

ಇಂದೋರ್ (ಮಧ್ಯಪ್ರದೇಶ): ಅತ್ಯಂತ ಭಯಾನಕ ಎನ್ನುವ ಘಟನೆಯೊಂದರಲ್ಲಿ ಇಂದೋರ್ ಮಹಾನಗರ ಪಾಲಿಕೆಯ ಉಪ ಆಯುಕ್ತ ಪ್ರತಾಪ್ ಸೋಲಂಕಿ ಅವರು ನಿರ್ಗತಿಕರನ್ನು ಟ್ರಕ್ನಿಂದ ತಳ್ಳುವ ಘಟನೆ ನಡೆದಿದೆ.
ಮನೆಯಿಲ್ಲದ ನಿರ್ಗತಿಕರನ್ನು ಟ್ರಕ್ ಒಂದರಲ್ಲಿ ಕೂಡಿಹಾಕಿ ಅವರನ್ನು ಕೊರೆಯುವ ಚಳಿಯಲ್ಲಿ ರಸ್ತೆಯ ಮೇಲೆ ದೂಡುತ್ತಿರುವ ಭಯಾನಕ ದೃಶ್ಯ ಇದಾಗಿದೆ. ಈ ಘಟನೆಯನ್ನು ಸ್ಥಳೀಯರು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಈ ಘಟನೆ ವೈರಲ್ ಆಗುತ್ತಿದ್ದಂತೆಯೇ, ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಶಿವರಾಜ್ಸಿಂಗ್ ಚೌಹಾಣ್ ಅವರು ಅಧಿಕಾರಿ ಸೋಲಂಕಿ ಅವರನ್ನು ಅಮಾನತು ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಇದೊಂದು ಅತ್ಯಂತ ಹೇಯ ಕಾರ್ಯವಾಗಿದೆ. ಆದ್ದರಿಂದ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ. ಇವರ ಜತೆಗೆ ಈ ಕೃತ್ಯದಲ್ಲಿ ಭಾಗಿಯಾಗಿರುವ ಇಬ್ಬರು ನೌಕರನನ್ನು ಸೇವೆಯಿಂದ ವಜಾ ಮಾಡಲಾಗಿದೆ ಎಂದು ಹೇಳಿದ್ದಾರೆ.
ಅತಿಕ್ರಮಣ ಮಾಡಿಕೊಂಡು ನೆಲೆಸಿರುವ ನಿರ್ಗತಿಕರು, ವೃದ್ಧರನ್ನು ಒಂದು ಟ್ರಕ್ನಲ್ಲಿ ಕರೆದುಕೊಂಡು ಬರುವ ಅಧಿಕಾರಿಗಳು ಅವರನ್ನು ಅವರ ವಸ್ತುಗಳ ಸಹಿತ ನಗರದ ಹೊರವಲಯದಲ್ಲಿ ರಸ್ತೆಯ ಮೇಲೆ ಎಸೆದುಹೋಗುತ್ತಿರುವ ದೃಶ್ಯ ಈ ವಿಡಿಯೋದಲ್ಲಿ ದಾಖಲಾಗಿದೆ. ಇವರ ಪೈಕಿ ಹಲವರು ವಯೋವೃದ್ಧರಾಗಿರುವುದನ್ನು ನೋಡಬಹುದು.
"ವಯಸ್ಸಾದವರ ಬಗ್ಗೆ ಅಮಾನವೀಯ ವರ್ತನೆಯ ಬಗ್ಗೆ ನನಗೆ ಮಾಹಿತಿ ಬಂದಿದೆ. ಪುರಸಭೆಯ ಉಪ ಆಯುಕ್ತರು ಮತ್ತು ಇಬ್ಬರು ನೌಕರರನ್ನು ಅಮಾನತುಗೊಳಿಸಲಾಗಿದೆ ಮತ್ತು ವೃದ್ಧರ ಸಂಪೂರ್ಣ ಆರೈಕೆ ಮಾಡುವಂತೆ ಇಂದೋರ್ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಚೌಹಾಣ್ ಹೇಳಿದ್ದಾರೆ.