

ನವದೆಹಲಿ: ಇತ್ತೀಚೆಗಷ್ಟೇ ನಡೆದ ಇಂಡಿಯಾ ಟುಡೆ ಕಾಂಕ್ಲೇವ್ ( India Today Conclave ) ನಲ್ಲಿ ಬಾಲಿವುಡ್ ನಟ ಸೈಫ್ ಅಲಿಖಾನ್ ( Saif Ali Khan ), ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ( Rahul Gandhi )ಯನ್ನು ಮನಸಾರೆ ಕೊಂಡಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗೂ ಗ್ರಾಸವಾಗಿದೆ.
ಪ್ರಧಾನಿ ಮೋದಿ, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೆಸರನ್ನು ಹೇಳಿ ದೇಶದ ಧೈರ್ಯಶಾಲಿ ರಾಜಕಾರಣಿಯನ್ನು ಹೆಸರಿಸಿ ಎಂದು ಇಂಡಿಯಾ ಟುಡೇ ಕಾಂಕ್ಲೇವ್ನ ನಿರೂಪಕರು, ಸೈಫ್ ಅಲಿಖಾನ್ ಅವರನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಸೈಫ್ ಅಲಿಖಾನ್, ಮೂವರ ಹೆಸರನ್ನು ತೆಗೆದುಕೊಂಡರು. ಆದರೆ, ರಾಹುಲ್ ಗಾಂಧಿಯನ್ನು ಹೆಚ್ಚಾಗಿ ಕೊಂಡಾಡಿದರು.
ಮೂವರು ಕೂಡ ಧೈರ್ಯಶಾಲಿ ರಾಜಕಾರಣಿಗಳು ಎಂದು ನಾನು ಭಾವಿಸುತ್ತೇನೆ. ಆದರೆ, ರಾಹುಲ್ ಗಾಂಧಿ ಅವರು ಏನು ಮಾಡಿದ್ದಾರೋ ಅದು ತುಂಬಾ ಪ್ರಭಾವ ಬೀರುತ್ತದೆ ಎಂದು ನಾನು ಭಾವಿಸುತ್ತೇನೆ. ರಾಹುಲ್ ಗಾಂಧಿ ಏನೇ ಹೇಳಿದರೂ ಮತ್ತು ಏನೇ ಮಾಡಿದರೂ ಅದನ್ನು ಟೀಕಿಸುತ್ತಿದ್ದ ಮತ್ತು ಅಗೌರವಿಸುತ್ತಿದ್ದ ಒಂದು ಸಮಯವಿತ್ತು. ಅದ್ಯಾವುದನ್ನು ಲೆಕ್ಕಿಸದೇ ತುಂಬಾ ಆಸಕ್ತಿಕರ ಮಾರ್ಗದಲ್ಲಿ ಬಹಳ ಕಷ್ಟಪಟ್ಟು ಕೆಲಸ ಮಾಡುವ ಮೂಲಕ ತಮ್ಮ ಮೇಲೆ ಜನರಿಗಿದ್ದ ಅಭಿಪ್ರಾಯವನ್ನು ರಾಹುಲ್ ಬದಲಾಯಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಸೈಫ್ ಅಲಿಖಾನ್ ಹೇಳಿದರು.
ಕಾರ್ಯಕ್ರಮದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋ ನೋಡಿದ ನೆಟ್ಟಿಗರು ರಾಹುಲ್ ಗಾಂಧಿಗೆ ಸ್ಟಾರ್ ನಟ ನೀಡಿದ ಬಹಿರಂಗ ಬೆಂಬಲ ಎಂದು ಬಿಂಬಿಸುತ್ತಿದ್ದಾರೆ. ಅಲ್ಲದೆ, ಇದೇ ವಿಡಿಯೋ ಪರ-ವಿರೋಧ ಚರ್ಚೆಗೂ ಕಾರಣವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಅಭಿಮಾನಿಗಳ ನಡುವಿನ ವಾಗ್ವಾದಕ್ಕೂ ಕಾರಣವಾಗಿದೆ.
ಇದಕ್ಕೂ ಮೊದಲು ಮಾಜಿ ಕೇಂದ್ರ ಸಚಿವೆ ಮತ್ತು ಬಿಜೆಪಿ ನಾಯಕಿ ಸ್ಮೃತಿ ಇರಾನಿ ತಮ್ಮ ಸಾಂಪ್ರದಾಯಿಕ ಎದುರಾಳಿ ರಾಹುಲ್ ಗಾಂಧಿ ಅವರ ಬದಲಾದ ನಾಯಕತ್ವವನ್ನು ಒಪ್ಪಿಕೊಂಡರು. ಪಾಡ್ಕಾಸ್ಟ್ನಲ್ಲಿ ಮಾತನಾಡಿದ ಸ್ಮೃತಿ ಇರಾನಿ, ರಾಹುಲ್ ಗಾಂಧಿ ಅವರು ತಮ್ಮ ರಾಜಕೀಯದಲ್ಲಿ ಬದಲಾವಣೆಯನ್ನು ಅನುಭವಿಸಿದ್ದಾರೆ. ಅವರೀಗ ಯಶಸ್ಸನ್ನು ಗಳಿಸಿದ್ದಾರೆ ಎಂದರು. ಅಲ್ಲದೆ, ರಾಹುಲ್ ಗಾಂಧಿ ಈಗ ವಿಭಿನ್ನ ರೀತಿಯ ರಾಜಕೀಯವನ್ನು ಅನುಸರಿಸುತ್ತಿದ್ದಾರೆ ಎಂದರು.
ಸೈಫ್ ಅಲಿಖಾನ್ ಅವರ ಸಿನಿಮಾ ವಿಚಾರಕ್ಕೆ ಬರುವುದಾದರೆ ಖಳನಾಯಕನಾಗಿ ನಟಿಸಿರುವ ಟಾಲಿವುಡ್ನ ದೇವರ ಸಿನಿಮಾ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಜೂ. ಎನ್ಟಿಆರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಕೊರಟಾಲ ಶಿವ ನಿರ್ದೇಶನ ಮಾಡಿದ್ದಾರೆ. (ಏಜೆನ್ಸೀಸ್)