

ನವದೆಹಲಿ: ನಾವು ಯಾರಿಗಾದರೂ ಫೋನ್ನಿಂದ ಕರೆ ಮಾಡಿದಾಗ ಕೋವಿಡ್ -19 ಜಾಗೃತಿ ಕುರಿತು ಕಾಲರ್ ಟ್ಯೂನ್ನಲ್ಲಿ ಅಮಿತಾಭ್ ಬಚ್ಚನ್ ಅವರ ಧ್ವನಿ ಕೇಳಿಸುತ್ತದೆ. ಕೋವಿಡ್ ಕುರಿತು ಜಾಗೃತಿ ತೆಗೆದುಕೊಳ್ಳುವಂತೆ ಅದರಲ್ಲಿ ಅಮಿತಾಭ್ ಹೇಳಿದ್ದಾರೆ. ಆದರೆ ಇದನ್ನು ತೆಗೆದುಹಾಕುವಂತೆ ಕೋರಿ ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡಿರುವ ರಾಕೇಶ್ ಎಂಬ ವ್ಯಕ್ತಿ ಈ ಅರ್ಜಿ ಸಲ್ಲಿಸಿದ್ದಾರೆ.
ಅಮಿತಾಭ್ ಬಚ್ಚನ್ ಅವರ ಧ್ವನಿಗೆ ಈ ಪರಿಯ ಆಕ್ಷೇಪ ಏಕೆ ಎಂದು ಅರ್ಜಿಯಲ್ಲಿ ನಮೂದಿಸಿರುವ ರಾಕೇಶ್ ಅವರು, ಅಮಿತಾಭ್ ಅವರಿಗೆ ಈ ಧ್ವನಿಗಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಶುಲ್ಕವನ್ನು ಪಾವತಿಸುತ್ತದೆ. ಆದರೆ ರಾಷ್ಟ್ರಕ್ಕೆ ಶ್ರೇಷ್ಠ ಸೇವೆ ಸಲ್ಲಿಸುತ್ತಿರುವ ಕೆಲವು ಕರೊನಾ ವಾರಿಯರರ್ಸ್ ಅನ್ನು ನಿರ್ಲಕ್ಷಿಸಿ ಅಮಿತಾಭ್ ಬಚ್ಚನ್ ಅವರಿಗೆ ಹಣ ನೀಡುವ ಮೂಲಕ ಈ ರೀತಿ ಜಾಗೃತಿ ಮೂಡಿಸುತ್ತಿರುವುದು ಸರಿಯಲ್ಲ ಎಂದಿದ್ದಾರೆ.
ಕರೊನಾದ ಈ ಸಮಯದಲ್ಲಿ ಎಷ್ಟೋ ಬಡವರಿಗೆ ಹಣಕಾಸಿನ ಅಗತ್ಯವಿದೆ. ಕೋವಿಡ್ ವಾರಿಯರ್ಸ್ ಅಮೋಘ ಕೊಡುಗೆಗಳನ್ನು ನೀಡುತ್ತಿದ್ದಾರೆ. ಕೆಲವು ಕರೊನಾ ವಾರಿಯರ್ಸ್ ತಮ್ಮ ದುಡುಮೆಯ ಹಣವನ್ನು ಅಗತ್ಯ ಇರುವವರಿಗೆ ನೀಡುತ್ತಿದ್ದಾರ. ಇಂಥವರಿಗೆ ನೆರವಾಗುವ ಬದಲು ನಟನಿಗೆ ಈ ರೀತಿ ಶುಲ್ಕವನ್ನು ಪಾವತಿಸುವುದು ಸರಿಯಲ್ಲ ಎನ್ನುವುದು ಅರ್ಜಿದಾರರ ವಾದ.
ಆದರೆ ನಟ ಅಮಿತಾಭ್ ಬಚ್ಚನ್ ಸಮಾಜ ಸೇವಕರಾಗಿ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿಲ್ಲ, ಇವರು ಕರೊನಾ ವಾರಿಯರ್ಸ್ ಕೂಡ ಅಲ್ಲ. ಆದ್ದರಿಂದ ಅವರ ಧ್ವನಿ ಏಕೆ ಎಂದು ಅರ್ಜಿದಾರರು ಪ್ರಶ್ನಿಸಿದ್ದಾರೆ.
ಅರ್ಜಿದಾರರ ಪರವಾಗಿ ವಕೀಲರಾದ ಎ.ಕೆ. ದುಬೆ ಮತ್ತು ಪವನ್ ಕುಮಾರ್ ವಾದ ಮಂಡಿಸುತ್ತಿದ್ದಾರೆ. ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ನ್ಯಾಯಪೀಠದ ಮುಂದೆ ಈ ಅರ್ಜಿ ಇಂದು ವಿಚಾರಣೆಗೆ ಬಂದಿತ್ತು. ವಿಚಾರಣೆಯನ್ನು ಕೋರ್ಟ್ ಜನವರಿ 18ಕ್ಕೆ ಮುಂದೂಡಿದೆ.