

ಬೆಂಗಳೂರು: ಸ್ಯಾಂಡಲ್ವುಡ್ನ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಟಾಲಿವುಡ್ನ ರೆಬೆಲ್ ಸ್ಟಾರ್, ನಟ ಪ್ರಭಾಸ್ ಕಾಂಬಿನೇಷನ್ನಲ್ಲಿ ತೆರೆಗೆ ಅಪ್ಪಳಿಸಲು ಸಜ್ಜಾಗಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ 'ಸಲಾರ್' ಇದೀಗ ಜಾಗತಿಕ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿದೆ. ರಿಲೀಸ್ಗೂ ಮುನ್ನವೇ ಸೋಷಿಯಲ್ ಮೀಡಿಯಾ ಸೇರಿದಂತೆ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿಸಿದೆ. ಸದ್ಯ ಬಿಡುಗಡೆ ಕೆಲಸಗಳಲ್ಲಿ ಬ್ಯುಸಿಯಿರುವ ಪ್ರಶಾಂತ್, ಇತ್ತೀಚೆಗೆ ಎಸ್.ಎಸ್. ರಾಜಮೌಳಿ ಅವರೊಂದಿಗೆ ನಡೆದ ಸಂದರ್ಶನದಲ್ಲಿ ಮನಬಿಚ್ಚಿ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮುಖ್ಯಭೂಮಿಕೆಯಲ್ಲಿರುವ 'ಸಲಾರ್ ಭಾಗ 1' ಸೀಜ್ ಫೈರ್ ಚಿತ್ರವು ಜಾಗತಿಕವಾಗಿ ಇದೇ ಡಿಸೆಂಬರ್ 22 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಪಡೆಯಲಿದೆ. ಈ ಮಧ್ಯೆ 'ಬಾಹುಬಲಿ', 'ಮಗಧೀರ', 'ಆರ್ಆರ್ಆರ್'ನಂತಹ ಸೂಪರ್ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಸಂದರ್ಶನದಲ್ಲಿ ಭಾಗಿಯಾದ ಪ್ರಶಾಂತ್ ನೀಲ್ ಮತ್ತು ಪ್ರಭಾಸ್, ಸುಕುಮಾರನ್ ಚಿತ್ರದ ಕುರಿತಂತೆ ಅನೇಕ ವಿಷಯಗಳನ್ನು ಚರ್ಚಿಸಿದರು.
'ಸಲಾರ್' ಕುರಿತು ಮಾತನಾಡುತ್ತಿದ್ದ ಪ್ರಶಾಂತ್, ತಮ್ಮ ಚಿತ್ರಕ್ಕೆ ಸಿಬಿಎಫ್‌ಸಿಯಿಂದ ಸಿಕ್ಕ 'ಎ' ಸರ್ಟಿಫಿಕೆಟ್ ಬಗ್ಗೆ ಬೇಸರ ವ್ಯಕ್ತಪಡಿಸಿದರು. “ಇದರಿಂದ ನಾನು ತುಂಬಾ ನಿರಾಶೆಗೊಂಡೆ, ನಾನು ಅವರ ಮುಂದೆ 20 ನಿಮಿಷಗಳ ಕಾಲ ಕುಳಿತು ಕೇಳಿದೆ. ನಾನು ಅಶ್ಲೀಲ ಸಿನಿಮಾವನ್ನಾಗಲಿ, ಹಿಂಸೆ ಒಳಗೊಂಡ ಸಿನಿಮಾವನ್ನಾಗಲಿ ಮಾಡಿಲ್ಲ ಎಂಬುದು ನನಗೆ ಗೊತ್ತು. ಇದೆಲ್ಲಾ ಚಿತ್ರಕ್ಕೆ ಅಗತ್ಯ ಇದ್ದಿದ್ದು. ಪ್ರಮಾಣೀಕರಣ ಮಂಡಳಿಯು ಚಿತ್ರದಲ್ಲಿ ಕೆಲವು ಕಡಿತಗಳನ್ನು ಕೇಳಿತು. ಆದ್ರೆ, ಆ ರೀತಿ ಮಾಡಿದರೆ ಸಿನಿಮಾ ನೋಡುವ ಅನುಭವವನ್ನು ಬದಲಾಯಿಸುತ್ತದೆ" ಎಂದು ಹೇಳುವ ಮೂಲಕ ಬೇಸರ ವ್ಯಕ್ತಪಡಿಸಿದರು.
'ಸಲಾರ್' ಚಿತ್ರವು ಇಬ್ಬರು ಸ್ನೇಹಿತರ ಭಾವನೆಗಳು ಮತ್ತು ಬಂಧಗಳ ನಡುವೆ ಸುತ್ತುವ ಕತೆಯಿದು ಎಂದು ಈ ಹಿಂದೆ ಪ್ರಶಾಂತ್ ಹೇಳಿದ್ದರು. ನಿರ್ದೇಶಕರ ಈ ಮಾತನ್ನು ಕೇಳಿದ ಸಿನಿಪ್ರೇಕ್ಷಕರು ಇದು 'ಉಗ್ರಂ' ಚಿತ್ರದ ಮುಂದುವರಿದ ಭಾಗ ಇರಬಹುದು ಎಂದು ಊಹಿಸಿದ್ದಾರೆ.
'ಸಲಾರ್' ಚಿತ್ರವು 'ಉಗ್ರಂ' ಸಿನಿಮಾದ ಕತೆಯನ್ನು ಹೇಳಲಿದೆ ಎಂದು ನೆಟ್ಟಿಗರು ವ್ಯಾಪಕವಾಗಿ ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯಿಸಿದ್ದಾರೆ. ಸದ್ಯ ಈ ವದಂತಿಗಳು ಎಷ್ಟು ನಿಜ? ಎಂಬುದನ್ನು ಸಿನಿಮಾ ನೋಡಿದ ಬಳಿಕ ಸ್ಪಷ್ಟವಾಗಲಿದೆ,(ಏಜೆನ್ಸೀಸ್).