

ಪುಣೆ: ಸೈಬರ್ ವಂಚನೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಇವುಗಳ ಕುರಿತು ಮಾಧ್ಯಮಗಳಲ್ಲಿ ಎಷ್ಟೇ ಮಾಹಿತಿ ನೀಡಿದರೂ, ಮೋಸದ ಜಾಲಕ್ಕೆ ಒಳಗಾಗಬೇಡಿ ಎಂದು ದಿನೇ ದಿನೇ ವರದಿಯಾಗುತ್ತಿದ್ದರೂ ಇದಕ್ಕೆ ಬಲಿಯಾಗುತ್ತಿರುವವರು ಹಲವರು. ಅದರಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಸೈಬರ್ ವಂಚನೆಗೆ ಗುರಿಯಾಗುತ್ತಿರುವವರು ಮಹಿಳೆಯರು.
ಆದರೆ ಇದೀಗ ನಾಲ್ವರು ಶಾಸಕಿಯರು ಸೈಬರ್ ವಂಚನೆಗೆ ಗುರಿಯಾಗಿರುವುದು ಬೆಳಕಿಗೆ ಬಂದಿದೆ. ಈ ನಾಲ್ವರು ಕೂಡ ಬಿಜೆಪಿ ಶಾಸಕಿಯರು. ಯುವಕನೊಬ್ಬನಿಗೆ ಕರುಣೆ ತೋರಿ ಮೋಸ ಹೋಗಿದ್ದಾರೆ ಇವರು.
ಆಗಿದ್ದೇನೆಂದರೆ, ತಾಯಿಯ ಅನಾರೋಗ್ಯದ ನೆಪ ಹೇಳಿ ಈ ಶಾಸಕಿಯರಿಗೆ ಟೋಪಿ ಹಾಕಿದ್ದಾನೆ ಪುಣೆಯ ಯುವಕ. ಎಲ್ಲರಿಗೂ ಕರೆ ಮಾಡಿರುವ ಈತ ತನ್ನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಸಹಾಯ ಮಾಡಿ ಎಂದು ಗೋಗರೆದಿದ್ದಾನೆ. ಈತನ ಕಣ್ಣೀರಿಗೆ ಕರಗಿದ ಶಾಸಕಿಯರು ಗೂಗಲ್ ಪೇ ಮೂಲಕ ಹಣ ನೀಡಿದ್ದಾರೆ. ನಂತರ ತಾವು ಮೋಸ ಹೋಗಿರುವುದು ತಿಳಿದುಬಂದಿದೆ.
ಮಾಧುರಿ ಮಿಸಾಲ್, ಶ್ವೇತಾ ಮಹಾಲೆ, ಮೇಘನಾ ಬೋರ್ಡಿಕರ್, ದೇವಯಾನಿ ಫರಾಂಡೆ ವಂಚನೆಗೊಳಗಾದವರು. ಮುಖೇಶ್ ರಾಥೋಡ್ ಎಂಬ ಯುವಕನೇ ಇವರನ್ನೆಲ್ಲಾ ಮೋಸ ಮಾಡಿದ್ದಾನೆ. ಸದ್ಯ ಶಾಸಕಿಯರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಯುವಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. (ಏಜೆನ್ಸೀಸ್)