ಭಾಷಾ ವಿಜ್ಞಾನಿ ಕೆವಿಎನ್​ಗೆ ಸಾಹಿತ್ಯ ಅಕಾಡೆಮಿಯ ಗರಿ

KV Narayana
Published on

ಬೆಂಗಳೂರು: ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿಯ 2024ನೇ ಸಾಲಿನ ಪ್ರಶಸ್ತಿ ಪ್ರಕಟಗೊಂಡಿದ್ದು, ಕನ್ನಡದ ವಿದ್ವಾಂಸ, ಭಾಷಾ ವಿಜ್ಞಾನಿ ಹಾಗೂ ವಿಮರ್ಶಕ ಪ್ರೊ. ಕೆ.ವಿ. ನಾರಾಯಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನಾರಾಯಣ ಅವರ ‘ನುಡಿಗಳ ಅಳಿವು’ ಎಂಬ ಸಾಹಿತ್ಯ ವಿಮರ್ಶಾ ಕೃತಿಗೆ ಲಭಿಸಿರುವ ಈ ಪ್ರಶಸ್ತಿ ಒಂದು ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. ದೆಹಲಿಯ ಕಪರ್ನಿಕಸ್ ಮಾರ್ಗದಲ್ಲಿನ ಕಮಾನಿ ಸಭಾಂಗಣದಲ್ಲಿ 2025 ಮಾರ್ಚ್ 8ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಕಾವ್ಯ, ಕಾದಂಬರಿ, ಸಣ್ಣ ಕಥೆಗಳು, ಪ್ರಬಂಧಗಳು, ಸಾಹಿತ್ಯ ವಿಮರ್ಶೆ, ನಾಟಕ ಮತ್ತು ಸಂಶೋಧನಾ ವಿಭಾಗಗಳಲ್ಲಿ ಬಂದ ಶಿಫಾರಸುಗಳಲ್ಲಿ ಕೆ.ವಿ. ನಾರಾಯಣ ಸೇರಿ 21 ಭಾಷೆಗಳ ಲೇಖಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಉರ್ದು, ಡೋಗ್ರಿ ಹಾಗೂ ಬಂಗಾಳಿ ಭಾಷೆಯ ಪ್ರಶಸ್ತಿಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಕೆ. ಶ್ರೀನಿವಾಸರಾವ್ ತಿಳಿಸಿದ್ದಾರೆ. ಕನ್ನಡ ವಿಭಾಗದ ಆಯ್ಕೆ ಸಮಿತಿಯಲ್ಲಿ ಒ.ಎಲ್. ನಾಗಭೂಷಣ ಸ್ವಾಮಿ, ಡಾ. ಹಳೆಮಣಿ ರಾಜಶೇಖರ್ ಮತ್ತು ಡಾ. ಸರೂಜ್ ಕಾಟ್ಕರ್ ಇದ್ದರು.

ವಿಜ್ಞಾನ ತಾತ್ವಿಕತೆಯ ಭಾಷಾತಜ್ಞ: ಮೈಸೂರು ಜಿಲ್ಲೆಯವರಾದ ಪ್ರೊ. ಕೆ.ವಿ. ನಾರಾಯಣ, ಕನ್ನಡ ಭಾಷಾಶಾಸ್ತ್ರಜ್ಞರು, ವಿಮರ್ಶಕರು, ಸಂಸ್ಕೃತಿ ಚಿಂತಕರೂ ಆಗಿ ಕನ್ನಡ ಭಾಷೆ ಕಟ್ಟುವ ಕಾರ್ಯಕ್ಕೆ ಕೊಡುಗೆ ನೀಡಿದ್ದಾರೆ. ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರದಲ್ಲಿ ಕೆಂಚಮ್ಮ ಹಾಗೂ ವೀರಣ್ಣ ದಂಪತಿಯ ಮಗನಾಗಿ 1948ರಲ್ಲಿ ಜನಿಸಿದರು. ಹುಟ್ಟೂರು ಮತ್ತು ತಾಲೂಕು ಕೇಂದ್ರ ಪಿರಿಯಾಪಟ್ಟಣದಲ್ಲಿ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿ, ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪದವಿ ಪೂರ್ವ ಶಿಕ್ಷಣ ಮುಗಿಸಿದರು. ನಂತರ ಇಂಜಿನಿಯರಿಂಗ್ ಮಾಡಲು ಅವಕಾಶವಿದ್ದರೂ ನಿರಾಕರಿಸಿ ಮೈಸೂರಿನ ಯುವರಾಜ ಕಾಲೇಜಿನಲ್ಲಿ ವಿಜ್ಞಾನದಲ್ಲಿ ಪದವಿ ಪಡೆದರು. ನಂತರ ಬಿಎಡ್ ಮುಗಿಸಿ ಹೈಸ್ಕೂಲಿನಲ್ಲಿ ಅಧ್ಯಾಪನ ವೃತ್ತಿ ಆರಂಭಿಸಿದರು. ಬಳಿಕ ಮುಂದಿನ ಓದಿಗಾಗಿ ಮತ್ತೆ ಬೆಂಗಳೂರು ಸೇರಿದರು. ಅಷ್ಟರಲ್ಲಿ ಸಾಹಿತ್ಯದ ಓದಿನೊಂದಿಗೆ ಬರವಣಿಗೆಯಲ್ಲೂ ತೊಡಗಿಸಿಕೊಂಡಿದ್ದ ಅವರು ಸಾಹಿತ್ಯದಲ್ಲೇ ಓದು ಮುಂದುವರೆಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರ ಸೇರಿ ಅಲ್ಲಿ ಜಿ.ಎಸ್.ಎಸ್. ಮಾರ್ಗದರ್ಶನದಲ್ಲಿ ಆನಂದವರ್ಧನನ ‘ಧ್ವನ್ಯಾಲೋಕ ಒಂದು ಅಧ್ಯಯನ’ ಮಾಡಿ ಪಿಎಚ್​ಡಿ ಪದವಿ ಪಡೆದರು. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಕೆಲಸ ಆರಂಭಿಸಿ, ಬೋಧಿಸಿದ್ದು ಸಾಹಿತ್ಯ, ಸಾಹಿತ್ಯ ಮೀಮಾಂಸೆ ಮತ್ತು ಭಾಷಾ ಶಾಸ್ತ್ರವನ್ನು. ವಿಜ್ಞಾನದ ತಾತ್ವಿಕತೆಯನ್ನಿರಿಸಿಕೊಂಡೇ ಕೆ.ವಿ.ಎನ್. ವಿಮರ್ಶಕರಾಗಿ, ಭಾಷಾಶಾಸ್ತ್ರಜ್ಞರಾಗಿ ಹಾಗೂ ಕನ್ನಡ ಸಂಸ್ಕೃತಿ ಚಿಂತಕರಾಗಿ ಬೆಳೆದರು. 1993ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ರಿಜಿಸ್ಟ್ರಾರ್ ಆಗಿ ಅಲ್ಲಿನ ಆಡಳಿತ ನಿರ್ವಹಣೆ ಮಾಡಿದ ಅವರು ಕನ್ನಡ ವಿಶ್ವವಿದ್ಯಾಲಯ ಕಟ್ಟುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ನಿವೃತ್ತಿ ನಂತರದಲ್ಲೂ ಭಾಷೆ, ಸಾಹಿತ್ಯ, ಶಿಕ್ಷಣ ಮತ್ತು ವಿಜ್ಞಾನ ಮೊದಲಾಗಿ ಕನ್ನಡಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಇವರ ಕೃತಿಗಳು: ಕನ್ನಡ ಜಗತ್ತು ಅರ್ಧ ಶತಮಾನ, ನಮ್ಮೊಡನೆ ನಮ್ಮ ನುಡಿ, ಕನ್ನಡ ಶೈಲಿ ಕೈಪಿಡಿ, ಶೈಲಿಶಾಸ್ತ್ರ, ಭಾಷೆಯ ಸುತ್ತಮುತ್ತ, ಬೇರು ಕಾಂಡ ಚಿಗುರು, ಮತ್ತೆ ಭಾಷೆಯ ಸುತ್ತಮುತ್ತ, ಕನ್ನಡ ನುಡಿಯ ಆಕರ ಕೋಶ, ನುಡಿಗಳ ಅಳಿವು, ದ್ವಿಭಾಷಿಕತೆ, ಭಾಷಾ ವಿಶ್ವಕೋಶ, ಸ್ಥಳ ನಾಮಗಳು: ಪರಿವರ್ತನೆ ಮತ್ತ ಪ್ರಭಾವ, ತೊಂಡುಮೇವು, ಸಾಹಿತ್ಯ ತತ್ವ:ಬೇಂದ್ರೆ ದೃಷ್ಟಿ, ಹುತ್ತವ ಬಡಿದರೆ, ಜೆನ್ ಕಥೆಗಳು ಇವರ ಪ್ರಮುಖ ಕೃತಿಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net