

ಬೆಂಗಳೂರು: ಕರ್ನಾಟಕ ರಾಜ್ಯದ ನೂತನ ರಾಜ್ಯಪಾಲರಾಗಿ ಕೇಂದ್ರ ಸಚಿವ ತಾವರ್ ಚಂದ್ ಗೆಹ್ಲೋಟ್ ನೇಮಕವಾಗಿದ್ದಾರೆ. ಇವರಿಗೆ 73 ವರ್ಷ ವಯಸ್ಸು.
2014ರಿಂದ ರಾಜ್ಯಪಾಲರಾಗಿದ್ದ ವಜುಭಾಯ್ ವಾಲಾ ಅವರ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ತಾವರ್ಚಂದ್ ಅವರನ್ನು ನೇಮಕ ಮಾಡಲಾಗಿದೆ.
ಮಧ್ಯಪ್ರದೇಶದ ನಾಗ್ಡಾದ ರುಪೆಟಾ ಗ್ರಾಮದಲ್ಲಿ ದಲಿತ ಕುಟುಂಬದಲ್ಲಿ ಜನಿಸಿರುವ ಗೆಹ್ಲೋಟ ಅವರು, ಭಾರತೀಯ ಜನತಾ ಪಕ್ಷದ ಹಿರಿಯ ಸದಸ್ಯರಾಗಿದ್ದಾರೆ. ಮಧ್ಯಪ್ರದೇಶದ ಉಜ್ಜಯಿನ ವಿಕ್ರಮ್ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದಿದ್ದಾರೆ. ಇವರು ಕೇಂದ್ರ ಸಾಮಾಜಿಕ, ನ್ಯಾಯ ಸಬಲೀಕರಣ ಸಚಿವರಾಗಿದ್ದರು. ಮೂರು ಬಾರಿ ಮಧ್ಯಪ್ರದೇಶದ ಶಾಸಕರಾಗಿ, ನಾಲ್ಕುಬಾರಿ ಲೋಕಸಭಾ ಸದಸ್ಯರಾಗಿದ್ದ ಗೆಹ್ಲೋಟ್ ಅವರು ಹಾಲಿ ರಾಜ್ಯಸಭಾ ಸದಸ್ಯರಾಗಿದ್ದರು. ಇವರಿಗೆ ಡಾ.ಬಿ.ಆರ್.ಅಂಬೇಡ್ಕರ್ ಯೂನಿವರ್ಸಿಟಿ ಆಫ್ ಸೋಷಿಯಲ್ ಸೈನ್ಸ್ನಿಂದ ಗೌರವ ಡಾಕ್ಟರೇಟ್ ನೀಡಲಾಗಿದೆ.
ಕರ್ನಾಟಕ ಸೇರಿದಂತೆ ಇತರ ಎಂಟು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಿಸಲಾಗಿದೆ. ಮಿಜೋರಾಂಗೆ ಹರಿ ಬಾಬು ಕಂಭಂಪತಿ, ಮಧ್ಯಪ್ರದೇಶಕ್ಕೆ ಮಂಗುಭಾಯ್ ಚಗನ್ಭಾಯ್ ಪಟೇಲ್, ಹಿಮಾಚಲ ಪ್ರದೇಶಕ್ಕೆ ರಾಜೇಂದ್ರನ್ ವಿಶ್ವನಾಥ್ ಅರ್ಲೆಕರ್, ಗೋವಾಕ್ಕೆ ಪಿ.ಎಸ್.ಶ್ರೀಧರನ್ ಪಿಳ್ಳೈ, ತ್ರಿಪುರಕ್ಕೆ ಸತ್ಯದೇವ್ ನಾರಾಯಣ್ ಆರ್ಯ, ಜಾರ್ಖಂಡ್ಗೆ ರಮೇಶ್ ಬೈಸ್ ಹಾಗೂ ಹರಿಯಾಣದ ರಾಜ್ಯಪಾಲರನ್ನಾಗಿ ಬಂದಾರು ದತ್ತಾತ್ರೇಯ ಅವರನ್ನು ನೇಮಿಸಲಾಗಿದೆ.