ಚೆನ್ನೈಗೆ ಎಂಟ್ರಿ ಕೊಡುತ್ತಲೇ ಸರ್ಕಾರ ಶಶಿಕಲಾಗೆ ನೀಡಿತು ಬಿಗ್​ ಶಾಕ್​! ಚಿಂತಾಕ್ರಾಂತರಾದ ಚಿನ್ನಮ್ಮ

shashikala
Published on

ಚೆನ್ನೈ: ಅಕ್ರಮ ಆಸ್ತಿ ಸಂಪಾದನೆ ಮಾಡಿ ನಾಲ್ಕು ವರ್ಷ ಜೈಲು ಸೇರಿ ಕೊನೆಗೂ ಶಶಿಕಲಾ ಬಿಡುಗಡೆಯಾಗಿದೆ. ಆಪ್ತ ಸ್ನೇಹಿತೆ ತಮಿಳುನಾಡಿನ ಅಮ್ಮಾ ಜಯಲಲಿತಾ ಅವರ ಸ್ಥಾನವನ್ನು ಏರಲು ಇತ್ತ ಶಶಿಕಲಾ ನಟರಾಜನ್​ ಎಲ್ಲಾ ರೀತಿಯ ಸರ್ಕಸ್​ ಮಾಡುತ್ತಿರುವ ನಡುವೆಯೇ ತಮಿಳುನಾಡು ಸರ್ಕಾರ ಅವರಿಗೆ ಬಿಗ್​ ಶಾಕ್​ ನೀಡಿದೆ.

ತಮಿಳುನಾಡಿನಲ್ಲಿ ಶೀಘ್ರದಲ್ಲಿಯೇ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಅಲ್ಲಿ ರಾಜಕೀಯ ಗರಿಗೆದರಿದೆ. ಈ ಚುನಾವಣೆಯಲ್ಲಿ ತಮ್ಮ ತಾಕತ್ತನ್ನು ತೋರಿಸಲು ಜೈಲಿನಲ್ಲಿ ಕುಳಿತೇ ಶಶಿಕಲಾ ಎಲ್ಲಾ ರೀತಿಯ ಸ್ಕೆಚ್​ ರೆಡಿ ಮಾಡಿದ್ದಾರೆ. ಅದರಂತೆಯೇ ಅವರು ಯೋಜನೆ ರೂಪಿಸಲು ಇದೀಗ ಮುಂದಾಗಿದ್ದಾರೆ. ಜ್ಯೋತಿಷಿಯ ಸಲಹೆಯಂತೆ ಶುಭಗಳಿಗೆಯಲ್ಲಿ ಚೆನ್ನೈಗೆ ಎಂಟ್ರಿ ಕೊಟ್ಟೂ ಆಗಿದೆ.

ಆದರೆ ಇದರ ಬೆನ್ನಲ್ಲೇ ತಮಿಳುನಾಡು ಸರ್ಕಾರ ಶಶಿಕಲಾ ಸಂಬಂಧಿಗಳಾದ ಇಳವರಸಿ ಮತ್ತು ‌ಸುಧಾಕರನ್ ‌ಹೆಸರಲ್ಲಿದ್ದ 800 ಎಕರೆ ಭೂಮಿಯನ್ನು ಜಪ್ತಿ ಮಾಡಿದೆ. ತೂತುಕುಡಿ ಜಿಲ್ಲೆಯಲ್ಲಿ‌ ಇರುವ ಈ ಆಸ್ತಿಯನ್ನು ಜಪ್ತಿ ಮಾಡುವ ಮೂಲಕ ಚಿನ್ನಮ್ಮಗೆ ಸರ್ಕಾರ ಬಿಗ್​ ಶಾಕ್​ ನೀಡಿದೆ.

ಇತ್ತೀಚಿಗೆ ಚೆನ್ನೈನಲ್ಲಿ 6 ಕಡೆಗಳಲ್ಲಿ ನೂರಾರು ‌ಕೋಟಿ ಆಸ್ತಿಗಳನ್ನು ಜಪ್ತಿ‌ ಮಾಡಲಾಗಿತ್ತು. ಅದರ ಬೆನ್ನಲ್ಲೇ ಇದೀಗ ಸುಪ್ರೀಂಕೋರ್ಟ್​ 2017ರಲ್ಲಿ ನೀಡಿದ್ದ ತೀರ್ಪಿನ ಮೇರೆಗೆ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net