BBKS11: ಬಿಗ್ ಬಾಸ್​ ಇತಿಹಾಸದಲ್ಲೇ ಇದು 2ನೇ ಬಾರಿ! ಹೀಗಾಗುತ್ತೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ

bbks11
Published on

ಬೆಂಗಳೂರು: ರಿಯಾಲಿಟಿ ಶೋಗಳ ಪೈಕಿ ಅತೀ ದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಗಳಿಸಿರುವ ಕನ್ನಡ ಬಿಗ್ ಬಾಸ್ (BBKS 11) ಮನರಂಜನಾ ಕಾರ್ಯಕ್ರಮ ಇದೀಗ ಹೊಸ ರೂಪ ಪಡೆದುಕೊಂಡಿದ್ದೇ ಆದರೂ ಬಿಗ್ ತಂಡ ಹಾಕಿಕೊಂಡ ಯಶಸ್ಸಿನ ಎಲ್ಲಾ ಲೆಕ್ಕಾಚಾರಗಳು ಇದೀಗ ತಲೆಕೆಳಗಾಗಿ ನಿಂತಿವೆ. 17 ಘಟಾನುಘಟಿ ಸ್ಪರ್ಧಿಗಳು ಬಿಗ್ ಮನೆಗೆ ಎಂಟ್ರಿಕೊಟ್ಟಿದ್ದರು ಸಹ ಅಂದುಕೊಂಡಂತೆ ಯಾವುದು ನಡೆಯುತ್ತಿಲ್ಲ. ಇದಕ್ಕೆ ಕಾರಣ ಇತ್ತೀಚಿನ ದಿನಗಳಲ್ಲಿ ಸ್ಪರ್ಧಿಗಳ ನಡುವೆ ನಡೆಯುತ್ತಿರುವ ಅಸಭ್ಯ ಸಂಭಾಷಣೆ, ವಾಗ್ವಾದ, ಅವಾಚ್ಯ ಪದಗಳ ಬಳಕೆ, ದೈಹಿಕ ಬಲಾಬಲ. ಪ್ರಸ್ತುತ ದೈಹಿಕ ಹಲ್ಲೆ ಮಾಡಿದ ಮೇರೆಗೆ ರಂಜಿತ್ ಬಿಗ್ ಮನೆಯಿಂದ ಹೊರಬಿದ್ದರೆ, ಮಹಿಳೆಯರ ವಿರುದ್ಧ ಅಸಭ್ಯ ಪದ ಬಳಸಿದ ಹಿನ್ನೆಲೆ ಜಗದೀಶ್​ ಹೊರ ನಡೆದಿದ್ದಾರೆ.

ಬಿಗ್ ಮನೆಗೆ ಎಂಟ್ರಿಕೊಟ್ಟ ಮೊದಲ ದಿನದಿಂದಲೂ 16 ಸ್ಪರ್ಧಿಗಳ ಜತೆ ತೀರ ವಾಗ್ವಾದಕ್ಕಿಳಿದ ಲಾಯರ್ ಜಗದೀಶ್​, ಆಟದ ಮೂಲ ನಿಯಮಗಳನ್ನೇ ಮರೆತು ಮಾತನಾಡಿದ್ದರು. ಈ ವಿಷಯ ವೀಕ್ಷಕರಲ್ಲಿ ಭಾರೀ ಬೇಸರ ಮೂಡಿಸಿತ್ತು. ಇರಲಿ ಪರವಾಗಿಲ್ಲ ಬಿಗ್​ಬಾಸ್​ ಮನೆ ಅಂದಮೇಲೆ ಅಲ್ಲಿ ಇಂತಹ ಜಟಾಪಟಿ, ವಿರೋಧ, ವ್ಯಂಗ್ಯಗಳು ಇರುತ್ತವೆ ಎಂದು ವೀಕ್ಷಕರು ಪ್ರಾರಂಭದಲ್ಲಿ ಸುಮ್ಮನಾಗಿದ್ದರು. ಆದ್ರೆ, ಯಾವಾಗ ಜಗದೀಶ್​ ಬಿಗ್​ ಬಾಸ್​ಗೆ ನೇರ ಸವಾಲು ಎಸೆದರೋ ಅಲ್ಲಿಗೆ ಎಲ್ಲಾ ಲೆಕ್ಕಾಚಾರಗಳು ಇಲ್ಲಿಗೆ ಮುಗಿಯಿತು ಎಂದೇ ನೋಡುಗರು ಭಾವಿಸಿದರು.

ಬಿಗ್​ಬಾಸ್​ ಶೋ ಏನು ಎಂಬುದನ್ನು ಇಡೀ ರಾಜ್ಯದ ಮುಂದೆ ಬಿಚ್ಚಿಡುತ್ತೇನೆ ಎಂದು ಸವಾಲಿನ ಜತೆ ಮನೆಯಲ್ಲಿರುವ ಇತರೆ ಸ್ಪರ್ಧಿಗಳ ವಿರುದ್ಧ ತೀವ್ರ ವಾಗ್ವಾದಕ್ಕಿಳಿಯುತ್ತಿದ್ದ ಜಗದೀಶ್​ಗೆ ಮೊದಲ ವಾರದ ಕಥೆ ಕಿಚ್ಚನ ಜತೆ ಪಂಚಾಯಿತಿಯಲ್ಲಿ ನಟ, ನಿರೂಪಕ ಸುದೀಪ್ ಗೌರವದಿಂದಲೇ ಬುದ್ಧಿ ಹೇಳಿ, ಜನರ ಪ್ರೀತಿಯನ್ನು ಅರ್ಥ ಮಾಡಿಸಿದ್ದರು. ಆದರೆ, ಅಂತಿಮವಾಗಿ ಇದ್ಯಾವುದಕ್ಕೂ ಗೌರವ ಕೊಡದ ಜಗದೀಶ್​, ಇದೀಗ ದೊಡ್ಡ ಎಡವಟ್ಟನ್ನೇ ಮಾಡಿಕೊಂಡಿದ್ದಾರೆ. ಸದ್ಯ ಈ ಘಟನೆಗಳಿಂದ ನೋಡುಗರು ಕೂಡ ಭಾರೀ ಅಸಮಾಧಾನಗೊಂಡಿದ್ದು, ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಹೊರಹಾಕುತ್ತಿದ್ದಾರೆ.

sudeep warns jagadish

ಈ ಹಿಂದೆ ಒಬ್ಬರು, ಈ ಬಾರಿ ಇಬ್ಬರು

ಬಿಗ್​​ ಬಾಸ್​ ಮನೆಯ ಮೂಲ ನಿಯಮವೇ ಯಾರ ಮೇಲೂ ದೈಹಿಕವಾಗಿ ಹಲ್ಲೆ ಮಾಡಬಾರದು ಎಂದು. ಹೀಗಿದ್ದಮೇಲೆ ಒಬ್ಬ ಸ್ಪರ್ಧಿಯಾದವನು, ಮತ್ತೊಬ್ಬ ಸ್ಪರ್ಧಿಯ ಮೇಲೆ ಕೈ ಎತ್ತಬಾರದು, ಹಲ್ಲೆ ಮಾಡಬಾರದು. ಏನೇ ಇದ್ದರೂ ಅದನ್ನು ಮೊದಲು ಬಿಗ್ ಬಾಸ್​ ಗಮನಕ್ಕೆ ತರಬೇಕು ಎಂಬುದು ನಿಯಮದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇಷ್ಟಾದರೂ ಸಹ ಮನೆಯೊಳಗೆ ಜಗದೀಶ್​ ಆಡುತ್ತಿದ್ದ ಏಕವಚನದ ಮಾತನ್ನು ಆಲಿಸಲು ಸಾಧ್ಯವಾಗದ ರಂಜೀತ್​, ಒಮ್ಮೆ ಕೈಯಿಂದ ಅವರನ್ನು ತಳ್ಳಿದ್ದು, ಮತ್ತೊಂದು ಕಡೆ ತಮ್ಮ ಎದೆಯಿಂದ ಜಗದೀಶ್​ರನ್ನು ನೂಕಿರುವುದು ತಿಳಿದುಬಂದಿದೆ.

ಈ ಕಾರಣದಿಂದ ಬಿಗ್​ ಬಾಸ್​ ನ್ಯಾಯ ಒದಗಿಸುವ ನಿಟ್ಟಿನಲ್ಲಿ ರಂಜೀತ್​ರನ್ನು ಹೊರಕಳಿಸಿದರೆ, ಹೆಣ್ಣಿಗೆ ಮನಬಂದಂತೆ ಏಕವಚನದಲ್ಲಿ ಹಾಗೂ ಅಸಭ್ಯವಾಗಿ ನಿಂದಿಸಿದ ಹಿನ್ನೆಲೆ ಜಗದೀಶ್​ರನ್ನು ಬಿಗ್ ಮನೆಯಿಂದ ಹೊರಗಿಟ್ಟಿದ್ದಾರೆ. ಈ ಮೊದಲು ಸೀಸನ್​ 3ರಲ್ಲಿ ತಮ್ಮ ಸಹ ಸ್ಪರ್ಧಿಗೆ ಹುಚ್ಚ ವೆಂಕಟ್​ ಗಂಭೀರವಾಗಿ ಹಲ್ಲೆ ಮಾಡಿದ್ದರು. ಈ ಮೇರೆಗೆ ಅವರನ್ನು ತಕ್ಷಣವೇ ಮನೆಯಿಂದ ಹೊರಗೆ ಕಳಿಸಲಾಗಿತ್ತು. ಇದಾದ ನಂತರ ಸೀಸನ್​ 11ರಲ್ಲೇ ಈ ಘಟನೆ ಮತ್ತೆ ಮರುಕಳಿಸಿದ್ದು ಎಂಬುದು ಸದ್ಯ ತೀರ ಬೇಸರದ ಸಂಗತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net