

ಹೈದರಾಬಾದ್: ಮಿಯಾಪುರ ಮೆಟ್ರೋ ನಿಲ್ದಾಣದ ಹಿಂಭಾಗದ ನಾಡಿಗಡ್ಡ ತಾಂಡಾ ಪ್ರದೇಶದಲ್ಲಿ ಚಿರತೆಯೊಂದು ( leopard ) ಪ್ರತ್ಯಕ್ಷವಾಗಿದ್ದು, ನಿವಾಸಿಗಳು ಹಾಗೂ ಮೆಟ್ರೋ ಪ್ರಯಾಣಿಕರು ಮಿಯಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೆಟ್ರೋ ನಿಲ್ದಾಣದ ಹಿಂದೆ ಚಿರತೆ ಓಡಾಡುತ್ತಿರುವ ವಿಡಿಯೋ ಶುಕ್ರವಾರ ರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚಿರತೆ ಓಡಾಡುತ್ತಿರುವುದು ಕಂಡು ಬಂದ ಸ್ಥಳೀಯರು ಮಿಯಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಚಿರತೆ ಬಂದಿದ್ದು ಹೇಗೆ? ಎಲ್ಲಿಂದ ಬಂತು? ಇಷ್ಟೊಂದು ಜನಜಂಗುಳಿಯ ಮಧ್ಯೆ ಅದು ಹೇಗೆ ಬಂದೀತು..? ಎಂದು ನಗರವಾಸಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಸದ್ಯ ಯಾರೂ ಮನೆಯಿಂದ ಹೊರಗೆ ಬರಬಾರದು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಚಿರತೆ ಹಿಡಿಯಲು ಹರಸಾಹಸ ಪಡುತ್ತಿದ್ದು, ಯಾರಾದರೂ ಕಂಡರೆ ತಕ್ಷಣ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ಸದ್ಯ, ಚಿರತೆಯೊಂದು ಸುತ್ತಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.