ಪತ್ನಿಯ ದೌರ್ಜನ್ಯ ಎಳೆಎಳೆಯಾಗಿ ಬಿಚ್ಚಿಟ್ಟ ಪತಿಯಂದಿರು: ಪುರುಷ ಆಯೋಗ ರಚನೆಗೆ ಕೋರಿ ಭಾರಿ ಪ್ರತಿಭಟನೆ

husbands1
Published on

ರಾಂಚಿ (ಜಾರ್ಖಂಡ್​): ದೌರ್ಜನ್ಯ ಎಂದಾಕ್ಷಣ ಮೊದಲಿಗೆ ನೆನಪಾಗುವುದು ಮಹಿಳೆಯರ ಮೇಲಿನ ದೌರ್ಜನ್ಯದ ಕುರಿತು. ದಿನೇ ದಿನೇ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಲೇ ಇರುವ ಕಾರಣದಿಂದ ಹಲವಾರು ಕಾನೂನುಗಳು ಮಹಿಳೆಯರ ಪರವಾಗಿ ಜಾರಿಗೆ ಬಂದಿವೆ. ಆದರೆ ಮಹಿಳೆಯರಷ್ಟೇ ಪ್ರಮಾಣದಲ್ಲಿ ಪುರುಷರೂ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಮಹಿಳೆಯರು ದೌರ್ಜನ್ಯದ ವಿರುದ್ಧ ಇದಾಗಲೇ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಪುರುಷರು ಕೂಡ ಸಂಘಟನೆಗಳನ್ನು ರಚಿಸಿಕೊಂಡಿದ್ದಾರೆ. ಇದೀಗ ಪುರುಷ ಆಯೋಗ ರಚನೆಗೆ ಒತ್ತಾಯಿಸಿ ಜಾರ್ಖಂಡ್​ನ ರಾಂಚಿಯಲ್ಲಿ ಪುರುಷರಿಂದ ಭಾರಿ ಪ್ರತಿಭಟನೆ ಆರಂಭವಾಗಿದೆ.

ಗಾಂಧಿ ಜಯಂತಿಯ ದಿನವಾದ ನಿನ್ನೆ ರಾಂಚಿಯಲ್ಲಿ ಗಾಂಧಿ ಪ್ರತಿಮೆಯ ಮುಂದೆ ಹಲವರು ಪುರುಷರು ಮಹಿಳೆಯರಿಂದ ಆಗುತ್ತಿರುವ ದೌರ್ಜನ್ಯವನ್ನು ತಡೆಯಲು ಮಹಿಳಾ ಆಯೋಗದಂತೆ ಪುರುಷ ಆಯೋಗವನ್ನು ರಚಿಸುವಂತೆ ಒತ್ತಾಯಿಸಿದ್ದಾರೆ.

'ಭಾರತೀಯ ಕುಟುಂಬವನ್ನು ಉಳಿಸಿ' ಎಂಬ ಘೋಷಣೆಯಡಿ ನೂರಾರು ಪುರುಷರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಮಹಿಳೆಯರಿಂದ ಆಗುತ್ತಿರುವ ದೌರ್ಜನ್ಯ ಒಂದೆಡೆಯಾದರೆ, ಮಹಿಳೆಯರಾಗಿ ಜಾರಿಗೆ ಬಂದಿರುವ ಕೆಲವು ಕಾನೂನುಗಳ ದುರ್ಬಳಕೆ ಆಗುತ್ತಿದ್ದು, ಈ ಕಾನೂನುಗಳ ಪ್ರಯೋಜನ ಪಡೆದು ಮಹಿಳೆಯರು ಹೇಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಎಳೆಎಳೆಯಾಗಿ ಬಿಚ್ಚಿಟ್ಟಾರೆ ಈ ಪುರುಷರು.

ವರದಕ್ಷಿಣೆ ತಡೆ ಕಾಯ್ದೆ, ಜೀವನಾಂಶ ನೀಡುವ ಸೆಕ್ಷನ್ 498 ಮತ್ತು ಸೆಕ್ಷನ್ 125 ರ ದುರುಪಯೋಗ ಆಗುತ್ತಿವೆ. ಮಹಿಳೆಯರು ಸುಳ್ಳು ದೂರು ನೀಡಿ ಪತಿಯಂದಿರನ್ನು ಜೈಲಿಗೆ ಹಾಕಿಸುತ್ತಿದ್ದಾರೆ. ಇದರಿಂದ ವೈಯಕ್ತಿಕ ಭದ್ರತೆಗೆ ಚ್ಯುತಿ ಬಂದಿದ್ದು, ತಮಗಾಗಿ ಆಯೋಗ ರಚಿಸಬೇಕು ಎಂದು ಪ್ರತಿಭಟನೆ ವೇಳೆ ಗಂಡಸಲು ಅಳಲು ತೋಡಿಕೊಂಡಿದ್ದಾರೆ.

ತಂತಮ್ಮ ಪತ್ನಿಯಿಂದ ದೌರ್ಜನ್ಯ ಅನುಭವಿಸುತ್ತಿರುವ ಪತಿಯ ಕಣ್ಣೀರು ನೋಡುವವರೇ, ಅವರ ನೋವು ಕೇಳುವವರೇ ಇಲ್ಲವಾಗಿದೆ. ಅದಕ್ಕಾಗಿಯೇ ಆಯೋಗ ರಚನೆಗೆ ಕೋರಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಸಂಘಟಕರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನೆಯ ನೇತೃತ್ವ ವಹಿಸಿರುವ ವ್ಯಕ್ತಿಯೊಬ್ಬರು, 'ನನ್ನ ಪತ್ನಿ ಸುಳ್ಳು ಆರೋಪ ಹೊರಡಿಸಿದ್ದಾಳೆ. ಇದರಿಂದಾಗಿ ನಾನು ಕಳೆದ 21 ವರ್ಷಗಳಿಂದ ಕಾನೂನು ಹೋರಾಟ ಮಾಡುತ್ತಿದ್ದು, ಜೀವನ ಪೂರ್ತಿ ಹೋರಾಟದಲ್ಲಿಯೇ ಕಳೆದಿದ್ದೇನೆ. ಹಳ್ಳಿಯಲ್ಲಿ ವಾಸಿಸಲು ಅವಳು ಇಷ್ಟಪಟ್ಟಿರಲಿಲ್ಲ. ನಾನು ಹಳ್ಳಿಗೆ ಬರಲು ಹೇಳಿದ್ದೇ ಇಷ್ಟೆಲ್ಲವುಗಳಿಗೆ ಕಾರಣವಾಗಿದೆ. ಡಿವೋರ್ಸ್​ ತೆಗೆದುಕೊಂಡಿದ್ದು, ಜೀವನಾಂಶವನ್ನೂ ಪಡೆದಿದ್ದಾಳೆ. ಎಲ್ಲಾ ಪಡೆದುಕೊಂಡು ಮತ್ತಷ್ಟು ಹಣದ ಆಸೆಗೆ ವರದಕ್ಷಿಣೆ ಕಿರುಕುಳ ಕೇಸ್​ ಹಾಕಿದ್ದಾಳೆ. ನನ್ನಂಥ ಸಹಸ್ರಾರು ಪುರುಷರು ಹೀಗೆ ಮಹಿಳೆಯರಿಂದ ಚಿತ್ರಹಿಂಸೆ ಅನುಭವಿಸುತ್ತಿದ್ದರೂ ಅವರ ಕೂಗು ಕೇಳುವವರೇ ಇಲ್ಲವಾಗಿದೆ. ಅದಕ್ಕಾಗಿಯೇ ಈ ಪ್ರತಿಭಟನೆ' ಎಂದಿದ್ದಾರೆ.

‘ಮಹಿಳೆಯರು ಸಣ್ಣ ಕಾರಣಗಳಿಗೆ ತಮ್ಮನ್ನು ತೊರೆದು ವಿಚ್ಛೇದನ ಬಯಸುತ್ತಾರೆ. ವರದಕ್ಷಿಣೆ ಕಾಯ್ದೆಯಡಿ ಪ್ರಕರಣ ದಾಖಲಿಸುತ್ತಾರೆ. ಇದರಿಂದ ತಾನು ಜೈಲು ಶಿಕ್ಷೆ ಅನುಭವಿಸುವಂತಾಗಿದೆ. ನನ್ನ ಹಾಗೆ ಹಲವರು ಸರ್ಕಾರಿ ಕೆಲಸ ಕಳೆದುಕೊಂಡಿದ್ದಾರೆ. ಪುರುಷರ ಮೇಲೆ ಮಹಿಳೆಯರಿಂದ ಆಗುತ್ತಿರುವ ಕಾನೂನು ಭಯೋತ್ಪಾದನೆಯನ್ನು ತಡೆಯಲು ಆಯೋಗ ಬೇಕಿದೆ' ಎಂದು ಇನ್ನೊಬ್ಬರು ನುಡಿದರು.

ಪತ್ನಿಯ ಕಿರುಕುಳ, ಸುಳ್ಳು ಆರೋಪದ ಪ್ರಕರಣಗಳಿಂದ ದೇಶದಲ್ಲಿ ಪ್ರತಿ ವರ್ಷ 4 ಲಕ್ಷಕ್ಕೂ ಅಧಿಕ ಪುರುಷರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಗಂಡಂದಿರ ರಕ್ಷಣೆಗಾಗಿ, ಭದ್ರತೆಗಾಗಿ ಆಯೋಗವನ್ನು ರಚನೆ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net