

ಮುಂಬೈ: ಇತ್ತೀಚಿನ ದಿನಗಳಲ್ಲಿ ಪ್ರೀತಿ, ಬ್ರೇಕಪ್ ಎಲ್ಲವೂ ಕಾಮನ್ ಆಗಿಬಿಟ್ಟಿದೆ. ಅದರಲ್ಲಿಯೂ ಇಂದಿನ ಹುಡುಗಿಯರು ಹೆಚ್ಚು ಹಣ ಇರೋ ಹುಡುಗರನ್ನು ಇಷ್ಟಪಡುತ್ತಾರೆ, ಹಣ ಇಲ್ಲದಿದ್ರೆ ಅವರ ಬಳಿ ಸುಳಿಯುವುದೂ ಇಲ್ಲ ಎಂಬ ಆಪಾದನೆಯೂ ಇದೆ. ಅದಕ್ಕೆ ಅನ್ವಯ ಎನ್ನುವಂಥ ಘಟನೆಯೊಂದು ಮುಂಬೈನಲ್ಲಿ ನಡೆದಿದೆ.
ಮಹಾರಾಷ್ಟ್ರ ರಾಜ್ಯದ ಮುಂಬೈನ ಅಂಧೇರಿಯ ಲೋಖಂಡವಾಲಾನ ನಿವಾಸಿ ಪ್ರೀತೇಶ್ ಮಾಂಜ್ರೇಕರ್ ಎಂಬಾತ ಕೈಕೊಟ್ಟ ಪ್ರೇಯಸಿಯ ಮನೆಯನ್ನೇ ದೋಚಿದ್ದಾನೆ. ತನ್ನ ಸ್ನೇಹಿತರ ಜತೆಗೂಡಿ ಈತ ಈ ಕೃತ್ಯ ಎಸಗಿದ್ದಾನೆ. ದರೋಡೆ ಮಾಡುವುದು ಮಹಾ ಅಪರಾಧವಾದರೂ ಈತ ಮನೆ ದೋಚಿರುವುದಕ್ಕೆ ನೀಡಿರುವ ಕಾರಣ ಕೇಳಿ ಪೊಲೀಸರಿಗೇ ಅಯ್ಯೋ ಪಾಪ ಎನಿಸಿರಲಿಕ್ಕೂ ಸಾಕು.
ಅಷ್ಟಕ್ಕೂ ಆಗಿರೋದು ಏನೆಂದರೆ, ಈತ ಶ್ರೀಮಂತರ ಮಗಳೊಬ್ಬಳನ್ನು ಪ್ರೀತಿಸುತ್ತಿದ್ದ. ಆಕೆಯೂ ಈತನನ್ನು ಪ್ರೀತಿಸುತ್ತಿದ್ದಳು. ಆದರೆ ಈತನ ಬಳಿ ತಾನು ಕೇಳಿದ್ದೆಲ್ಲಾ ಕೊಡುವಷ್ಟು ಹಣ ಇಲ್ಲ, ಈತ ತಾನು ಅಂದುಕೊಂಡಷ್ಟು ಶ್ರೀಮಂತನಲ್ಲ ಎಂದುಕೊಂಡ ಈ ಪ್ರೇಯಸಿ ಬ್ರೇಕಪ್ ಮಾಡಿಕೊಂಡು ಬಿಟ್ಟಿದ್ದಾಳೆ.
ಹಣಕ್ಕಾಗಿ ತನ್ನನ್ನು ಪ್ರಿಯತಮೆ ದೂರ ಮಾಡಿದ್ದು ಈ ಪ್ರೀತೇಶ್ಗೆ ಸಹಿಸಿಕೊಳ್ಳಲು ಆಗಲಿಲ್ಲ. ಆದ್ದರಿಂದ ಉಪಾಯ ಮಾಡಿದ್ದಾನೆ. ಅದೇನೆಂದರೆ ಆಕೆಯ ಮನೆಯನ್ನು ದೋಚುವುದು. ಅದರಂತೆ ತನ್ನ ಸ್ನೇಹಿತೆಯ ಮನೆಯ ನಕಲಿ ಕೀ ರೆಡಿ ಮಾಡಿಕೊಂಡಿದ್ದಾನೆ. ಆಕೆಯ ಮನೆಯವರು ಬೇರೆ ಕಡೆ ಹೋಗಿದ್ದಾಗ, ತನ್ನ ಪ್ರೇಯಸಿಯನ್ನು ಹೋಟೆಲ್ಗೆ ಕರೆಸಿಕೊಂಡಿದ್ದಾನೆ. ನಿನ್ನ ಜತೆ ಮಾತನಾಡಬೇಕು ಬಾ ಎಂದು ಕರೆಸಿಕೊಂಡಿದ್ದಾನೆ. ಇದೇ ವೇಳೆ ನಕಲಿ ಕೀಯನ್ನು ತನ್ನ ಸ್ನೇಹಿತರಾದ ರೋಹಿತ್ ಕೋರ್ಡೆ ಮತ್ತು ರೋಹಿತ್ ಹೆಗ್ಡೆಗೆ ನೀಡಿದ್ದಾನೆ. ಇವರು ಹೋಟೆಲ್ನಲ್ಲಿ ಇರುವಾಗ ಅತ್ತ ಸ್ನೇಹಿತರು ಮನೆಗೆ ಕನ್ನ ಹಾಕಿದ್ದಾರೆ. ಚಿನ್ನಾಭರಣ, ಹಣ ಎಲ್ಲವನ್ನೂ ದೋಚಿ ಅವರು ಪರಾರಿಯಾಗಿದ್ದಾರೆ. ಕೊನೆಗೆ ಗೆಳತಿ ಜತೆಗೆ ಬಂದು ತಾನೂ ಕಳುವಾಗಿರುವ ಬಗ್ಗೆ ದೂರು ದಾಖಲು ಮಾಡಿದ್ದಾನೆ!
ಈ ಬಗ್ಗೆ ಪ್ರಕರಣ ದಾಖಲಾಗುತ್ತಲೇ, ಕಳ್ಳರಿಗಾಗಿ ಬಲೆ ಬೀಸಿದಾಗ ಈ ಪ್ರಿಯಕರನ ಸ್ನೇಹಿತರು ಸಿಕ್ಕಿಬಿದ್ದಿದ್ದಾರೆ. ಅವರನ್ನು ಪೊಲೀಸರು ತಮ್ಮದೇ ಭಾಷೆಯಲ್ಲಿ ವಿಚಾರಿಸಿದಾಗ ಪ್ರೀತೇಶ್ ಹೆಸರು ಹೇಳಿದ್ದಾರೆ. ನಂತರ ಪೊಲೀಸರು ಪ್ರೀತೇಶ್ನನ್ನು ಅರೆಸ್ಟ್ ಮಾಡಿ ದರೋಡೆ ಮಾಡಿರುವ ಕಾರಣ ಕೇಳಿದ್ದಾರೆ.
ಆಗ ಈ ಪ್ರೇಮಿ ಹೇಳಿದ್ದಿಷ್ಟು: 'ನಾವಿಬ್ಬರೂ ತುಂಬಾ ಪ್ರೀತಿಸುತ್ತಿದ್ದೆವು. ಆದರೆ ನಾನು ಅಷ್ಟು ಶ್ರೀಮಂತನಲ್ಲ ಎಂದು ಗೊತ್ತಾದ ತಕ್ಷಣ ಅವಳು ಬ್ರೇಕಪ್ ಮಾಡಿಕೊಂಡಿದ್ದಾಳೆ. ಆದರೆ ಅವಳನ್ನು ಬಿಟ್ಟು ಇರಲು ನನ್ನಿಂದ ಸಾಧ್ಯವಾಗಲಿಲ್ಲ. ಅವಳಿಗೆ ಬೇಕಾಗಿದ್ದು ಹಣ ಎನ್ನುವುದು ತಿಳಿಯುತ್ತಲೇ ಅವಳ ಮನೆ ದೋಚುವ ಪ್ಲ್ಯಾನ್ ಮಾಡಿದೆ. ನಾನು ಎಷ್ಟೇ ದುಡಿದರೂ ಅವಳು ಕೇಳಿದ್ದನ್ನೆಲ್ಲಾ ಕೊಡಿಸುವುದು ಕಷ್ಟ ಆಗುತ್ತಿತ್ತು. ಆದ್ದರಿಂದ ಅವಳ ಬಳಿಯೇ ಏನೂ ಇಲ್ಲದ ಹಾಗೆ ಮಾಡಿಬಿಟ್ಟರೆ ಹೇಗೆ ಎನ್ನುವ ಯೋಚನೆ ಬಂತು. ಅದಕ್ಕಾಗಿ ಅವರ ಮನೆಯನ್ನೇ ದೋಚಿಬಿಟ್ಟರೆ ಅವಳ ಬಳಿ ಏನೂ ಉಳಿಯುವುದಿಲ್ಲ. ಅದಕ್ಕಾಗಿ ಹಣ ಬೇಕೆಂದು ಪುನಃ ನನ್ನ ಬಳಿಯೇ ಬರುವ ಸ್ಥಿತಿ ನಿರ್ಮಾಣ ಆಗುತ್ತದೆ. ಆಗ ನಾನು ಮತ್ತೆ ಅವಳನ್ನು ಪಡೆಯಬಹುದು. ಆದ್ದರಿಂದ ಮನೆಯನ್ನು ದೋಚಿದ್ದೇನೆ' ಎಂದಿದ್ದಾನೆ.
ಸದ್ಯ ಎಲ್ಲಾ ಆರೋಪಿಗಳ ವಿರುದ್ಧ ಕೇಸ್ ದಾಖಲಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. (ಏಜೆನ್ಸೀಸ್)