

‘ಕತ್ತಲೆ ಕೋಣೆ’ ಚಿತ್ರದ ಬಳಿಕ ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶಿಸುತ್ತಿರುವ ಎರಡನೇ ಸಿನಿಮಾ ‘ಇನಾಮ್ದಾರ್’. ಬಹುತೇಕ ಕರಾವಳಿ, ಮಲೆನಾಡಿನ ತಪ್ಪಲು, ಬಯಲು ಸೀಮೆಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಬಯಲು ಸೀಮೆಯ ಗಟ್ಟಿತನದ ಕುಟುಂಬಕ್ಕೂ ಮಲೆನಾಡಿನ ದಟ್ಟಡವಿಯ ಜನಾಂಗದ ನಡುವಿನ ಕಥಾವಸ್ತು ಚಿತ್ರದ ಜೀವಾಳ.
ಬೆಳಗಾವಿ, ಮಹಾರಾಷ್ಟ್ರದ ಗಡಿಭಾಗ ಮತ್ತು ಕರಾವಳಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಸಂದೇಶ್, ‘ಹಿಂದೆ ಸಾಂಭಾಜಿ ಮಹಾರಾಜರು ಬಳುವಳಿಯಾಗಿ ಕೊಟ್ಟ ಊರು, ಅಲ್ಲಿನ ಜನರನ್ನು ಇನಾಮ್ದಾರ್ ಎನ್ನುತ್ತಾರೆ. ಅವರ ಕಥೆಯೂ ಚಿತ್ರದಲ್ಲಿದೆ. ಹೀಗಾಗಿ ಇದೊಂದು ರೀತಿಯ ಸೆಮಿ ಹಿಸ್ಟಾರಿಕಲ್ ಚಿತ್ರ ಎನ್ನಬಹುದು.
70ರಷ್ಟು ಕಾಡಿನಲ್ಲಿ, ಗುಡ್ಡಗಾಡು ಪ್ರದೇಶದಲ್ಲಿ, ಮಳೆಯಲ್ಲಿ ಚಿತ್ರೀಕರಿಸಿದ್ದೇವೆ. ಕಾಡಿನಲ್ಲಿಯೇ 15 ಮನೆಗಳ ಸೆಟ್ ಹಾಕಿದ್ದೆವು. 150 ಜನ ಜೂನಿಯರ್ಸ್ ಪ್ರತಿದಿನ ಇರುತ್ತಿದ್ದರು. ಕರಡಿಕಾಮ, ಕತ್ತಲೆ ಕಾಳಿಂಗ, ಘೋರ, ಕಾಳ, ಮಾಳ ಎಂಬ ಪಾತ್ರಗಳು ಬರುತ್ತವೆ, ಜಾತಿಗಳ ಸಂಘರ್ಷದ ಜತೆ ನಕ್ಸಲಿಸಂ ಕೂಡ ಇದೆ. ಹೀಗೆ ಚಿತ್ರದಲ್ಲಿ ಬೇರೆ ಬೇರೆ ಆಯಾಮಗಳಿವೆ’ ಎಂದು ಮಾಹಿತಿ ನೀಡುತ್ತಾರೆ.
ಕಥೆಯಲ್ಲಿ ನಾಯಕ ನೀರಿನ ಆಳದಲ್ಲಿ ಹುಲಿಯ ಜತೆ ಸೆಣೆಸಾಡುವ ಸನ್ನಿವೇಶವಿದ್ದು, ಅದಕ್ಕಾಗಿ ಮುಂಬೈನ ಪ್ರತಿಷ್ಠಿತ ಸಿಜಿ ಕಂಪನಿ ಜತೆ ಮಾತನಾಡುತ್ತಿದ್ದಾರಂತೆ ಸಂದೇಶ್. ‘ಅದನ್ನು ಹೊರತುಪಡಿಸಿದರೆ, ಚಿತ್ರ ಪೂರ್ಣಗೊಂಡಿದೆ. ಪ್ರಮೋದ್ ಶೆಟ್ಟಿ ಇದುವರೆಗೂ ಮಾಡಿರದ, ವಜ್ರಮುನಿಯವರನ್ನು ನೆನಪಿಸುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬೆಂಗಳೂರು, ಕುಂದಾಪುರ ಹಾಗೂ ಉತ್ತರ ಕರ್ನಾಟಕದ ಶೈಲಿಯಲ್ಲಿ ಸಂಭಾಷಣೆ ಇರುತ್ತದೆ. ಸಿನಿಮಾದಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಎನಿಸುವ ಏಳು ರೀತಿಯ ಪಾತ್ರಗಳು, ಒಂದೊಂದು ಕಥೆಯನ್ನು ಹೇಳುವ 7 ರೀತಿಯ ಬಣ್ಣಗಳು ಇರುತ್ತವೆ’ ಎಂದು ಹೇಳಿಕೊಳ್ಳುತ್ತಾರೆ.
ಚಿತ್ರಕ್ಕೆ ರಂಜನ್ ಛತ್ರಪತಿ ನಾಯಕನಾಗಿದ್ದು, ಪ್ರಮೋದ್ ಶೆಟ್ಟಿ, ಶರತ್ ಲೋಹಿತಾಶ್ವ, ಎಸ್ತರ್ ನರೋನ್ಹಾ, ಚಿರಶ್ರೀ ಪ್ರಮುಖ ತಾರಾಗಣದಲ್ಲಿದ್ದು, ಥ್ರಿಲ್ಲರ್ ಮಂಜು ವಿಶೇಷ ಬೆಲ್ ಬಾಟಂ ಲುಕ್ನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜನವರಿಗೆ ಬಿಡುಗಡೆ ಮಾಡಲು ‘ಇನಾಮ್ದಾರ್’ ಚಿತ್ರತಂಡ ಯೋಜನೆ ಹಾಕಿಕೊಂಡಿದೆ.