

ವಿಜಯನಗರ: ತಾನು ಪ್ರೀತಿಸಿದ ಹುಡುಗಿ ತನ್ನನ್ನು ಮದುವೆಯಾಗಲಿಲ್ಲ ಎನ್ನುವ ಕಾರಣಕ್ಕೆ ಆಕೆಯ ರುಂಡ ಕಡಿದು ರುಂಡದ ಜತೆಗೆ ಪೊಲೀಸ್ ಠಾಣೆಗೆ ಬಂದ ಭೀಕರ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕನ್ನಬೋರನಯ್ಯನ ಹಟ್ಟಿಯಲ್ಲಿ ನಡೆದಿದೆ.
ನಿರ್ಮಲಾ (23 ) ಭೀಕರವಾಗಿ ಹತ್ಯೆಯಾದ ಯುವತಿ. ಭೋಜರಾಜ ಎನ್ನುವ ಪಾಗಲ್ ಪ್ರೇಮಿ ಈ ಕೃತ್ಯ ಎಸಗಿದ್ದಾನೆ.
ಭೋಜರಾಜ ನಿರ್ಮಲಾಳನ್ನು ಪ್ರೀತಿಸುತ್ತಿದ್ದ. ನಿರ್ಮಲಾ ಬಿಎಸ್ಸಿ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಳು. ನಿರ್ಮಲಾಳನ್ನು ಮದುವೆ ಮಾಡಿಕೊಂಡುವಂತೆ ಈ ಮೊದಲು ಆಕೆಯ ಪಾಲಕರಲ್ಲಿ ಈತ ಕೇಳಿದ್ದ. ಆದರೆ ಆಕೆಯ ಮನೆಯವರು ಒಪ್ಪಿರಲಿಲ್ಲ.
ಈ ಹಿನ್ನೆಲೆಯಲ್ಲಿ ಬೇರೊಬ್ಬಳನ್ನು ಎರಡು ತಿಂಗಳ ಹಿಂದೆ ಮದುವೆಯಾಗಿದ್ದ ಭೋಜರಾಜ. ಆದರೆ ನಿರ್ಮಲಾಳ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ. ಬೇರೊಂದು ಊರಿನಲ್ಲಿ ಬಿಎಸ್ಸಿ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ನಿರ್ಮಲಾ, ಪರೀಕ್ಷೆಗಾಗಿ ಓದಲು ಊರಿಗೆ ಬಂದಿದ್ದಳು.
ಇದೇ ಸಮಯಕ್ಕೆ ಕಾಯುತ್ತಿದ್ದ ಈ ಪಾಗಲ್ ಪ್ರೇಮಿ, ಮಚ್ಚಿನಿಂದ ಆಕೆಯ ತಲೆ ಕಡಿದು ರುಂಡದೊಂದಿಗೆ ಠಾಣೆಗೆ ಶರಣಾಗಿದ್ದಾನೆ! ಕೂಡ್ಲಿಗಿ ತಾಲೂಕಿನ ಖಾನಾಹೊಸಹಳ್ಳಿ ಠಾಣೆಗೆ ಯುವತಿಯ ರುಂಡದೊಂದಿಗೆ ಬಂದಿದ್ದಾನೆ ಈತ. ಸ್ಥಳಕ್ಕೆ ಹಿರಿಯ ಪೊಲೀಸ ಅಧಿಕಾರಿಗಳು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)