'ಹಿಂದುಸ್ತಾನದಲ್ಲಿ ಮುಸ್ಲಿಂ ಆಗಿ ಹುಟ್ಟಿರುವ ಹೆಮ್ಮೆ ನನ್ನದು- ಸ್ನೇಹಪರತೆ ಮೋದಿಯಿಂದ ಕಲಿಯಬೇಕು'

gulamnabhi
Published on

ನವದೆಹಲಿ: ನಾನು ಇದುವರೆಗೆ ಪಾಕಿಸ್ತಾನವನ್ನು ಕಂಡಿಲ್ಲ, ಅಲ್ಲಿಗೆ ಹೋಗಲಿಲ್ಲ. ಇದು ನನ್ನ ಜೀವನದ ದೊಡ್ಡ ಅದೃಷ್ಟ. ಅಲ್ಲಿಗೆ ಹೋಗದ ಕೆಲವು ಅದೃಷ್ಟವಂತರಲ್ಲಿ ನಾನೂ ಒಬ್ಬ ಎನ್ನಲು ತುಂಬಾ ಸಂತೋಷವಾಗುತ್ತದೆ. ಅದಕ್ಕಿಂತಲೂ ಹೆಚ್ಚು ಸಂತೋಷ ಎಂದರೆ ಹಿಂದುಸ್ತಾನದಲ್ಲಿ ಮುಸ್ಲಿಂ ಆಗಿ ಹುಟ್ಟಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಹೇಳಿದರು.

ಇಂದು ರಾಜ್ಯಸಭೆಯಲ್ಲಿ ಅವರ ಕೊನೆಯ ದಿನ. ತಮ್ಮ ವಿದಾಯ ಭಾಷಣದಲ್ಲಿ ಮಾತನಾಡಿದ ಗುಲಾಂ ನಬಿ ಆಜಾದ್ ಅತ್ಯಂತ ಭಾವುಕರಾಗಿ ಭಾರತದ ಬಗೆಗಿನ ಪ್ರೀತಿಯನ್ನು ಹಂಚಿಕೊಂಡರು.

ಮಂಗಳವಾರ ನಾಲ್ಕು ಮಂದಿ ನಿವೃತ್ತಿಯಾಗುತ್ತಿದ್ದು, ರಾಜ್ಯ ಸಭೆಯಲ್ಲಿ ವಿದಾಯ ಭಾಷಣವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಆಜಾದ್​, ತಮ್ಮ ರಾಜಕೀಯ ಪಯಣದ ಕುರಿತು ಮಾತನಾಡುತ್ತಾ, ಭಾರತದಲ್ಲಿರುವ ಮುಸ್ಲಿಂ ಜನರು ಹೆಮ್ಮೆ ಪಡಬೇಕಿದೆ ಎಂದು ನುಡಿದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ತಮ್ಮ ಭಾಷಣದಲ್ಲಿ ಸ್ಮರಿಸಿಕೊಂಡು ಗುಲಾಂ ನಬಿ ಆಜಾದ್​ ಅವರು, ಅಟಲ್​ಜೀ ಅವರಿಂದ ನಾನು ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ. ಬಿಕ್ಕಟ್ಟು ಯಾವುದೇ ಇರಲಿ, ಅದನ್ನು ಸುಲಭವಾಗಿ ಪರಿಹರಿಸುವುದು ಹೇಗೆ ಎಂಬುದನ್ನು ಕಲಿತಿರುವುದು ಕೂಡ ಅವರಿಂದಲೇ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರನ್ನು ಶ್ಲಾಘಿಸಿದ ಗುಲಾಬ್​ ನಬಿ ಅವರು, ರಾಜಕೀಯ ಬೇರೆ, ವೈಯಕ್ತಿಕ ಸ್ನೇಹ ಬೇರೆ ಎನ್ನುವುದನ್ನು ತೋರಿಸಿಕೊಟ್ಟವರು ಮೋದಿಯವರು. ಎಷ್ಟೋ ಬಾರಿ ರಾಜಕೀಯ ವಿಷಯಕ್ಕೆ ಸಂಬಂಧಿಸಿದಂತೆ ನಾವಿಬ್ಬರೂ ವಾಗ್ಯುದ್ಧ ಮಾಡಿದ್ದಿದೆ. ಆದರೆ ಅದು ರಾಜಕೀಯ. ಅಲ್ಲಿ ಹಾಗೆಯೇ ಇರಬೇಕು. ಆದರೆ ಮೋದಿಯವರು ಎಂದಿಗೂ ಅದನ್ನು ವೈಯಕ್ತಿಕವಾಗಿ ತೆಗೆದುಕೊಂಡೇ ಇಲ್ಲ. ಅವರ ವಿರುದ್ಧ ರಾಜಕೀಯವಾಗಿ ಮಾತನಾಡಿದಾಗಲೂ ಅದು ರಾಜಕೀಯ ಅಷ್ಟೇ ಎಂದು ಅಂದುಕೊಂಡರೇ ವಿನಾ ವೈಯಕ್ತಿಕ ದ್ವೇಷ ಸಾಧಿಸಲು ಹೋಗಿಲ್ಲ. ವೈಯಕ್ತಿಕ ಹಾಗೂ ರಾಜಕೀಯವನ್ನು ಅವರು ಬೇರೆ ಬೇರೆಯಾಗಿ ನೋಡುವವರು. ಇದು ಒಳ್ಳೆಯ ರಾಜಕಾರಣಿಯ ಗುಣ ಎಂದು ಶ್ಲಾಘಿಸಿದರು.

ಸಹಕಾರದಿಂದ ದೇಶ ನಡೆಯಬೇಕೇ ವಿನಾ ಜಗಳದಿಂದಲ್ಲ. ಜಗಳ ಮಾಡಿ ಸುಖಾ ಸುಮ್ಮನೇ ಎಲ್ಲದಕ್ಕೂ ವಿರೋಧ ವ್ಯಕ್ತಪಡಿಸುತ್ತಾ ಕುಳಿತರೆ ದೇಶ ನಡೆಯುವುದಿಲ್ಲ ಎಂದು ಎಲ್ಲರಿಗೂ ಸಲಹೆ ನೀಡಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಿದ್ದಕ್ಕೆ ಕೇಂದ್ರ ಸರ್ಕಾರವನ್ನು ನಿನ್ನೆಯಷ್ಟೇ ಆಜಾದ್​ ಅವರು ಹೊಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net