

ಕರರಿ (ಉತ್ತರ ಪ್ರದೇಶ): ಮಕ್ಕಳು ಆಟವಾಡುತ್ತಿರುವಾಗ ಅಚಾನಕ್ ಆಗಿ ಗುಂಡು ತಗುಲಿ ಬಾಲಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇಲ್ಲಿಯ ಕೌಶಾಂಬಿ ಜಿಲ್ಲೆಯ ಕರರಿಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ.
ಸ್ಥಳೀಯ ಬಿಜೆಪಿ ಮುಖಂಡನ 10 ವರ್ಷದ ಮಗನಿಂದ ಈ ಅಚಾತುರ್ಯ ನಡೆದಿದೆ. ನೆರೆಮನೆಯ ಬಾಲಕನನ್ನು ಅಚಾನಕ್ಕಾಗಿ ಗುಂಡಿಟ್ಟು ಕೊಂದಿದ್ದಾನೆ ಬಾಲಕ.
ಆಗಿದ್ದೇನೆಂದರೆ, ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜಯ್ ಜೈಸ್ವಾಲ್ ಅವರ 10 ವರ್ಷದ ಮಗ ನೆರೆ ಮನೆಯ ಮಕ್ಕಳೊಂದಿಗೆ ಕಳ್ಳ ಪೊಲೀಸ್ ಆಟವಾಡುತ್ತಿದ್ದ. ಈ ಆಟದಲ್ಲಿ ಬಾಲಕ ಪೊಲೀಸ್ ಆಗಿದ್ದ.
ಆಟದಲ್ಲಿ ಕಳ್ಳತನ ಮಾಡಲು ಬಂದಿದ್ದರು ನೆರೆಮನೆಯ ಮಕ್ಕಳು. ಅವರನ್ನು ಹೊಡೆದು ಓಡಿಸುವಾಗ ಏನೂ ಅರಿಯದ ಬಾಲಕ ಅಪ್ಪನ ಪರವಾನಗಿ ಇರುವ ಗನ್ ತಂದಿದ್ದಾನೆ. ಅದನ್ನು ಕಳ್ಳರಾಗಿದ್ದ ಮಕ್ಕಳ ಮೇಲೆ ಹಾರಿಸಿದ್ದಾನೆ. ಈ ಘಟನೆಯಲ್ಲಿ ಓರ್ವ ಬಾಲಕ ಸ್ಥಳದಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾನೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಯಾವುದೇ ದೂರು ದಾಖಲಾಗಿಲ್ಲ. ಈ ರೀತಿ ಗನ್, ಬಂದೂಕುಗಳನ್ನು ಸುಲಭದಲ್ಲಿ ಮಕ್ಕಳ ಕೈಗೆ ಸಿಗುವಂತೆ ಇಡುವ ಪಾಲಕರಿಗೆ ಈ ಘಟನೆ ಪಾಠದಂತಾಗಿದೆ. ಮಕ್ಕಳ ಆಟದಲ್ಲಿ ಮುಗ್ಧ ಬಾಲಕ ಪ್ರಾಣ ಕಳೆದುಕೊಂಡಿದ್ದು, ಅವರ ಪಾಲಕರ ಆಕ್ರಂದನ ನೋಡಲಾಗುತ್ತಿಲ್ಲ (ಏಜೆನ್ಸೀಸ್)