

ಪ್ಯಾರಿಸ್: ಪ್ಯಾರಾಲಿಂಪಿಕ್ಸ್ನಲ್ಲಿ ಭಾರತಕ್ಕೆ ನಾಲ್ಕನೇ ಪದಕ ಲಭಿಸಿದೆ. ಪುರುಷರ 10 ಮೀಟರ್ ಏರ್ ಪಿಸ್ತೂಲ್ ಎಸ್ಎಚ್1 ಫೈನಲ್ನಲ್ಲಿ ಮನೀಶ್ ನರ್ವಾಲ್ ಬೆಳ್ಳಿ ಗೆದ್ದಿದ್ದು, ಮಹಿಳೆಯರ 100 ಮೀಟರ್ (ಟಿ35) ಓಟದಲ್ಲಿ ಪ್ರೀತಿ ಪಾಲ್ ಕಂಚಿನ ಪದಕ ಪಡೆದರು.
ಈ ಹಿಂದಿನ ಪ್ಯಾರಾಲಿಂಪಿಕ್ಸ್ನಲ್ಲಿ ಮನೀಶ್ 50 ಮೀಟರ್ ಏರ್ ಪಿಸ್ತೂಲ್ ಎಸ್ಎಚ್1 ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಈ ಸ್ಪರ್ಧೆಯಲ್ಲಿ ಕೊರಿಯಾದ ಜಿಯೊಂಗ್ಡು ಫೈನಲ್ನಲ್ಲಿ ಮೊದಲ ಸ್ಥಾನ ಪಡೆದಿದ್ದು, 237.4 ಅಂಕ ಗಳಿಸಿದ್ದಾರೆ. ನರ್ವಾಲ್ 234.9 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಚೀನಾದ ಯಾಂಗ್ ಚಾವೊ 214.3 ಅಂಕಗಳೊಂದಿಗೆ ಕಂಚಿನ ಪದಕ ಪಡೆದರು.
ಇದೇ ಕ್ರೀಡಾಕೂಟದಲ್ಲಿ ಮಹಿಳೆಯರ 100 ಮೀಟರ್ (ಟಿ35) ಓಟದಲ್ಲಿ ಭಾರತದ ಪ್ರೀತಿ ಪಾಲ್ ಕಂಚಿನ ಪದಕ ಗೆದ್ದರು. 100 ಮೀಟರ್ ದೂರವನ್ನು 14.31 ಸೆಕೆಂಡುಗಳಲ್ಲಿ ಕ್ರಮಿಸಿದ ನಂತರ ಅವರಿಗೆ ಈ ಅವಕಾಶ ಸಿಕ್ಕಿತು. 23ರ ಹರೆಯದ ಪ್ರೀತಿ ಮಹಿಳೆಯರ 100 ಮೀಟರ್ ಟಿ35 ಫೈನಲ್ ನಲ್ಲಿ ಮೂರನೇ ಸ್ಥಾನ ಪಡೆದರು. ಈ ಮೂಲಕ ಪ್ಯಾರಾಲಿಂಪಿಕ್ಸ್ನಲ್ಲಿ ಟ್ರ್ಯಾಕ್ ಸ್ಪರ್ಧೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯಳು ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಈ ಸ್ಪರ್ಧೆಯಲ್ಲಿ ಚೀನಾದ ಗುವೊ ಕಿಯಾನ್ಕಿಯಾನ್ ಬೆಳ್ಳಿ ಪದಕ ಗೆದ್ದರು. ಅವರು 13.74 ಸೆಕೆಂಡುಗಳಲ್ಲಿ ಓಟವನ್ನು ಪೂರ್ಣಗೊಳಿಸಿದರೆ, ಚೀನಾದ ಹೆ ಝೌ 1.58 ಸೆಕೆಂಡುಗಳಲ್ಲಿ ಓಟವನ್ನು ಪೂರ್ಣಗೊಳಿಸಿ ಚಿನ್ನದ ಪದಕ ಪಡೆದರು. ಪ್ರೀತಿ ಅವರ ಕಂಚಿನ ಪದಕವು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಪ್ಯಾರಾ ಅಥ್ಲೆಟಿಕ್ಸ್ನಲ್ಲಿ ಭಾರತಕ್ಕೆ ಮೊದಲ ಪದಕವಾಗಿದೆ.
ಶುಕ್ರವಾರ ಅವನಿ ಲೆಖರಾ ಚಿನ್ನದ ಪದಕ ಗೆದ್ದರೆ, ಮೋನಾ ಅಗರ್ವಾಲ್ ಮಹಿಳೆಯರ 10 ಮೀಟರ್ ಏರ್ ರೈಫಲ್ ಎಸ್ಎಚ್1 ಫೈನಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು.