Success Story | ಐಎಎಸ್ ಆಗಲು 'ಪೃಥ್ವಿ' ಸಿನಿಮಾ ಪ್ರೇರಣೆ!

IAS Dr. Akash S
Published on

ಅಲ್ಪತೃಪ್ತಿಗಳನ್ನು ತ್ಯಾಗ ಮಾಡಿ ಓದಿದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ಇದಕ್ಕೆ ಪೂರಕವಾಗುವಂತೆ ಪಾಲಕರು ಕಲಿಕಾ ಹಂತದಲ್ಲಿ ವಿದ್ಯಾರ್ಥಿಗಳನ್ನು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುವುದರ ಜತೆಗೆ ಓದುವ ವಾತಾವರಣ ಕಲ್ಪಿಸಬೇಕು ಎಂದು ಮಾತು ಆರಂಭಿಸಿದ 2019ರ ಬ್ಯಾಚ್​ನಲ್ಲಿ 78ನೇ ರ‍್ಯಾಂಕ್ ಪಡೆದ ಐಎಎಸ್​ ಅಧಿಕಾರಿ ಡಾ.ಆಕಾಶ್​ ಎಸ್​ ಅವರು ವಿದ್ಯಾರ್ಥಿ ಉದ್ಯೋಗ ಮಿತ್ರದ ಗೆಸ್ಟ್​ ಆಗಿ ತಮ್ಮ ಅನುಭವ ಹಂಚಿಕೊಳ್ಳುವುದರ ಜತೆಗೆ ಸ್ಪರ್ಧಾತ್ಮಕ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

ರುದ್ರಯ್ಯ ಎಸ್​.ಎಸ್​, ಬೆಂಗಳೂರು

ಪ್ರಸ್ತುತ ಕೊಡಗು ಜಿಲ್ಲೆಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ.ಆಕಾಶ್​ ಎಸ್​ ಅವರು ಮೂಲತಃ ಮೈಸೂರಿನವರಾಗಿದ್ದು, 1 ರಿಂದ 9ನೇ ತರಗತಿವರೆಗೂ ಮಡಿವಾಳಪ್ಪ ಶಾಲೆಯಲ್ಲಿ ಓದಿದ್ದಾರೆ. ತಂದೆ ಶಂಕರ್​ ರೈಲ್ವೆ ಇಲಾಖೆಯಲ್ಲಿ ಗ್ರೂಪ್​ ಡಿ ನೌಕರರಾಗಿದ್ದರು. ತಾಯಿ ಗೃಹಿಣಿ. ತಮ್ಮ ಇಂಜಿನಿಯರ್​. ತಂದೆಯ ಕೆಲಸದ ನಿಮಿತ್ತ ಕುಟುಂಬ ಸಮೇತ ಬೆಂಗಳೂರಿಗೆ ಶಿಫ್ಟ್​ ಆದ ನಂತರ ಎಸ್​ಎಸ್​ಎಲ್​ಸಿಯಲ್ಲಿ ಶೇ.95 ಅಂಕದ ಜತೆಗೆ ಗಣಿತದಲ್ಲಿ ಶೇ.100 ರಷ್ಟು ಹಾಗೂ ಎಂಸಿಎಸ್​ ಕಾಲೇಜ್​ನಲ್ಲಿ ಶೇ.91ರಷ್ಟು ಅಂಕ ಗಳಿಸುವುದರೊಂದಿಗೆ ಪಿಯುಸಿ ಪೂರ್ಣಗೊಳಿಸಿದರು. 2013ರಲ್ಲಿ ಬೆಂಗಳೂರು ಮೆಡಿಕಲ್​ ಕಾಲೇಜ್​ನಲ್ಲಿ ಬಿಎಂಸಿ ಪದವಿ ಪಡೆದಿದ್ದಾರೆ.

ಸರ್​ಎಂವಿ ಮತ್ತು ಪುನೀತ್​ "ಪೃಥ್ವಿ" ಸಿನಿಮಾ ಪ್ರೇರಣೆ

ಮೈಸೂರು ದಿವಾನ್​ ಆಗಿದ್ದ ಸರ್​. ಎಂ ವಿಶ್ವೇಶ್ವರಯ್ಯ ಅವರ ರೀತಿಯಲ್ಲಿಯೇ ಸರ್ಕಾರದ ಸಿಎಸ್​ ಆಗಬೇಕೆಂಬ ಇಚ್ಛೆಯಿತ್ತು. ಇದಕ್ಕೆ ಶಾಲೆಯ ಶಿಕ್ಷಕರು ತಮ್ಮ ಹೊಗಳಿಕೆಯಿಂದ ಇಂಬು ನೀಡಿದ ಕಾರಣ ಯುಪಿಎಸ್​ಸಿ ಕಡೆಗೆ ಒಲವು ಬೆಳೆಯಿತು. ಇದಕ್ಕೆ ಪುಷ್ಠಿ ನೀಡುವಂತೆ 2011ರಲ್ಲಿ ಗೆಳೆಯರೊಂದಿಗೆ ಪುನೀತ್​ ರಾಜ್​ಕುಮಾರ್​ ಅವರ ಪೃಥ್ವಿ ಚಿತ್ರ ನೋಡಿದಾಗ ಐಎಎಸ್​ ಅಂದರೇ ಈ ರೀತಿ ಇರಬೇಕು ಎಂದು ನಿರ್ಧರಿಸಿದೆ. ಸರಿಯಾಗಿ 10 ವರ್ಷಕ್ಕೆ ಅಂದರೇ 2021ರಲ್ಲಿ ಬಳ್ಳಾರಿಗೆ ಎಸಿ ಆಗಿ ನೇಮಕವಾದೆ ಎಂದು ಡಾ.ಆಕಾಶ್​ ಅವರು ತಮ್ಮ ಸಂತಸದ ಕ್ಷಣಗಳನ್ನು ಹಂಚಿಂಕೊಂಡರು.

ಮೆಡಿಕಲ್​ ಕೆಲಸ, ಸರ್ಕಾರದ ಸಹಾಯ

ಓದಲು ಆರ್ಥಿಕ ಸಮಸ್ಯೆಯಿದ್ದ ಕಾರಣ ಮತ್ತು ಪದವಿ ಮುಗಿದ ನಂತರ ಸ್ವಂತ ದುಡಿಮೆಗಾಗಿ ಮೆಡಿಕಲ್​ ಆಫೀಸರ್​ ಆಗಿ ಕೆಲಸ ಮಾಡಿದ್ದೇನೆ ಎಂದು ಕಷ್ಟದ ದಿನಗಳನ್ನು ನೆನೆದ ಡಾ.ಆಕಾಶ್​, ಯುಪಿಎಸ್​ಸಿ ತರಬೇತಿಗಾಗಿ ಒಬಿಸಿ ಇಲಾಖೆ ನಡೆಸುವ ಪರೀಕ್ಷೆ ಪಾಸ್​ ಆಗಿದ್ದರಿಂದ ಕರ್ನಾಟಕ ಸರ್ಕಾರದ ನೆರವಿನಿಂದಾಗಿ ದೆಹಲಿಯ ಎಎಲ್​ಎಸ್​ನಲ್ಲಿ 9 ತಿಂಗಳು ಕೋಚಿಂಗ್​ ತೆಗೆದುಕೊಂಡೆ. ದೆಹಲಿ ಕೋಚಿಂಗ್​ ನಂತರವೂ ಬೆಂಗಳೂರಿನ ಕೋಚಿಂಗ್​ ಕ್ಲಾಸ್​ನಲ್ಲಿ ಉಪನ್ಯಾಸ ನೀಡಿದ್ದೇನೆ ಎಂದರು.

ಪದವಿ ನಂತರ ಪರೀಕ್ಷೆ ತಯಾರಿ

ಮೆಡಿಕಲ್​ ಕೋರ್ಸ್​ ಓದುವಾಗ ಬೇರೆ ಓದುವುದು ಸೂಕ್ತವಲ್ಲವಾದ್ದರಿಂದ. 2013ರ ನಂತರ ಯುಪಿಎಸ್​ಸಿ ಪರೀಕ್ಷೆಗೆ ತಯಾರಿ ನಡೆಸಿದೆ. ಪುಸ್ತಕ, ಮ್ಯಾಗಜಿನ್​ ಜತೆಗೆ ಇನ್​ಸೈಟ್​ ಮತ್ತು ಐಎಎಸ್​ ಬಾಬಾ ವೆಬ್​ಸೈಟ್​ ಪರಿಶೀಲಿಸುತ್ತಿದೆ ಎಂದ ಡಾ.ಆಕಾಶ್​, ಮೇನ್ಸ್​ ತಯಾರಿ ಹೇಗೆ ಮಾಡಬೇಕೆಂಬ ಪ್ರಶ್ನೆಗೆ? ಪ್ರೀಲಿಮ್ಸ್​ & ಮೇನ್ಸ್​ ಮಧ್ಯೆ 4 ತಿಂಗಳು ಸಮಯವಿರುತ್ತದೆ. ಒಟ್ಟು 1750 ಅಂಕಗಳ ಮುಖ್ಯ ಪರೀಕ್ಷೆ ಬರೆಯಲು ಹೆಚ್ಚಿನ ಅಭ್ಯಾಸ ಬೇಕೆ ಬೇಕು. ಓದಿನ ಜತೆಗೆ ಅತಿ ಹೆಚ್ಚು ಬರೆಯುವುದನ್ನು ರೂಢಿಸಿಕೊಳ್ಳಬೇಕು ಎಂದು ಉತ್ತರಿಸಿದರು.

6ನೇ ಪ್ರಯತ್ನದಲ್ಲಿ ತೇರ್ಗಡೆ

2013ರ ಮೊದಲ ಪ್ರಯತ್ನ ಹಾಗೂ 2ನೇ ಪ್ರಯತ್ನದಲ್ಲಿ ಪ್ರೀಲಿಮ್ಸ್​ ಸಹ ಪಾಸ್​ ಆಗಲಿಲ್ಲ. ನಂತರದ 3ಪ್ರಯತ್ನಗಳು ಯಶಸ್ವಿಯಾದರೂ ಐಎಎಸ್​ ಸಿಗದ ಕಾರಣ ಸಿಕ್ಕಿದ್ದನ್ನು ತ್ಯಜಿಸಿದೆ. 100ರೊಳಗೆ ರ್ಯಾಂಕ್​ ಇದ್ದರೆ ಮಾತ್ರ ಐಎಎಸ್​ ಹುದ್ದೆ ಅಲಂಕರಿಸಬಹುದೆಂದು ಮರಳಿ 2019ರಲ್ಲಿ ಇದು ಕೊನೆಯ ಪ್ರಯತ್ನವೆಂದು 6ನೇ ಬಾರಿ ಯುಪಿಎಸ್​ಸಿ ಬರೆದಾಗ ದೇಶಕ್ಕೆ 78ನೇ ರ‍್ಯಾಂಕ್ ​ ಪಡೆದೆ. ಇದಕ್ಕೂ ಮೊದಲು 2017ರಲ್ಲಿ 13ನೇ ರ‍್ಯಾಂಕ್ ಬರುವ ಮೂಲಕ ಕೆಪಿಎಸ್​ಸಿ ಕ್ಲಿಯರ್​ ಮಾಡಿ ತುಮಕೂರನಲ್ಲಿ ಪ್ರೊಬೇಷನರಿ ಪ್ರಾರಂಭಿಸಿದ್ದೆ ಎಂದು ಡಾ.ಆಕಾಶ್​ ಖುಷಿ ವ್ಯಕ್ತಪಡಿಸಿದರು.

ಕನ್ನಡದಲ್ಲಿಯೂ ಸಂದರ್ಶನ ನೀಡಬಹುದು

ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅಪಾರ ಜ್ಞಾನ ಮತ್ತು ಅನುಭವವುಳ್ಳ 5 ಜನ ಸಂದರ್ಶಕರ ಎದುರಿಗೆ ಕುಳಿತುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಇಲ್ಲಿ ವಿಷಯಗಳ ಕುರಿತು ಅಭ್ಯರ್ಥಿಯ ಅಭಿಪ್ರಾಯ, ಅನಿಸಿಕೆ ತಿಳಿದುಕೊಳ್ಳುತ್ತಾರೆ. ಕನ್ನಡದಲ್ಲಿಯೂ ಸಂದರ್ಶನ ನೀಡಬಹುದು. ಆದರೆ ನಮ್ಮಿಬ್ಬರ ನಡುವೆ ಭಾಷಾ ಅನುವಾದಕ ಇರುವುದರಿಂದ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗದು. ಹಾಗಾಗಿ ಇಂಗ್ಲೀಷ್​​ನಲ್ಲಿಯೇ ಸಂದರ್ಶನ ನೀಡಿದರೆ ಹೆಚ್ಚು ಉತ್ತಮ ಎಂದು ಸಂದರ್ಶನದಲ್ಲಿ 275ಕ್ಕೆ 204 ಅಂಕ ಪಡೆಯುವ ಮೂಲಕ 2019ರ ಬ್ಯಾಚ್​ನಲ್ಲಿ ಇಡೀ ದೇಶಕ್ಕೆ 2ನೇ ರ‍್ಯಾಂಕ್ ​ಪಡೆದುಕೊಂಡ ಡಾ.ಆಕಾಶ್​ ಸೂಚನೆ ನೀಡಿದರು.

ವಿದ್ಯಾರ್ಥಿಗಳಿಗೆ ಸಲಹೆ

ಪ್ರತಿ ವರ್ಷ ಕನಿಷ್ಠ 10 ಲಕ್ಷ ಅಭ್ಯರ್ಥಿಗಳು ಯುಪಿಎಸ್​ಸಿ ಪರೀಕ್ಷೆ ಕಟ್ಟುತ್ತಾರೆ. 10 ಲಕ್ಷ ಜನ ಮುಂದಿನ ವರ್ಷಕ್ಕೆ ತಯಾರಿ ನಡೆಸುತ್ತಿರುತ್ತಾರೆ. ನಮಗೆ ಒಟ್ಟು 20ಲಕ್ಷ ಸ್ಪರ್ಧಾರ್ಥಿಗಳೆಂದು ತಿಳಿದು ತಯಾರಿ ನಡೆಸಬೇಕು. 20ಲಕ್ಷದಲ್ಲಿ 180 ಅಭ್ಯರ್ಥಿಗಳಿಗೆ ಮಾತ್ರ ಐಎಎಸ್​ ಹುದ್ದೆ ಸಿಗುತ್ತದೆ. ಆದ್ದರಿಂದ ಕೇವಲ ಹಾರ್ಡ್​ ಆ್ಯಂಡ್​ ಸ್ಮಾರ್ಟ್​ ವರ್ಕ್​ ಮಾಡಿದರೆ ಸಾಲದು ತಪಸ್ಸಿನ ರೀತಿಯಲ್ಲಿ ಓದಲು ಸಿದ್ಧರಾಗಬೇಕು. ಓದುವ ಹಂತದಲ್ಲಿ ಮಾಹಿತಿ ಸಂಗ್ರಹಕ್ಕೆ ಅನುಕೂಲವಾಗುವ ಮನರಂಜನೆ ಹೊರತುಪಡಿಸಿ ಕ್ಷಣಿಕ ಸುಖಗಳನ್ನು ತ್ಯಜಿಸಬೇಕು ಎಂದು ಸಲಹೆ ನೀಡಿದ ಡಾ.ಆಕಾಶ್​, ಇಷ್ಟೆಲ್ಲಾ ಮಾಡಿದರೂ ಪಾಸ್​ ಆಗದಿದ್ದರೆ ಹೆಚ್ಚಿನ ತಪಸ್ಸು ಮಾಡಬೇಕು. ಒಟ್ಟಿನಲ್ಲಿ ಗುರಿ ಸಾಧಿಸುವುದೇ ನಮ್ಮ ಧ್ಯೇಯವಾಗಿರಬೇಕು ಎಂದರು.

ವೃತ್ತಿ ಅನುಭವ

2109ರ ಆಗಸ್ಟ್​ನಲ್ಲಿ ಡೆಹಾರಾಡೂನ್​ನ ಮಸೂರಿಯಲ್ಲಿ ವೃತ್ತಿ ತರಬೇತಿ ಹಾಗೂ ಕಲಬುರಗಿಯಲ್ಲಿ ಜಿಲ್ಲಾ ತರಬೇತಿಗೆ ಪಡೆದ ನಂತರ ಬಳ್ಳಾರಿಗೆ ಎಸಿಯಾಗಿ ನೇಮಕವಾದೆ. ಸ್ವಾತಂತ್ರ ಪಡೆದು ಇಷ್ಟು ವರ್ಷಗಳಾದರೂ ಭೂಕಂದಾಯ ದಾಖಲೆಗಳೇ ಇರದ ಸಂಡೂರಿನಲ್ಲಿ ಸೆಟಲ್ಮೆಂಟ್​ ಆದ 14 ಗ್ರಾಮಗಳ ಜನರಿಗೆ ಡಿಸಿ ಪವನ್​ಕುಮಾರ್​ ನೇತೃತ್ವದಲ್ಲಿ ಸಹಾಯ ಮಾಡಿರುವುದು ಸ್ಮರಣೀಯ ಕೆಲಸವಾಗಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಅವರಿಗೆ ಸಹ ಪತ್ರ ದೊರೆಯಲಿವೆ. ಕಚೇರಿಯಲ್ಲಿ ಜನರು ತಾಳ್ಮೆಯಿಂದ ವರ್ತಿಸುತ್ತಾರೆ. ಕರ್ನಾಟಕದಲ್ಲಿ ಒಳ್ಳೆಯ ಕೆಲಸಗಳಿಗೆ ನಾಯಕರು ಸಹ ಸಹಾಯ ಮಾಡುತ್ತಾರೆ ಎಂದು ಡಾ.ಆಕಾಶ್​ ಸೇವಾ ಅನುಭವ ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net