

ಹೈದರಾಬಾದ್: 'ಅದೇನದೋ ನಿನ್ನ ಇನ್ಸ್ಟಾಗ್ರಾಂನಲ್ಲಿ ಇರೋ ಡೇಟು? ನಿನ್ನ ಹುಟ್ಟಿದ ಹಬ್ಬ ಅಂತೂ ಅಲ್ಲ, ಮತ್ಯಾಕೆ ಆ ದಿನಾಂಕ ಬರೆದುಕೊಂಡಿರುವಿ?' ಎಂದು 10 ನೇ ತರಗತಿ ವಿದ್ಯಾರ್ಥಿ ಶಿವಲೋಕೇಶ್ನನ್ನು ಆತನ ಸ್ನೇಹಿತ ಕೇಳಿದ್ದ. ಆಗ ಶಿವಲೋಕೇಶ್ ಅದು ನನ್ನ ಬರ್ತ್ಡೇಟ್ ಅಲ್ಲವೋ, ಡೆತ್ ಡೇಟ್ ಎಂದಿದ್ದ. ಆ ಸ್ನೇಹಿತನ ಹುಟ್ಟುಹಬ್ಬ ಇದ್ದುದರಿಂದ ಆತನಿಗೆ ಶುಭಾಶಯ ಕೂಡ ಕೋರಿದ್ದ.
ಮಾರನೆಯ ದಿನವೇ ಬಂದ ಸುದ್ದಿ ಕೇಳಿ ಆ ಸ್ನೇಹಿತನಿಗೆ ಆಕಾಶವೇ ಕಳಚಿ ಬಿದ್ದಂತಾಯಿತು. ಏಕೆಂದರೆ ಹಿಂದಿನ ದಿನವಷ್ಟೇ ತನಗೆ ವಿಷ್ ಮಾಡಿದ್ದ ಸ್ನೇಹಿತ ಶಿವಲೋಕೇಶ್ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಯಿತು! ಮತ್ತೊಮ್ಮೆ ಆತನ ಇನ್ಸ್ಟಾಗ್ರಾಂ ನೋಡಿದಾಗ ಅಲ್ಲಿ ನಮೂದಾಗಿದ್ದ ದಿನಾಂಕವೇ ಆತನ ಸಾವಿನ ದಿನ ಎಂದು ತಿಳಿಯುವಷ್ಟರಲ್ಲಿ ಎಲ್ಲವೂ ಮುಗಿದು ಹೋಗಿತ್ತು. ಅದು ತನ್ನ ಡೆತ್ಡೇಟ್ ಎಂದು ಶಿವಲೋಕೇಶ್ ಹೇಳಿದ್ದಾಗ ಅದನ್ನು ತಮಾಷೆ ಎಂದುಕೊಂಡು ನಕ್ಕಿದ್ದ ಸ್ನೇಹಿತನಿಗೆ ಈ ವಿಷಯ ಜೀರ್ಣಿಸಿಕೊಳ್ಳಲು ಆಗಲಿಲ್ಲ.
ಈ ದುರ್ಘಟನೆ ನಡೆದಿರುವುದು ತೆಲಂಗಾಣದ ಭದ್ರಾದ್ರಿ ಕೊತಗುಡೆಂನಲ್ಲಿ. 14 ವರ್ಷದ ಶಿವಲೋಕೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿಗೆ ನಿಖರ ಕಾರಣ ಏನೆಂದು ತಿಳಿದುಬಂದಿಲ್ಲ. ಆದರೆ ಹಿಂದಿನ ದಿನವಷ್ಟೇ (ಜುಲೈ 19) ಸ್ನೇಹಿತನಿಗೆ ಹುಟ್ಟುಹಬ್ಬದ ಶುಭಾಶಯ ಹೇಳುವಾಗಲೂ ಸರಿಯಾಗಿಯೇ ಇದ್ದಂತೆ ತೋರುತ್ತಿದ್ದ ಈ ಬಾಲಕ, ಕೆಲ ದಿನಗಳ ಹಿಂದೆಯೇ ತನ್ನ ಸಾವಿನ ದಿನವನ್ನು (20-07-22) ಏಕೆ ಬರೆದಿಟ್ಟ ಎನ್ನುವುದು ಮಾತ್ರ ನಿಗೂಢವಾಗಿಯೇ ಉಳಿದಿದೆ. ಇನ್ಸ್ಟಾಗ್ರಾಮ್ನ ಪ್ರೊಫೈಲ್ನಲ್ಲಿ ಈ ದಿನಾಂಕವನ್ನು ನಮೂದು ಮಾಡಲಾಗಿದೆ.
ಶಿವಲೋಕೇಶ್ ಮೊಬೈಲ್ ಗೀಳು ಹಚ್ಚಿಕೊಂಡಿದ್ದ. ಸಾಮಾಜಿಕ ಜಾಲತಾಣದಲ್ಲಿ ಸದಾ ಮುಳುಗಿರುತ್ತಿದ್ದ. ಸ್ನೇಹಿತರ ಬಳಿಯೂ ಅಷ್ಟೆಲ್ಲಾ ಸರಿಯಾಗಿ ವರ್ತಿಸುತ್ತಿರಲಿಲ್ಲ. ಯಾವಾಗ ನೋಡಿದರೂ ಮೊಬೈಲ್ ಗುಂಗಿನಲ್ಲಿ ಇರುತ್ತಿದ್ದ. ಇದೇ ಆತನ ಸಾವಿಗೆ ಕಾರಣ ಆಗಿರಬಹುದು, ಮೊಬೈಲ್ನಲ್ಲಿ ಯಾವುದೋ ಆಟದ ಹುಚ್ಚು ಇಲ್ಲವೇ ವಿಡಿಯೋ ನೋಡಿ ಸಾವಿನ ಹಾದಿ ತುಳಿದಿರಬಹುದು ಎಂದು ಸ್ನೇಹಿತರು ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)