

ಮಾಸ್ಕೋ: 28 ಮಂದಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ರಷ್ಯಾದ ವಿಮಾನವು ರಷ್ಯಾದ ಪೂರ್ವದಲ್ಲಿ ಸಂಪರ್ಕ ಕಳೆದುಕೊಂಡಿದ್ದು, ಕಾಣಿಯಾಗಿದ್ದು ಆತಂಕಕ್ಕೀಡು ಮಾಡಿದೆ.
ಈ ವಿಮಾನದಲ್ಲಿ 6 ಮಂದಿ ವಿಮಾನಯಾನ ಸಿಬ್ಬಂದಿ ಸಹ ಇದ್ದರು. ಎಎನ್ 26 ವಿಮಾನ ಭೂಸ್ಪರ್ಶ ಮಾಡುವ ಪ್ರಯತ್ನದಲ್ಲಿರುವ ವೇಳೆಯಲ್ಲಿಯೇ ಸಂಪರ್ಕ ಕಳೆದುಕೊಂಡಿರುವುದಾಗಿ ತಿಳಿದುಬಂದಿದೆ. ಪೆಟ್ರೊಪಾವ್ಲೋವ್ಸ್‌ಕ್- ಕಮ್ಚಾಟ್ಸ್‌ಕಿಯಿಂದ ಪಲಾನಾಗೆ ಈ ವಿಮಾನ ಹೊರಟಿತ್ತು ಎಂದು ಕಮ್ಚಟ್ಕಾ ಪ್ರಾಂತ್ಯದ ರಷ್ಯಾದ ತುರ್ತು ಸಚಿವಾಲಯದ ಮುಖ್ಯ ನಿರ್ದೇಶನಾಲಯ ಮಾಹಿತಿ ನೀಡಿದೆ.
ಘಟನೆ ನಡೆದ ಸ್ಥಳಕ್ಕೆ ರಕ್ಷಣಾ ಮತ್ತು ಶೋಧಕಾರ್ಯಾಚರಣೆ ತಂಡ ತೆರಳಿದ್ದು, ವಿಮಾನ ಪತ್ತೆಗಾಗಿ ಕಾರ್ಯಚಾರಣೆ ಮುಂದುವರೆದಿದೆ.
ಈ ಹಿಂದೆ ರಷ್ಯಾದಲ್ಲಿ ವಿಮಾನ ಅಪಘಾತಗಳು ಹೆಚ್ಚಿದ್ದವು. ಆನಂತರ ಈಚಿನ ಕೆಲವು ವರ್ಷಗಳಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. 2019ರಲ್ಲಿ ವಿಮಾನದ ಅಪಘಾತ ಸಂಭವಿಸಿತ್ತು. ಅದರಲ್ಲಿ 41 ಮಂದಿ ಮೃತಪಟ್ಟಿದ್ದರು.