

ಬೆಂಗಳೂರು: ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮೇ 19ರಂದು ಹಿಂಪಡೆದಿದ್ದು, ಆ ನೋಟುಗಳನ್ನು ಬದಲಿಸಿಕೊಳ್ಳಲು ಅವಕಾಶ ನೀಡಿ ಅವಧಿಯನ್ನೂ ನಿಗದಿ ಪಡಿಸಿದೆ.
ಅದರಂತೆ ನಾಳೆಯೇ ರಿಸರ್ವ್ ಬ್ಯಾಂಕ್ನ ಎಲ್ಲ ಪ್ರಾದೇಶಿಕ ಕಚೇರಿ ಹಾಗೂ ಎಲ್ಲ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲೂ ನೋಟು ವಿನಿಮಯ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ನೋಟು ಬದಲಾವಣೆಗೆ ಇದೇ ವರ್ಷದ ಸೆ. 30ರ ವರೆಗೂ ಕಾಲಾವಕಾಶ ಇರಲಿದೆ.
ಆದರೆ ನೋಟು ಬದಲಾವಣೆಗೆ 20 ಸಾವಿರ ರೂ. ಮಿತಿ ಹೊರತಾಗಿ ಬೇರೆ ಏನಾದರೂ ಷರತ್ತುಗಳಿವೆಯೇ? ಎಂಬ ಬಗ್ಗೆ ಜನರಲ್ಲಿ ಗೊಂದಲವಿದ್ದು, ಈ ನಿಟ್ಟಿನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ನಿಲುವನ್ನು ಖಚಿತಪಡಿಸಿದೆ.
ಎರಡು ಸಾವಿರ ರೂಪಾಯಿ ನೋಟು ವಿನಿಮಯ ಎಲ್ಲ ಸಾರ್ವಜನಿಕರಿಗೂ ಅನ್ವಯಿಸಲಿದೆ ಎಂದಿರುವ ಎಸ್ಬಿಐ, ಬ್ಯಾಂಕ್ನಲ್ಲಿ ಖಾತೆ ಇರಲೇಬೇಕು ಎಂದೇನೂ ಇಲ್ಲ ಎಂಬುದನ್ನು ಈ ಮೂಲಕ ತಿಳಿಸಿದೆ. ಅಂದರೆ ಖಾತೆ ಇರದವರು ಬ್ಯಾಂಕ್ನಲ್ಲಿ ಒಮ್ಮೆಗೆ 2 ಸಾವಿರದ ಹತ್ತು ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಖಾತೆ ಇದ್ದವರು ನೋಟು ವಿನಿಮಯ ಮಾಡಿಕೊಳ್ಳಬಹುದು ಇಲ್ಲವೇ ಖಾತೆಗೆ ಹಣ ಜಮಾ ಮಾಡಬಹುದು. ಹಣ ಜಮಾ ಮಾಡುವುದಾದರೆ ಅದಕ್ಕೆ 20 ಸಾವಿರ (2 ಸಾವಿರದ 10 ನೋಟು) ಮಿತಿ ಇರುವುದಿಲ್ಲ.
ಎರಡು ಸಾವಿರ ರೂ. ನೋಟು ವಿನಿಮಯಕ್ಕೆ ಯಾವುದೇ ಗುರುತಿನ ಚೀಟಿ ಬೇಕಾಗಿಲ್ಲ, ರಿಕ್ವಿಸಿಷನ್ ಸ್ಲಿಪ್ ಕೂಡ ಅಗತ್ಯವಿಲ್ಲ ಎಂದು ಎಸ್ಬಿಐ ತನ್ನ ಬ್ಯಾಂಕ್ ಶಾಖೆಗಳಿಗೆ ನೀಡಿರುವ ಪರಿಷ್ಕೃತ ಆಂತರಿಕ ಸೂಚನೆಗಳಲ್ಲಿ ತಿಳಿಸಿವೆ. ಮತ್ತೊಂದೆಡೆ ಈ ಸಂಬಂಧ ಉಳಿದ ಬ್ಯಾಂಕ್ಗಳು ಯಾವ ನಿಲುವು ತಳೆದಿವೆ ಎಂಬುದು ಇನ್ನೂ ಖಚಿತವಾಗಿಲ್ಲ.