

ನವದೆಹಲಿ: ಇಂದು ನಸುಕಿನಲ್ಲಿ ಆವರಿಸಿದ್ದ ದಟ್ಟ ಮಂಜಿನಿಂದಾಗಿ ಮೊರಾದಾಬಾದ್-ಆಗ್ರಾ ಹೆದ್ದಾರಿಯಲ್ಲಿ ಟ್ರಕ್ ಮತ್ತು ಬಸ್ ಮುಖಾಮುಖು ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ 10 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಮೊರದಾಬಾದ್-ಆಗ್ರಾ ಹೆದ್ದಾರಿಯಲ್ಲಿ ನಡೆದಿದೆ.
ಕುಂಡರ್ಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಮಿನಿ ಬಸ್ ಮತ್ತು ಕ್ಯಾಂಟರ್ ಟ್ರಕ್ ಮಧ್ಯೆ ಢಿಕ್ಕಿ ಸಂಭವಿಸಿದೆ. ಮೂರು ವಾಹನಗಳು ಪರಸ್ಪರ ಢಿಕ್ಕಿ ಹೊಡೆದಿವೆ. ಓವರ್ ಟೇಕ್ ಮಾಡುವ ಭರದಲ್ಲಿ ಈ ಘಟನೆ ಸಂಭವಿಸಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಘಟನೆಯ ಸ್ಥಳದಿಂದ ವಾಹನಗಳನ್ನು ತೆರವುಗೊಳಿಸಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸುವ ಕೆಲಸ ಮುಗಿದಿದ್ದು ವಿಧಿ ವಿಜ್ಞಾನ ಪ್ರಯೋಗಾಲಯ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತಿದೆ.
ಜಿಲ್ಲಾ ಮ್ಯಾಜಿಸ್ಟ್ರೇಟ್, ಎಸ್ ಪಿ, ಸಿಎಂಒ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಮತ್ತು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ. ಪರಿಹಾರ ಮತ್ತು ರಕ್ಷಣಾ ಕಾರ್ಯಗಳು ಸದ್ಯ ನಡೆಯುತ್ತಿವೆ.
ಈ ನಡುವೆಯೇ, ಘಟನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಿ, ಸಂತ್ರಸ್ತರಿಗೆ ನೆರವು ಹಾಗೂ ಆರೋಗ್ಯ ಸೇವೆ ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಜತೆಗೆ, ಮೃತರ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ.
ಕಳೆದ ಮಂಗಳವಾರವಷ್ಟೇ ಭಡೋಹಿಯ ಗೋಪಿಗಂಜ್ ಪ್ರದೇಶದಲ್ಲಿ ನಿಂತಿದ್ದ ಟ್ರಕ್ ಗೆ ಆಂಬುಲೆನ್ಸ್ ಡಿಕ್ಕಿ ಹೊಡೆದು ಐವರು ಮೃತಪಟ್ಟಿದ್ದರು. ನಸುಕಿನಲ್ಲಿ ದಟ್ಟ ಮಂಜು ಆವರಿಸುವ ಕಾರಣ, ಎದುರು ಬರುತ್ತಿರುವ ವಾಹನಗಳು ಕಾಣಿಸುವುದಿಲ್ಲ. ಇದರ ಜತೆಗೆ ಓವರ್ಟೇಕ್ ಮಾಡುವುದು ಅಥವಾ ಅತಿ ವೇಗದಲ್ಲಿ ಚಾಲನೆ ಮಾಡುವುದರಿಂದ ಇಂಥ ಅವಘಡಗಳು ಸಂಭವಿಸುತ್ತಿವೆ ಎಂದು ಪೊಲೀಸರು ಹೇಳಿದ್ದಾರೆ.