ಲಾರೆನ್ಸ್​ ಬಿಷ್ಣೋಯಿ ಕೊಲೆ ಬೆದರಿಕೆ ಬೆನ್ನಲ್ಲೇ ದಿಢೀರ್​ ಹೊಸ​ ನಿರ್ಧಾರ ಕೈಗೊಂಡ ನಟ ಸಲ್ಮಾನ್​ ಖಾನ್​! | Bulletproof

ವಿಜಯವಾಣಿ-2024-10-19T102543.322
Published on

ನವದೆಹಲಿ: ಇತ್ತೀಚೆಗಷ್ಟೇ ಮಹಾರಾಷ್ಟ್ರ ಸರ್ಕಾರದ ಮಾಜಿ ಸಚಿವ, ಎನ್​ಸಿಪಿ ನಾಯಕ ಬಾಬಾ ಸಿದ್ದಿಕಿಯನ್ನು ಹತ್ಯೆಗೈದ ಕುಖ್ಯಾತ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯಿ, ತನ್ನ ಮುಂದಿನ ಟಾರ್ಗೆಟ್ ಅನ್ನು​ ಬಾಲಿವುಡ್​ ಹಿರಿಯ ನಟ ಸಲ್ಮಾನ್ ಖಾನ್ (Bulletproof Car) ಮೇಲಿಟ್ಟಿರುವುದು ಇದೀಗ ಎಲ್ಲರಿಗೂ ತಿಳಿದಿರುವ ವಿಷಯವೇ. ನಟನ​ ಕೊಲೆ ಸಂಚಿಗೆ ದೊಡ್ಡ ಬೇಡಿಕೆಯಿಟ್ಟಿದ್ದ ಲಾರೆನ್ಸ್​ ಗ್ಯಾಂಗ್​, ಬರೋಬ್ಬರಿ 25 ಲಕ್ಷ ರೂ. ಹಣದ ಜತೆಗೆ ನಾನಾ ಬಗೆಯ ಗನ್​ಗಳ ಮೊರೆ ಹೋಗಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಅ.18ರಂದು ನವಿ ಮುಂಬೈ ಪೊಲೀಸರು ತಾವು ಸಲ್ಲಿಸಿದ ಚಾರ್ಚ್​ಶೀಟ್​ನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಈ ಎಲ್ಲಾ ಬೆಳವಣಿಗೆಯ ಮಧ್ಯೆಯೇ ಬಿಷ್ಣೋಯಿ ಗ್ಯಾಂಗ್​​ನಿಂದ ಸಲ್ಮಾನ್ ಖಾನ್​ಗೆ ಮತ್ತೆ ಕೊಲೆ ಬೆದರಿಕೆ ಕರೆ ಬಂದಿದ್ದು, 5 ಕೋಟಿ ರೂ. ಕೊಟ್ಟರೆ ಮಾತ್ರ ನಟನನ್ನು ಉಳಿಸುತ್ತೇವೆ. ಇಲ್ಲವಾದರೆ, ಇತ್ತೀಚೆಗಷ್ಟೇ ನಾವು ಗುಂಡಿಕ್ಕಿ ಕೊಂದ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆಗಿಂತ ಸಲ್ಮಾನ್ ಸಾವು ಕೆಟ್ಟದಾಗಿರಲಿದೆ ಎಂದು ಗ್ಯಾಂಗ್​ ಎಚ್ಚರಿಕೆ ರವಾನಿಸಿದೆ.

ಸದ್ಯ ಸಲ್ಮಾನ್​ ಖಾನ್​ಗೆ ಬಿಷ್ಣೋಯಿ ಗ್ಯಾಂಗ್​ ನೀಡಿರುವ ಮತ್ತೊಂದು ಕೊಲೆ ಬೆದರಿಕೆ ಕರೆ ಇದೀಗ ನವಿ ಮುಂಬೈ ಪೊಲೀಸರನ್ನು ಹೈಅಲರ್ಟ್​ ಆಗುವಂತೆ ಮಾಡಿದೆ. ನಟನಿಗೆ ಕೊಡಬೇಕಾದ ಬಿಗಿ ಭದ್ರತೆಯನ್ನು ಈಗಾಗಲೇ ಒದಗಿಸಿರುವ ಪೊಲೀಸ್ ಅಧಿಕಾರಿಗಳು, ಆದಷ್ಟು ಮುನ್ನೆಚ್ಚರಿಕೆ ವಹಿಸಲು ಸಲ್ಮಾನ್ ಮತ್ತು ಅವರ ಕುಟುಂಬಕ್ಕೆ ತಿಳಿಸಿದೆ. ಇದೆಲ್ಲದರ ನಡುವೆ ಇದೀಗ ದಿಢೀರ್​ ನಿರ್ಧಾರ ಕೈಗೊಂಡಿರುವ ಸಲ್ಮಾನ್ ಖಾನ್​, ತಮ್ಮ ಜೀವ ಉಳಿಸಿಕೊಳ್ಳುವ ಹಿನ್ನಲೆ ದುಬೈ ಮೂಲದ 2 ಕೋಟಿ ರೂ. ಮೌಲ್ಯದ ನಿಸ್ಸಾನ್​ ಬುಲೆಟ್ ಪ್ರೂಫ್ ಕಾರನ್ನು ಖರೀದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವರದಿಯ ಪ್ರಕಾರ, ಸಲ್ಮಾನ್ ಖಾನ್ ಬುಲೆಟ್ ಪ್ರೂಫ್ ನಿಸ್ಸಾನ್ ಪೆಟ್ರೋಲ್ ಎಸ್‌ಯುವಿಯನ್ನು ಖರೀದಿಸಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ಕಾರು ಲಭ್ಯವಿಲ್ಲದ ಕಾರಣ, ಸಲ್ಮಾನ್ ಖಾನ್​ ಇದೀಗ ದುಬೈನಿಂದ ಆಮದು ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಕಾರಿನ ಬೆಲೆ ಸುಮಾರು 2 ಕೋಟಿಯಷ್ಟಿದ್ದು, ಆದಷ್ಟು ವೇಗವಾಗಿ ಕಾರನ್ನು ಭಾರತಕ್ಕೆ ತರಿಸಿಕೊಳ್ಳಲು ಸಲ್ಮಾನ್​ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net