

Rahul Gandhi: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಚುನಾವಣಾ ಆಯೋಗದ ವಿರುದ್ಧದ ಸಮರವನ್ನು ಮುಂದುವರೆಸಿದ್ದು, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್, ಆಯೋಗ ಮತದಾರರ ಹೆಸರನ್ನು ಅಳಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿಯವರ ಆರೋಪಗಳನ್ನು ತಳ್ಳಿಹಾಕಿರುವ ಚುನಾವಣಾ ಆಯೋಗ, ಇದು ಆಧಾರರಹಿತ ಆರೋಪ ಎಂದು ಕರೆದಿದ್ದು, ಆನ್‌ಲೈನ್‌ನಲ್ಲಿ ಯಾವುದೇ ಮತಗಳನ್ನು ಅಳಿಸಲು ಸಾಧ್ಯವಿಲ್ಲ, ಯಾವುದೇ ವ್ಯಕ್ತಿಯ ಅನುಮತಿ ಪಡೆಯದೇ, ಸೂಚನೆ ನೀಡದೆ ಯಾರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲು ಸಾಧ್ಯವಿಲ್ಲ ಎಂದು ಹೇಳಿದೆ. ರಾಜ್ಯದ ಕಲಬುರ್ಗಿ ಜಿಲ್ಲೆಯ ಆಳಂದ್ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಹೆಸರನ್ನು ತೆಗೆಯುವ ಕೆಲವು ವಿಫಲ ಪ್ರಯತ್ನಗಳು ನಡೆದಿರುವುದನ್ನು ಒಪ್ಪಿಕೊಂಡ ಆಯೋಗ, ಈ ವಿಷಯದ ಬಗ್ಗೆ ತನಿಖೆ ನಡೆಸಲಾಗಿದೆಯೆ ಎಂದು ತಿಳಿಯಲು ಸ್ವತಃ ಎಫ್‌ಐಆರ್ ದಾಖಲಿಸಿದೆ ಎಂದು ಮೂಲಗಳು ತಿಳಿಸಿವೆ.
2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುಭಾಷ್ ಗುತ್ತೇದಾರ್ ಗೆಲುವು ಸಾಧಿಸಿದರೆ, 2023 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್. ಪಾಟೀಲ್ ಜಯಶೀಲರಾಗಿದ್ದರು. ಈ ಎರಡು ವಿಭಿನ್ನ ಗೆಲುವುಗಳೇ ನ್ಯಾಯಯುತ ಫಲಿತಾಂಶಗಳನ್ನು ಪ್ರತಿಬಿಂಬಿಸುತ್ತವೆ ಎಂದು ಆಯೋಗ ಉಲ್ಲೇಖಿಸಿದೆ.
ರಾಹುಲ್ ಗಾಂಧಿಯಿಂದ ತಪ್ಪು ಮಾಹಿತಿ ಬಿಜೆಪಿ ವಕ್ತಾರ ಇದೇ ವಿಷಯವಾಗಿ ರಾಹುಲ್ ಗಾಂಧಿಗೆ ಸವಾಲ್ ಹಾಕಿರುವ ಬಿಜೆಪಿ ವಕ್ತಾರ ಟಾಮ್ ವಡಕ್ಕಮ್, ತಪ್ಪು ಮಾಹಿತಿಯನ್ನು ನೀಡುತ್ತಿರುವ ವಿಪಕ್ಷ ನಾಯಕರು ತಮ್ಮ ಅಸಂಬದ್ಧತೆಯನ್ನು ನಿಲ್ಲಿಸಿ, ತಮ್ಮ ದಾಖಲೆಗಳನ್ನು ನ್ಯಾಯಾಲಯದಲ್ಲಿ ಮಂಡಿಸಲಿ ಎಂದು ಹೇಳಿದರು.
ಚುನಾವಣಾ ಆಯೋಗದ ಆಯುಕ್ತ ಜ್ಞಾನೇಶ್ ಕುಮಾರ್ ಮತ ದೋಚುವವರಿಗೆ ಮತ್ತು ಭಾರತದ ಪ್ರಜಾಪ್ರಭುತ್ವವನ್ನು ನಾಶಪಡಿಸಿದವರ ರಕ್ಷಣೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ ರಾಹುಲ್, ಕರ್ನಾಟಕದ ಆಳಂದ ಮತ್ತು ಮಹಾರಾಷ್ಟ್ರದ ರಾಜೂರ ಕ್ಷೇತ್ರಗಳ ಉದಾಹರಣೆಗಳನ್ನು ಉಲ್ಲೇಖ ಮಾಡಿ, ಸಾಫ್ಟ್‌ವೇರ್ ಬಳಸಿ ದೇಶಾದ್ಯಂತ ಮತದಾರರ ಪಟ್ಟಿಯಿಂದ ಹೆಸರುಗಳನ್ನು ವ್ಯವಸ್ಥಿತವಾಗಿ ತೆಗೆದು ಹಾಕಲಾಗುತ್ತಿದೆ ಎಂದು ಆರೋಪಿಸಿದರು. ಆಳಂದ ಕ್ಷೇತ್ರದಲ್ಲಿನ 6,018 ಮತಗಳನ್ನು ರಾಜ್ಯದ ಹೊರಗಿನಿಂದ ಸಾಫ್ಟ್‌ವೇರ್ ಮತ್ತು ಫೋನ್ ಸಂಖ್ಯೆಗಳನ್ನು ಬಳಸಿ ಅಳಿಸಲು ಪ್ರಯತ್ನಿಸಿದ್ದಾರೆ ಎಂದು ರಾಹುಲ್ ಹೇಳಿಕೆ ನೀಡಿದ್ದರು. ಇದಷ್ಟೆ ಅಲ್ಲದೇ ಹೆಸರುಗಳನ್ನು ಅಳಿಸಲು ಬಳಸಲಾಗಿದೆ ಎನ್ನಲಾದ ಮೊಬೈಲ್ ನಂಬರ್ಗಳನ್ನು ಸಹ ಬಹಿರಂಗಪಡಿಸಿದರು. (ಏಜೆನ್ಸೀಸ್)