

ಬೆಂಗಳೂರು; ರಾಜ್ಯ ರಾಜಧಾನಿಯಲ್ಲಿ ಎಷ್ಟು ರಸ್ತೆಗಳಿವೆಯೋ ಆ ರಸ್ತೆಯಲ್ಲೆಲ್ಲಾ ವಾಹನಗಳು ತುಂಬಿ ತುಳುಕುತ್ತಿವೆ. ಅಂದಹಾಗೆ ಇಲ್ಲಿನ ಟ್ರಾಫಿಕ್ ಕಿರಿಕಿರಿಯಿಂದ ಸಿಲಿಕಾನ್ ಸಿಟಿ ಮಂದಿ ಬೇಸತ್ತು ಹೋಗಿದ್ದಾರೆ. ಈ ಮಧ್ಯೆ ಇಲ್ಲೊಬ್ಬ ವ್ಯಕ್ತಿ ಮನೆಯಲ್ಲಿ ಮಲಗುವ ಹಾಸಿಗೆಯನ್ನು ರಸ್ತೆ ಮೇಲೆ ತಂದು, ನಡು ರಸ್ತೆಯಲ್ಲಿ ಯಾವುದೇ ಚಿಂತೆ ಇಲ್ಲದಂತೆ ಮಲಗಿದ್ದಾನೆ.
ಹೌದು, ಬೆಂಗಳೂರಿನ ಜನನಿಬಿಡ ರಸ್ತೆಯ ಮಧ್ಯದಲ್ಲಿ ವ್ಯಕ್ತಿಯೊಬ್ಬ ನಿದ್ರೆಗೆ ಜಾರಿದ್ದು, ಇದರಿಂದಾಗಿ ಸ್ಥಳದಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು. ಆ ವ್ಯಕ್ತಿ ಹಾಸಿಗೆಯ ಮೇಲೆ ತನ್ನ ಕಾಲುಗಳನ್ನು ಮಡಚಿ ಮಲಗಿರುವುದನ್ನು ನೋಡುಗರು ವಿಡಿಯೋದಲ್ಲಿ ಸೆರೆಹಿಡಿದಿದ್ದಾರೆ. ಈ ನಡುವೆ ಒಂದು ಬಸ್ ಹಾಗೂ ಕಾರು ಸೇರಿದಂತೆ ಹಲವು ವಾಹನಗಳು ಟ್ರಾಫಿಕ್ ಸಮಸ್ಯೆ ಅನುಭವಿಸಿವೆ. ಈ ವಿಚಿತ್ರ ಘಟನೆಯಲ್ಲಿ ಆ ವ್ಯಕ್ತಿ ಸಂಚಾರ ನಿಯಮಗಳನ್ನು ಬಹಿರಂಗವಾಗಿ ಉಲ್ಲಂಘಿಸಿದ್ದು, ಈ ದೃಶ್ಯ ಕಂಡ ಪ್ರಯಾಣಿಕರು ಮತ್ತು ದಾರಿಹೋಕರು ದಿಗ್ಭ್ರಮೆಗೊಂಡಿದ್ದಾರೆ.
(ಏಜೆನ್ಸೀಸ್)
@karnatakaportf ಎಂಬ ಖಾತೆಯಲ್ಲಿ ಈ ವಿಡಿಯೋವನ್ನು X ನಲ್ಲಿ ಪೋಸ್ಟ್ ಮಾಡಲಾಗಿದ್ದು, ಇನ್ನೂ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಂತಹ ನಡವಳಿಕೆ ಸಂಪೂರ್ಣವಾಗಿ ಅಜಾಗರೂಕತೆಯಿಂದ ಕೂಡಿದೆ. ಆ ವ್ಯಕ್ತಿ ಉದ್ದೇಶಪೂರ್ವಕವಾಗಿ ಈ ಕೃತ್ಯದಲ್ಲಿ ತೊಡಗಿದ್ದರೂ, ಇದು ಅವನ ಸ್ವಂತ ಜೀವಕ್ಕೆ ಅಪಾಯವನ್ನುಂಟುಮಾಡುವ ಅತ್ಯಂತ ಬೇಜವಾಬ್ದಾರಿಯುತ ಕ್ರಮವಾಗಿದೆ. ಒಂದು ವಾಹನ ಆಕಸ್ಮಿಕವಾಗಿ ಅವನಿಗೆ ಡಿಕ್ಕಿ ಹೊಡೆದರೆ, ಯಾರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಪೋಸ್ಟ್ ಶೀರ್ಷಿಕೆಯಲ್ಲಿ ಬರೆಯಲಾಗಿದೆ.