

ನವದೆಹಲಿ: ಪೊಲೀಸ್ ಕಸ್ಟಡಿಯಲ್ಲಿ ನಡೆಯುವ ಕಿರುಕುಳವನ್ನು ತಡೆಗಟ್ಟುವ ದೃಷ್ಟಿಯಿಂದ ದೇಶದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಜೊತೆಗೇ, ಸಿಬಿಐ, ಇಡಿ, ಎನ್ಐಎ ಮುಂತಾದ ಕೇಂದ್ರೀಯ ತನಿಖಾ ಸಂಸ್ಥೆಗಳ ಕಛೇರಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಅಗತ್ಯವಿರುವ ಹಣಕಾಸು ಮತ್ತು ಕಾಲಾವಧಿಯ ವಿವರವನ್ನು ಆದಷ್ಟು ಬೇಗ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.
ಪೊಲೀಸ್ ಲಾಕ್ಅಪ್ ಸೇರಿದಂತೆ ಪೊಲೀಸ್ ಠಾಣೆಗಳ ಹಲವಾರು ಭಾಗಗಳಲ್ಲಿ ನೈಟ್ ವಿಷನ್ ಮತ್ತು ಆಡಿಯೊವೀಡಿಯೋ ಎರಡನ್ನೂ ದಾಖಲಿಸುವ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಕಸ್ಟಡಿಯಲ್ಲಿ ಕಿರುಕುಳ ಅನುಭವಿಸಿದ ವ್ಯಕ್ತಿಗಳು ಈ ಸಿಸಿಟಿವಿ ಫೂಟೇಜನ್ನು ಪಡೆಯುವ ಅವಕಾಶ ಹೊಂದಿದ್ದು, ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ವಿವಿಧ ಪ್ರಾಧಿಕಾರ ಮತ್ತು ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಲು ಇದನ್ನು ಬಳಸಬಹುದಾಗಿದೆ. ಆದ್ದರಿಂದ ಕನಿಷ್ಠ ಆರು ತಿಂಗಳವರೆಗೆ ಈ ಸಿಸಿಟಿವಿಗಳ ರೆಕಾರ್ಡಿಂಗ್ಅನ್ನು ದಾಖಲಿಸಿಡುವ ವ್ಯವಸ್ಥೆ ಕೂಡ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.
ಪೊಲೀಸ್ ಕಸ್ಟಡಿಯಲ್ಲಿ ಕಿರುಕುಳದ ಬಗ್ಗೆ ಚರ್ಚೆಯಾಗುತ್ತಿರುವ ಪ್ರಕರಣವೊಂದರಲ್ಲಿ ನ್ಯಾಯಮೂರ್ತಿಗಳಾದ ಆರ್.ಎಫ್.ನಾರಿಮನ್, ಕೆ.ಎಂ.ಜೋಸೆಫ್ ಮತ್ತು ಅನಿರುದ್ಧ ಬೋಸ್ ಅವರ ವಿಭಾಗೀಯ ಪೀಠವು ಇಂದು ಈ ಆದೇಶ ಹೊರಡಿಸಿದೆ. ಕರ್ನಾಟಕವೂ ಸೇರಿದಂತೆ ಬಹುತೇಕ ರಾಜ್ಯಗಳು ಒಂದು ತಿಂಗಳೊಳಗೆ ಬಜೆಟ್ನಲ್ಲಿ ಈ ಕೆಲಸಕ್ಕೆ ಹಣಕಾಸಿನ ವ್ಯವಸ್ಥೆ ಮಾಡಿ, ತದನಂತರ 4 ತಿಂಗಳೊಳಗೆ ಅಳವಡಿಕೆಯ ಕಾರ್ಯ ಪೂರೈಸಲು ನ್ಯಾಯಪೀಠ ನಿರ್ದೇಶಿಸಿದೆ.
ದೊಡ್ಡ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಕ್ಕೆ ಕ್ರಮವಾಗಿ 9 ತಿಂಗಳ ಮತ್ತು 8 ತಿಂಗಳ ಹೆಚ್ಚಿನ ಕಾಲಾವಕಾಶ ನೀಡಲಾಗಿದೆ. ಚುನಾವಣೆ ನಡೆಯಲಿರುವ 5 ರಾಜ್ಯಗಳಿಗೆ ಮಾತ್ರ ವರ್ಷಾಂತ್ಯದವರೆಗೆ ಕಾಲಾವಕಾಶ ನೀಡಲಾಗಿದೆ. ಈ ಬಗ್ಗೆ ವಿವಿಧ ರಾಜ್ಯ ಸರ್ಕಾರಗಳು ನೀಡಿದ ಪ್ರತಿಕ್ರಿಯೆಗಳನ್ನು ಪರಿಗಣಿಸಿ ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಪೀಠ, ತ್ವರಿತ ಗತಿಯಲ್ಲಿ ಕಾರ್ಯವನ್ನು ಪೂರೈಸಲು ಕಾಲಾವಧಿಯನ್ನು ನಿಗದಿಪಡಿಸಿದೆ.
'ನಿಧಾನ ಪ್ರವೃತ್ತಿ ಏಕೆ?' : ಈ ಸಂದರ್ಭದಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಗಳಾದ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ), ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ), ಎನ್ಫೋರ್ಸ್ಮೆಂಟ್ ಡೈರೆಕ್ಟರೇಟ್(ಇಡಿ) ಮುಂತಾದ ಕಛೇರಿಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸುವಲ್ಲಿ ನಿಧಾನಪ್ರವೃತ್ತಿ ವಹಿಸುತ್ತಿರುವ ಬಗ್ಗೆ ಕೇಂದ್ರ ಸರ್ಕಾರವನ್ನು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು.
ಕಳೆದ ವರ್ಷ ಡಿಸೆಂಬರ್ 2 ರಂದು ಕೋರ್ಟ್ ನೀಡಿದ್ದ ಆದೇಶದಲ್ಲಿ ಈ ಸಂಸ್ಥೆಗಳ ಕಛೇರಿಗಳಲ್ಲಿ ಸಿಸಿಟಿವಿ ಅಳವಡಿಸಿ ಇಂದು ಆದೇಶ ಪಾಲಿಸಿದ ವರದಿಯನ್ನು ಸಲ್ಲಿಸಲು ನ್ಯಾಯಪೀಠ ಹೇಳಿತ್ತು. ಆದರೆ, ಈ ರೀತಿ ಸಿಸಿಟಿವಿ ಅಳವಡಿಸುವುದರ ಪರಿಣಾಮಗಳ ಬಗ್ಗೆ ಚರ್ಚೆ ನಡೆಸಲು ಕಾಲಾವಕಾಶ ಬೇಕೆಂದು ಕಾರಣ ಹೇಳಿ ವಿಚಾರಣೆಯನ್ನು ಮುಂದೂಡಲು ಕೇಂದ್ರ ಸರ್ಕಾರ ಕೋರಿತ್ತು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ ಆರ್.ಎಫ್.ನಾರಿಮನ್, "ಇದು (ಸಂವಿಧಾನದ) ಆರ್ಟಿಕಲ್ 21 ರ ಕೆಳಗೆ ನೀಡಿರುವ ನಾಗರೀಕರ ಹಕ್ಕಿನ ವಿಚಾರ. ನಾವು ಯಾವುದೇ ನೆಪಗಳನ್ನು ಕೇಳಬಯಸುವುದಿಲ್ಲ" ಎಂದರು.
ಕೇಂದ್ರೀಯ ತನಿಖಾ ಕಛೇರಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಎಷ್ಟು ಹಣಕಾಸಿನ ಅಗತ್ಯವಿದೆ ಮತ್ತು ಅಳವಡಿಕೆಯನ್ನು ಪೂರ್ಣಗೊಳಿಸಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದರ ಬಗ್ಗೆ ನಿಖರ ಮಾಹಿತಿಯನ್ನು ಒದಗಿಸಿ 3 ವಾರಗಳೊಳಗೆ ಅಫಿಡವಿಟ್ ಸಲ್ಲಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶನ ನೀಡಿದೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ