ತೆಲುಗು ಚಿತ್ರರಂಗದಲ್ಲೂ ಲೈಂಗಿಕ ಕಿರುಕುಳ ತಪ್ಪಿಸಲು ಹೇಮಾ ಸಮಿತಿ ಮಾದರಿ ವರದಿ ಬೇಕು: ಸಮಂತಾ ಅಭಿಮತ

Samantha 2
Published on

ಹೈದರಾಬಾದ್​: ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳದ ಕುರಿತು ಜಸ್ಟೀಸ್​ ಹೇಮಾ ಸಮಿತಿಯ ವರದಿ ಸಿನಿ ಇಂಡಸ್ಟ್ರಿಯನ್ನು ಬೆಚ್ಚಿಬೀಳಿಸಿರುವುದು ತಿಳಿದ ಸಂಗತಿಯೇ. ವರದಿಗೆ ದೇಶಾದ್ಯಂತ ನಟ, ನಟಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಇದೀಗ ಟಾಲಿವುಡ್​ ನಟಿ ಸಮಂತಾ ಅದೇ ರೀತಿಯ ವರದಿಯನ್ನು ಪ್ರಕಟಿಸಬೇಕು ಎಂದು ತೆಲಂಗಾಣ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೇರಳದಲ್ಲಿ ಜಸ್ಟೀಸ್​ ಹೇಮಾ ವರದಿ ಬಹಿರಂಗಗೊಂಡ ಬಳಿಕ 9ಮಂದಿ ವಿರುದ್ಧ ಎಫ್‌ಐಆರ್‌ಗಳು ದಾಖಲಾಗಿವೆ. ವಿಶೇಷ ತನಿಖಾ ತಂಡ ರಚಿಸಲಾಗಿದೆ. ಕೇರಳದ ವುಮೆನ್ ಇನ್ ಸಿನಿಮಾ ಕಲೆಕ್ಟಿವ್(ಡಬ್ಲ್ಯುಸಿಸಿ)ಯಿಂದ ಪ್ರೇರಿತರಾಗಿ 2019ರಲ್ಲಿ ಸ್ಥಾಪಿತವಾಗಿರುವ ದ ಟಾಲಿವುಡ್​ನಲ್ಲಿ ವಾಯ್ಸ್ ಆಫ್ ವುಮೆನ್(ತೆಲುಗು ಫಿಲ್ಮ್​ ಇಂಡಸ್ಟ್ರಿ) ಮೂಲಕ ಇದೇ ರೀತಿಯ ವರದಿ ಪ್ರಕಟಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಾವು, ತೆಲುಗು ಚಿತ್ರರಂಗದ ಮಹಿಳೆಯರು, ಹೇಮಾ ಸಮಿತಿಯ ವರದಿಯನ್ನು ಸ್ವಾಗತಿಸುತ್ತೇವೆ ಮತ್ತು ಕೇರಳದ ಡಬ್ಲ್ಯುಸಿಸಿಯ ನಿರಂತರ ಪ್ರಯತ್ನಗಳನ್ನು ಶ್ಲಾಘಿಸುತ್ತೇವೆ. ಮಹಿಳೆಯರ ಶೋಷಣೆ ತಡೆಯುವ ನಿಟ್ಟಿನಲ್ಲಿ ಇದು ಈ ಕ್ಷಣಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಸಮಂತಾ ತಮ್ಮ ಇನ್​ಸ್ಟಾಗ್ರಾಮ್​ ನಲ್ಲಿ ಬರೆದಿದ್ದಾರೆ.

ತೆಲುಗಿ ಫಿಲ್ಮ್​ ಇಂಡಸ್ಟ್ರಿಯಲ್ಲಿ ಮಹಿಳೆಯರಿಗೆ ಸುರಕ್ಷಿತ ಕೆಲಸದ ವಾತಾವರಣವನ್ನು ಕಲ್ಪಿಸಲು ಸರ್ಕಾರ ಮತ್ತು ಉದ್ಯಮ ನೀತಿಗಳನ್ನು ರೂಪಿಸಲು ಸಹಾಯ ಮಾಡುವ ಲೈಂಗಿಕ ಕಿರುಕುಳದ ಕುರಿತು ಸಲ್ಲಿಸಿದ ಉಪ ಸಮಿತಿಯ ವರದಿಯನ್ನು ಪ್ರಕಟಿಸಲು ನಾವು ತೆಲಂಗಾಣ ಸರ್ಕಾರವನ್ನು ಈ ಮೂಲಕ ಒತ್ತಾಯಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಮಲಯಾಳಂ ಚಲನಚಿತ್ರೋದ್ಯಮದಿಂದ ಇತ್ತೀಚೆಗೆ ಅನಾವರಣಗೊಂಡ ಹೇಮಾ ಸಮಿತಿಯ ವರದಿಯು ಕೇರಳ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಪ್ರೇರೇಪಿಸಿತು. ಸದ್ಯಕ್ಕೆ, ನಟ-ರಾಜಕಾರಣಿ ಮುಖೇಶ್ ಮಾಧವನ್, ಸಿದ್ದಿಕ್, ಜಯಸೂರ್ಯ, ಎಡವೇಲ ಬಾಬು, ಮಣಿಯನ್ಪಿಳ್ಳ ರಾಜು, ನಿರ್ದೇಶಕರಾದ ರಂಜಿತ್ ಮತ್ತು ವಿಕೆ ಪ್ರಕಾಶ್ ಮತ್ತು ನಿರ್ಮಾಣ ಕಾರ್ಯನಿರ್ವಾಹಕರಾದ ವಿಚು ಮತ್ತು ನೋಬಲ್ ಸೇರಿದಂತೆ ಒಂಬತ್ತು ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net