Anurag Thakur | ಭಾರತದಲ್ಲೂ ನೇಪಾಳದ ಪರಿಸ್ಥಿತಿ ಸೃಷ್ಠಿಸಬೇಕೆಂಬುದು ರಾಹುಲ್ ಬಯಕೆ, ವಿಪಕ್ಷ ನಾಯಕನ​​ ಬಾಂಬ್​​ ಹೇಳಿಕೆಯನ್ನು ಟುಸ್​​ ಪಟಾಕಿಗೆ ಹೋಲಿಸಿದ ಅನುರಾಗ್​​ ಠಾಕೂರ್​!​​

Anurag Thakur Rahul Gandhi
Published on

Anurag Thakur: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಬಾಂಗ್ಲಾದೇಶ ಮತ್ತು ನೇಪಾಳದಂತಹ ಪರಿಸ್ಥಿತಿಯನ್ನು ಭಾರತದಲ್ಲಿ ಸೃಷ್ಟಿಸಲು ಬಯಸುತ್ತಿದ್ದಾರೆ ಎಂದು ಸಂಸದ ಅನುರಾಗ್ ಠಾಕೂರ್ ಗಂಭೀರ ಆರೋಪ ಮಾಡಿದ್ದಾರೆ.

ದೆಹಲಿಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಠಾಕೂರ್​, ವೋಟ್ ಚೋರಿ ಹೈಡ್ರೋಜನ್ ಬಾಂಬ್ ಹಾಕುವುದಾಗಿ ಎಚ್ಚರಿಸಿದ್ದ ವಿಪಕ್ಷ ನಾಯಕರು, ಬಿಜೆಪಿ ಮತ್ತು ಚುನಾವಣಾ ಆಯೋಗದ ಬಗ್ಗೆ ಆಧಾರರಹಿತ ಆರೋಪ ಮಾಡಿದ್ದಾರೆ ಎಂದರು.

ರಾಹುಲ್​​​ರ ನೇತೃತ್ವದಲ್ಲಿ ಕಾಂಗ್ರೆಸ್ ಸುಮಾರು 90 ಚುನಾವಣೆಗಳಲ್ಲಿ ಸೋತಿದ್ದು, ಈಗ ಈ ರೀತಿಯ ನಿರಾಧಾರ ಆರೋಪ ಮಾಡುವ ಮೂಲಕ ತಮ್ಮ ಹತಾಶೆ ವ್ಯಕ್ತಪಡಿಸಿದ್ದಾರೆ, ಇಂದಿನ ಪತ್ರಿಕಾಗೋಷ್ಠಿಯಲ್ಲಿ 'ಹೈಡ್ರೋಜನ್ ಬಾಂಬ್' ಬೀಳುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಅವರು ಪಟಾಕಿಗಳೊಂದಿಗೆ ಬಂದಿದ್ದರು ಅದು ಕೂಡ ಸದ್ದು ಮಾಡಲಿಲ್ಲ ಎಂದು ವ್ಯಂಗ್ಯವಾಡಿದರು. ರಾಹುಲ್​​ ಗಾಂಧಿ ಆರೋಪಗಳ ರಾಜಕೀಯವನ್ನೇ ತಮ್ಮ ಆಭರಣವನ್ನಾಗಿ ಮಾಡಿಕೊಂಡಿದ್ದಾರೆ. ತಪ್ಪು ಮತ್ತು ಆಧಾರರಹಿತ ಆರೋಪಗಳನ್ನು ಮಾಡುವುದು ಅವರ ಹವ್ಯಾಸ, ಕ್ಷಮೆಯಾಚಿಸುವುದು ಮತ್ತು ನ್ಯಾಯಾಲಯಗಳಿಂದ ವಾಗ್ದಂಡನೆಗೆ ಒಳಗಾಗುವುದು ದಿನಚರಿಯಾಗಿದೆ ಎಂದು ಠಾಕೂರ್ ಹೇಳಿದರು.

ರಾಹುಲ್ ಗಾಂಧಿ ಆರೋಪವೇನು ?

ಚುನಾವಣಾ ಆಯೋಗದ ಆಯುಕ್ತ ಜ್ಞಾನೇಶ್ ಕುಮಾರ್ ಮತ ದೋಚುವವರಿಗೆ ಮತ್ತು ಭಾರತದ ಪ್ರಜಾಪ್ರಭುತ್ವವನ್ನು ನಾಶಪಡಿಸಿದವರ ರಕ್ಷಣೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ ರಾಹುಲ್​, ಕರ್ನಾಟಕದ ಆಳಂದ ಮತ್ತು ಮಹಾರಾಷ್ಟ್ರದ ರಾಜೂರ ಕ್ಷೇತ್ರಗಳ ಉದಾಹರಣೆಗಳನ್ನು ಉಲ್ಲೇಖ ಮಾಡಿ, ಸಾಫ್ಟ್‌ವೇರ್ ಬಳಸಿ ದೇಶಾದ್ಯಂತ ಮತದಾರರ ಪಟ್ಟಿಯಿಂದ ಹೆಸರುಗಳನ್ನು ವ್ಯವಸ್ಥಿತವಾಗಿ ತೆಗೆದು ಹಾಕಲಾಗುತ್ತಿದೆ ಎಂದು ಆರೋಪಿಸಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net