Saurabh Bharadwaj | ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್; ಅಂದೇ ಕೇಜ್ರಿವಾಲ್​​ ಎಚ್ಚರಿಸಿದ್ದರು ಎಂದ ಆಪ್​​ ನಾಯಕ ​​ಸೌರಭ್ ಭಾರದ್ವಾಜ್!

Saurabh Bharadwaj
Published on

Saurabh Bharadwaj: ಇಂದು ಬೆಳಿಗ್ಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದ ವಿಪಕ್ಷ ನಾಯಕ ರಾಹುಲ್​​ ಗಾಂಧಿ, ಕರ್ನಾಟಕದ ಆಳಂದ ಮತ್ತು ಮಹಾರಾಷ್ಟ್ರದ ರಾಜೂರ ಕ್ಷೇತ್ರದ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಆರೋಪಿಸಿದ್ದರು.ಸದ್ಯ ಅದೇ ದಾಟಿಯಲ್ಲಿ ಮಾತನಾಡಿರುವ ದೆಹಲಿ ಮಾಜಿ ಸಚಿವ ಸೌರಭ್ ಭಾರದ್ವಾಜ್ ದೆಹಲಿ ವಿಧಾನಸಭಾ ಚುನಾವಣೆಯನ್ನು ಈ ಕೆಲಸ ನಡೆದಿದೆ ಎಂದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರದ್ವಾಜ್​​, 2025 ರ ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ ನವದೆಹಲಿ ಕ್ಷೇತ್ರದಲ್ಲಿ ಸಾಮೂಹಿಕವಾಗಿ ಮತದಾರರ ಹೆಸರನ್ನು ಅಳಿಸಲು ಚುನಾವಣಾ ಆಯೋಗ ಅವಕಾಶ ನೀಡಿದೆ ಎಂದು ಗಂಭೀರ ಆರೋಪ ಮಾಡಿದರು. ಆಮ್​​ ಆದ್ಮಿ ಪಕ್ಷದ ಮತದಾರರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಲಾಗಿದೆ ಎಂದಿದ್ದರು.

ರಾಹುಲ್ ಗಾಂಧಿ ಇಂದು ಹೇಳುತ್ತಿರುವುದನ್ನು, ಅರವಿಂದ್​​ ಕೇಜ್ರಿವಾಲ್​​ ದೆಹಲಿ ಚುನಾವಣೆಗೆ ಮುಂಚೆಯೆ ಹೇಳಿದ್ದರು, 2024 ರ ಡಿಸೆಂಬರ್​​ನಲ್ಲಿ ಕೇವಲ 15 ದಿನಗಳಲ್ಲಿ, ನವದೆಹಲಿಯಲ್ಲಿ ಸುಮಾರು ಶೇ 10% ಹೊಸ ಮತದಾರರನ್ನು ಪಟ್ಟಿಗೆ ಸೇರಿಸಲಾಗಿದೆ ಎಂದು ಎಎಪಿ ಹೇಳಿಕೊಂಡಿದೆ. ಮತಕಳ್ಳತನ ಮತ್ತು ಮತದಾರರ ಪಟ್ಟಿಯ ಸಾಮೂಹಿಕ ಕುಶಲತೆಯ ಬಗ್ಗೆ ಪಾರದರ್ಶಕ ತನಿಖೆಗೆ ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ. ಕಳೆದ 11 ವರ್ಷಗಳಿಂದ ದೇಶಾದ್ಯಂತ ನಕಲಿ ಮತ ಕಡಿತ ನಡೆಯುತ್ತಿದ್ದು, ಪ್ರಜಾಪ್ರಭುತ್ವವನ್ನು ಕೊಲೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ, ಅರವಿಂದ್ ಕೇಜಿವಾಲ್ ಈ ವಿಷಯವನ್ನು ಬಹಿರಂಗಪಡಿಸಿದ ನಂತರ ಇದು ರಾಷ್ಟ್ರದಾದ್ಯಂತ ಚರ್ಚೆಗೆ ನಾಂದಿ ಹಾಡಿತು. ಚುನಾವಣಾ ಆಯೋಗವು ಮತ ಕಡಿತಕ್ಕೆ ಅರ್ಜಿ ಸಲ್ಲಿಸಿದವರನ್ನು ಕರೆಯುವುದಾಗಿ ಘೋಷಿಸಿತು. ಸಭೆಯಲ್ಲಿ, 11 ಜನರು ಮುಂದೆ ಬಂದು ಯಾರ ಮತ ಕಡಿತಗೊಳಿಸುವಂತೆ ಮನವಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ನಮ್ಮ ದೂರುಗಳ ಹೊರತಾಗಿಯೂ, ಆಗಿನ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಯಾವುದೇ ತನಿಖೆ ನಡೆಸಲಿಲ್ಲ ಮತ್ತು ಕ್ರಮ ಕೈಗೊಳ್ಳಲಿಲ್ಲ, ಬದಲಿಗೆ ಕಳಪೆ ಕವಿತೆಯನ್ನು ವಾಚಿಸಿದರು ಎಂದು ಭಾರದ್ವಾಜ್​​ ವ್ಯಂಗ್ಯವಾಡಿದರು.

ರಾಹುಲ್ ಗಾಂಧಿ ಆರೋಪವೇನು ?

ಚುನಾವಣಾ ಆಯೋಗದ ಆಯುಕ್ತ ಜ್ಞಾನೇಶ್ ಕುಮಾರ್ ಮತ ದೋಚುವವರಿಗೆ ಮತ್ತು ಭಾರತದ ಪ್ರಜಾಪ್ರಭುತ್ವವನ್ನು ನಾಶಪಡಿಸಿದವರ ರಕ್ಷಣೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ ರಾಹುಲ್​, ಕರ್ನಾಟಕದ ಆಳಂದ ಮತ್ತು ಮಹಾರಾಷ್ಟ್ರದ ರಾಜೂರ ಕ್ಷೇತ್ರಗಳ ಉದಾಹರಣೆಗಳನ್ನು ಉಲ್ಲೇಖ ಮಾಡಿ, ಸಾಫ್ಟ್‌ವೇರ್ ಬಳಸಿ ದೇಶಾದ್ಯಂತ ಮತದಾರರ ಪಟ್ಟಿಯಿಂದ ಹೆಸರುಗಳನ್ನು ವ್ಯವಸ್ಥಿತವಾಗಿ ತೆಗೆದು ಹಾಕಲಾಗುತ್ತಿದೆ ಎಂದು ಆರೋಪಿಸಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net