

ಕೋಲ್ಕತ್ತಾ: ' ಆಕೆಗ ಮಕ್ಕಳಿಲ್ಲ, ಮಗಳನ್ನು ಕಳೆದುಕೊಂಡ ನಮ್ಮ ನೋವು ಹೇಗೆ ಅರ್ಥವಾಗುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಅತ್ಯಾಚಾರ ಮತ್ತು ಹತ್ಯೆಗೀಡಾದ ಟ್ರೈನಿ ವೈದ್ಯೆ ತಾಯಿ ಅಸಮಾಧಾನ ಹೊರಹಾಕಿದ್ದಾರೆ.
ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದಂತೆ ವೈದ್ಯರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಶುಕ್ರವಾರ(ಆ.30)ಪಾಲ್ಗೊಂಡು ಮಾತನಾಡಿ, ಪ್ರತಿಭಟನಾ ನಿರತ ವೈದ್ಯರ ಮೇಲೆ ಎಫ್ಐಆರ್ ಹಾಕಿದರೆ ಅವರ ಭವಿಷ್ಯ ನಾಶವಾಗಲಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದು ಈ ನಿಟ್ಟಿನಲ್ಲಿ ಸಂತ್ರಸ್ತೆಯ ತಾಯಿ ಕಿಡಿ ಕಾರಿದರು.
ಸಿಎಂ ಮಮತಾ ಹೇಳಿಕೆಯಿಂದ ನಮ್ಮ ಕುಟುಂಬ ಸದಸ್ಯರು ತುಂಬಾ ನೊಂದಿದ್ದೇವೆ. ನಾನು ಬಿಜೆಪಿ ವಿರುದ್ಧವೂ ಮಾತನಾಡಿದ್ದೇನೆ. ವೈದ್ಯರು ನ್ಯಾಯಕ್ಕಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವುದಕ್ಕೆ ನನ್ನ ಬೆಂಬಲವಿದೆ. ಆದರೆ ಮಮತಾ ಬ್ಯಾನರ್ಜಿ, ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ವೈದ್ಯರು ಪ್ರತಿಭಟನೆಗಿಳಿದು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿದ್ದಾರೆ. ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಹೇಳಿರುವುದು ಸರಿಯಲ್ಲ ಎಂದು ಟೀಕಿಸಿದರು.
ವೈದ್ಯರ ಹತ್ಯೆಯ ನಂತರ, ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಸಿಬ್ಬಂದಿಯ ವರ್ತನೆ ನಿರ್ಲಕ್ಷ್ಯದಿಂದ ಕೂಡಿತ್ತು. ತಮ್ಮ ಮಗಳು ಸತ್ತ ತಕ್ಷಣ ತಮಗೆ ಮಾಹಿತಿ ನೀಡಿಲ್ಲ. ಮಗಳ ಮೃತದೇಹವನ್ನು ತಕ್ಷಣ ನೋಡುವ ಅವಕಾಶವನ್ನೂ ನೀಡಿಲ್ಲ. ಸುಮಾರು 3 ಗಂಟೆ ಕಾಲ ನಮ್ಮನ್ನು ಆಸ್ಪತ್ರೆಯಲ್ಲಿ ಕಾಯಿಸಿದರು. ಮಮತಾ ಬ್ಯಾನರ್ಜಿ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಪ್ರಶ್ನಿಸಲಾಗಿದೆ. ಈ ವಿಚಾರವಾಗಿ ಈಗಾಗಲೇ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಟ್ರೈನಿ ವೈದ್ಯೆ ಸಾವಿನ ನಿಗೂಢತೆ ಇನ್ನೂ ಹೊರಬಂದಿಲ್ಲ. ಸಿಬಿಐ ತನಿಖೆ ನಡೆಸುತ್ತಿದ್ದರೂ ಅಸಲಿ ವಿಷಯ ಹೊರ ಬರುತ್ತಿಲ್ಲ. ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಸಿಬಿಐ ತನಿಖೆ ನಡೆಸುತ್ತಿದೆ. ಆದರೆ ಸಂತ್ರಸ್ತೆಯ ಪೋಷಕರು ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸುತ್ತಿದ್ದಾರೆ.