

ಮುಂಬೈ: ಟಿಆರ್‌ಪಿ ಹಗರಣ ಪ್ರಕರಣದಲ್ಲಿ ಆರೋಪಿಯಾಗಿರುವ ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್(ಬಿಎಆರ್ಸಿ)ನ ಮಾಜಿ ಸಿಇಒ ಪಾರ್ಥೋ ದಾಸ್‌ಗುಪ್ತ ಅವರಿಗೆ ಬಾಂಬೆ ಹೈಕೋರ್ಟ್ ಇಂದು ಜಾಮೀನು ನೀಡಿದೆ. ರಿಪಬ್ಲಿಕ್ ಟಿವಿ ಸುದ್ದಿ ವಾಹಿನಿಯ ಲಾಭಕ್ಕಾಗಿ ಟಿವಿ ಸುದ್ದಿ ವಾಹಿನಿಗಳ ಟಾರ್ಗೆಟ್ ರೇಟಿಂಗ್ ಪಾಯಿಂಟ್(ಟಿಆರ್‌ಪಿ)ಗಳನ್ನು ಏರುಪೇರು ಮಾಡಿದ ಬಗ್ಗೆ ದಾಖಲಾಗಿರುವ ಪ್ರಕರಣದಲ್ಲಿ ಆರೋಪಿಯಾದ ದಾಸ್‌ಗುಪ್ತ, ಎರಡು ತಿಂಗಳಿಂದ ತಾಲೋಜ ಜೈಲಿನಲ್ಲಿ ಬಂಧಿಯಾಗಿದ್ದಾರೆ.
ಜೂನ್ 2013 ರಿಂದ 2019 ರ ನವೆಂಬರ್ ನಡುವೆ ಬಿಎಆರ್ಸಿ ಸಿಇಒ ಆಗಿದ್ದ ದಾಸ್‌ಗುಪ್ತ ಅವರು, ಮುಂಬೈ ಪೊಲೀಸರು ಅಕ್ಟೋಬರ್ 2020 ರಲ್ಲಿ ನೋಂದಾಯಿಸಿರುವ ಟಿಆರ್‌ಪಿ ಮಾನಿಪುಲೇಷನ್ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಈ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ಣಬ್ ಗೋಸ್ವಾಮಿ ಅವರಿಂದ 12,000 ಡಾಲರ್ ಮತ್ತು 40 ಲಕ್ಷ ರೂ. ನಗದನ್ನು ಪಡೆದು ಅವರ ಚಾನೆಲ್ನ ಟಿಆರ್ಪಿಯನ್ನು ಹೆಚ್ಚಾಗಿ ತೋರಿಸಿದರೆಂದು ಆರೋಪಿಸಲಾಗಿದೆ. 2020ರ ಡಿಸೆಂಬರ್ 24 ರಂದು ದಾಸ್‌ಗುಪ್ತ ಅವರನ್ನು ಬಂಧಿಸಲಾಗಿತ್ತು.
ಕಳೆದ ತಿಂಗಳು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಮುಂಬೈ ಸೆಷನ್ಸ್ ಕೋರ್ಟ್ ಆದೇಶದ ವಿರುದ್ಧ, ದಾಸ್‌ಗುಪ್ತ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ದಾಸ್‌ಗುಪ್ತ ಪರ ವಕೀಲರು ಈ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿರುವ ಬಿಎಆರ್ಸಿಯ ಸಿಒಒ ರೋಮಿಲ್ ರಾಮ್‌ಘಾರಿಯಾ ಸೇರಿದಂತೆ ಇತರ ಎಲ್ಲ ಆರೋಪಿಗಳಿಗೆ ಈಗಾಗಲೇ ಜಾಮೀನು ನೀಡಲಾಗಿದೆ. ಮತ್ತು ತಮ್ಮ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಲಾಗಿದೆ ಎಂದು ವಾದಿಸಿದ್ದರು.
ಮೇಲ್ಮನವಿಯ ವಿಚಾರಣೆ ನಡೆಸಿ, ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಪಿ.ಡಿ.ನಾಯಕ್, 2 ಲಕ್ಷ ರೂ. ನಗದು ಪಾವತಿಯ ಮೇಲೆ ಆರು ವಾರಗಳ ತಾತ್ಕಾಲಿಕ ಜಾಮೀನು ನೀಡುವ ಅವಕಾಶ ನೀಡಿ ಆದೇಶ ಹೊರಡಿಸಿದ್ದಾರೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ