿಯಲ್ಲಿ ಇದ್ದವರಿಗೆ ಇದಕ್ಕೆಲ್ಲಾ ಅವಕಾಶ ಸಿಗುವುದಿಲ್ಲ. ಆದರೆ ಇತ್ತೀಚೆಗೆ ಆನ್ಲೈನ್ ಬಂದಿರುವುದರಿಂದ ಇದೆಲ್ಲಾ ದೊಡ್ಡ ಸಮಸ್ಯೆ ಅನಿಸುವುದಿಲ್ಲ. ಆದರೆ ನನ್ನ ಪ್ರಕಾರ ಅಭ್ಯರ್ಥಿಗಳು ಕಾಲೇಜಿನಲ್ಲಿ ಓದುವಾಗಲೇ ಶುರು ಮಾಡಬೇಕು. ಆಗ ಹೆಚ್ಚು ಅನುಕೂಲವಾಗುತ್ತದೆ” ಎಂಬುದು ರಾಮ್ ಪ್ರಸಾತ್ ಇಂಗಿತ.
ದಿನಪತ್ರಿಕೆಗಳ ಪಾತ್ರ
ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರು ದಿನನಿತ್ಯ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳಬೇಕು. ಅಂದರೆ ಓದು ಕೂಡ ದಿನನಿತ್ಯ ಚಟುವಟಿಕೆಗಳಲ್ಲಿ ಒಂದಾಗಿರಬೇಕು. ಪತ್ರಿಕೆಗಳನ್ನು ಓದಬೇಕು. ಐಎಎಸ್ ಬರೆಯುವಾಗ ಕಾಲೇಜಿನಲ್ಲಿ ಓದುವ ವಿಷಯವನ್ನೇ ಆಯ್ಕೆ ಮಾಡಿಕೊಳ್ಳಬಹುದು ಅಥವಾ ಓದಿದ ವಿಷಯದ ಬಗ್ಗೆ ಅಷ್ಟು ಆತ್ಮವಿಆಶ್ವಾಸವಿಲ್ಲದಿದ್ದರೆ ಬೇರೆ ಯಾವುದಾದರೂ ಐಚ್ಛಿಕ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿರುವ ರಾಮ್ ಪ್ರಸಾತ್, ಇದರ ಜತೆಗೆ ಇಂಗ್ಲಿಷ್ ಕೌಶಲ್ಯವನ್ನು ಕೂಡ ಅಭಿವೃದ್ಧಿಪಡಿಸಿಕೊಳ್ಳಬೇಕು. ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಹವನ ಕಲೆ ಬಹಳ ಬಹಳ ಮುಖ್ಯ. ಅದನ್ನು ಬೇರೆಯವರಿಗೆ ಅರ್ಥ ಮಾಡಿಸುವ ರೀತಿ ಕೂಡ ಕಲಿಯಬೇಕು. ಒಟ್ಟಾರೆ ವ್ಯಕ್ತಿತ್ವದ ಬೆಳವಣಿಗೆಯನ್ನು ಸುಧಾರಿಸಿಕೊಳ್ಳಬೇಕೆಂದಿದ್ದಾರೆ.
ಹೀಗಿತ್ತು ಸಿದ್ಧತೆ…
“ಈಗಾಗಲೇ ಯಾರಾದರೂ ಈ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರೆ, ಯುಪಿಎಸ್ಸಿಯಲ್ಲಿ ಉತ್ತೀರ್ಣರಾದವರು ಪರಿಚಯವಿದ್ದರೆ ಅವರ ಜೊತೆ ಓದಬೇಕು. ಆಗ ಉತ್ತಮ ಮಾಗದರ್ಶನ ಸಿಗುತ್ತದೆ. ಯಾರೂ ಸಿಗದಿದ್ದರೆ ಪತ್ರಿಕೆಗಳಲ್ಲಿ ಬರುವ ಯುಪಿಎಸ್ಸಿ ಸಾಧಕರ ವಿಷಯಗಳನ್ನು ಓದಿಕೊಂಡು ಪರೀಕ್ಷೆಗೆ ತಯಾರಿ ನಡೆಸಬೇಕು. ನನಗೂ ಕೂಡ ಪರೀಕ್ಷೆಗೆ ಸಿದ್ಧತೆ ನಡೆಸಲು ಜತೆಗೆ ಯಾರೂ ಇರಲಿಲ್ಲ. ನಮ್ಮ ಸೀನಿಯರ್ಸ್ ಇದಕ್ಕೆ ಸಿದ್ಧತೆ ನಡೆಸುತ್ತಿದ್ದರು. ಅವರ ಜತೆ ಸೇರಿಕೊಂಡು ಸಿದ್ಧತೆ ಮಾಡಿಕೊಂಡೆವು. ನಿಯತಕಾಲಿಕೆಗಳಲ್ಲಿ ಸಾಧಕರು ಹಂಚಿಕೊಂಡ ಅನುಭವಗಳನ್ನು ಉಪಯೋಗಿಸಿಕೊಂಡು ಮುಂದೆಬಂದೆವು’’.
ಸ್ವಯಂ ಅರಿವು, ಸಾಮಾನ್ಯ ಅರಿವು
ಯಾವುದೇ ಪರೀಕ್ಷೆಯಿರಬಹುದು ಸಾಮಾನ್ಯ ಜ್ಞಾನ ಬಹಳ ಮುಖ್ಯ. ಮೂಲ ವಿಷಯಗಳಿಗೆ ಶಾಲಾ ಪಠ್ಯಗಳನ್ನೇ ಓದಿದರೆ ಸಾಕು. ಪ್ರಚಲಿತ ಘಟನೆಗಳಿಗೆ ಇಂಗ್ಲಿಷ್ ಸೇರಿದಂತೆ ಪ್ರಾದೇಶಿಕ ಭಾಷೆಗಳ ಗುಣಮಟ್ಟದ ಪತ್ರಿಕೆಗಳು, ಸಾಪ್ತಹಿಕ, ಮಾಸಿಕ ನಿಯತಕಾಲಿಕೆಗಳನ್ನೂ ಓದಬೇಕು. ಪ್ರತಿಯೊಂದು ಕ್ಷೇತ್ರದಲ್ಲಿ ಏನೂ ನಡೆಯುತ್ತಿದೆ ಅದನ್ನ ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರ ನಾವೊಂದು ಒಳ್ಳೆಯ ಪರೀಕ್ಷೆ ತಯಾರಿ ನಡೆಸಲು ಸಾಧ್ಯ. ಸ್ವಯಂ ಅರಿವು, ಸಾಮಾನ್ಯ ಅರಿವು ಬಹಳ ಮುಖ್ಯವೆನ್ನುತ್ತಾರೆ ಡಾ.ರಾಮ್ ಪ್ರಸಾತ್.