

ಬೆಂಗಳೂರು: ಏಕಾಏಕಿ ಖಾತೆ ಬದಲಾವಣೆಯಿಂದಾಗಿ ಅಸಮಾಧಾನಗೊಂಡಿರುವ ಸಚಿವ ಶ್ರೀರಾಮುಲು ಇದೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಎದುರು ಹೊಸ ಬೇಡಿಕೆಯನ್ನು ಇಟ್ಟಿದ್ದಾರೆ.
ಖಾತೆ ಬದಲಾವಣೆಯಿಂದ ಮುನಿಸಿಕೊಂಡರೂ ಒಲ್ಲದ ಮನಸ್ಸಿನಿಂದಲೇ ಸಮಾಧಾನಗೊಂಡಂತಿರುವ ಶ್ರೀರಾಮುಲು ಇದೀಗ ಇಟ್ಟಿರುವ ಹೊಸ ಬೇಡಿಕೆಯಿಂದ ಇದೀಗ ರಾಜಕೀಲ ವಲಯದಲ್ಲಿ ಭಾರಿ ಚರ್ಚೆ ಶುರುವಾಗಿದೆ ಎನ್ನಲಾಗಿದೆ.
ಅಷ್ಟಕ್ಕೂ ಇವರು ಇಟ್ಟಿರುವ ಹೊಸ ಬೇಡಿಕೆ ಎಂದರೆ ತಮ್ಮನ್ನು ಉಪಮುಖ್ಯಮಂತ್ರಿ ಮಾಡಬೇಕು ಎನ್ನುವುದು! 2018ರ ವಿಧಾನಸಭೆ ಚುನಾವಣೆ ವೇಳೆ ತಮ್ಮನ್ನು ಉಪಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿಸಲಾಗಿತ್ತು. ಹೀಗಾಗಿ ತಮಗೆ ಇದೀಗ ಅದೇ ಹುದ್ದೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆಗಳನ್ನು ನನ್ನಿಂದ ಹಿಂದಕ್ಕೆ ಪಡೆಯಲಾಗಿದೆ. ಕಡೇ ಪಕ್ಷ ನನಗೆ ಡಿಸಿಎಂ ಸ್ಥಾನವನ್ನಾದರೂ ನೀಡಲೇಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪನವರಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಉಪಮುಖ್ಯಮಂತ್ರಿ ಮಾಡಬೇಕು ಎಂಬುದು ನನ್ನ ಹಳೆಯ ಬೇಡಿಕೆ. ಈಗಿರುವ ಹೊಸ ಸಮಾಜ ಕಲ್ಯಾಣ ಖಾತೆ ಜತೆಗೆ ಡಿಸಿಎಂ ಹುದ್ದೆಯನ್ನೂ ನಿಭಾಯಿಸಬಲ್ಲೆ. ಜನರ ಬೇಡಿಕೆಯನ್ನು ಈಡೇರಿಸುವುದು ಪಕ್ಷದ ಜವಾಬ್ದಾರಿಯಾಗಿದೆ ಎಂದು ಶ್ರೀರಾಮುಲು ಯಡಿಯೂರಪ್ಪನವರ ಎದುರು ಹೇಳಿದ್ದಾರೆ ಎಂದೇ ಹೇಳಲಾಗುತ್ತಿದೆ.
ವಾಲ್ಮೀಕಿ ಸಮುದಾಯದವರಾಗಿರುವ ಶ್ರೀರಾಮುಲು, ರಾಜ್ಯದಲ್ಲಿರುವ ವಾಲ್ಮೀಕಿ ಸಮುದಾಯದ 60 ಲಕ್ಷ ಮಂದಿ ತಮ್ಮನ್ನು ಡಿಸಿಎಂ ಮಾಡಬೇಕು ಎಂದು ಬಯಸಿದ್ದಾರೆ ಎಂದು ಈ ಹಿಂದೆ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದು, ಇಲ್ಲಿ ಉಲ್ಲೇಖಾರ್ಹ.