'ಗೋಮಾಂಸ ಹಬ್ಬ' ವಿರೋಧಿಸಿ ಹಲ್ಲೆ: ಬಿಜೆಪಿ ಶಾಸಕನಿಗೆ ಒಂದು ವರ್ಷ ಜೈಲು

Raja Singh
Published on

ಹೈದರಾಬಾದ್: ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್‌ ಅವರಿಗೆ ಒಂದು ವರ್ಷಗಳ ಶಿಕ್ಷೆ ವಿಧಿಸಿ ಸೆಷನ್ಸ್​ ಕೋರ್ಟ್​ ಆದೇಶ ಹೊರಡಿಸಿದೆ.

2015ರಲ್ಲಿ ನಡೆದಿರುವ ಪ್ರಕರಣ ಇದಾಗಿದೆ. 2015ರ ಡಿಸೆಂಬರ್​ 12ರಂದು ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಗೋಮಾಂಸ ಹಬ್ಬ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಇದನ್ನು ಪ್ರತಿಭಟಿಸಿ ಕೆಲವು ಬಿಜೆಪಿ ನಾಯಕರು ಸ್ಥಳಕ್ಕೆ ಆಗಮಿಸಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು.

ಪೊಲೀಸ್​ ಇನ್ಸ್​ಪೆಕ್ಟರ್​ ಮಲ್ಲೇಶ್​ ಅವರು ಕೂಡ ಅಲ್ಲಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಾಗ ಮಲ್ಲೇಶ್​ ಅವರ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಆರೋಪವನ್ನು ರಾಜಾ ಸಿಂಗ್​ ಎದುರಿಸುತ್ತಿದ್ದಾರೆ. ಹಲ್ಲೆ ನಡೆಸಿರುವುದು ನಿಜ ಎಂದ ಸೆಷನ್ಸ್​ ಕೋರ್ಟ್​ ಒಂದು ವರ್ಷ ಜೈಲುಶಿಕ್ಷೆ ನೀಡಿದೆ.

ಈ ಶಿಕ್ಷೆಯನ್ನು ಪ್ರಶ್ನಿಸಿ ರಾಜಾ ಸಿಂಗ್​ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಿರುವ ಹಿನ್ನೆಲೆಯಲ್ಲಿ ಅವರನ್ನು ಕೋರ್ಟ್​ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.

ಹಿಂಸಾಚಾರ ಮತ್ತು ದ್ವೇಷಕ್ಕೆ ಪ್ರಚೋದನೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಕಳೆದ ಸೆಪ್ಟೆಂಬರ್​ನಲ್ಲಿ ವಿವಾದ ಸೃಷ್ಟಿಸಿದ್ದ ಶಾಸಕ ರಾಜಾ ಸಿಂಗ್‌ ಅವರನ್ನು ಫೇಸ್​ಬುಕ್​ನಿಂದ ಕಳೆದ ಸೆಪ್ಟೆಂಬರ್​ನಲ್ಲಿ ನಿಷೇಧಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net