

ಬೆಂಗಳೂರು: ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸೇರಿದಂತೆ ಅದರ ಎಂಟು ಅಂಗಸಂಸ್ಥೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿ ವಾರ ಕಳೆದಿದೆ. ಆದರೆ ಇವುಗಳ ತನಿಖೆ ಮುಂದುವರೆದಿದ್ದು ತನಿಖಾಧಿಕಾರಿಗಳಿಗೆ ದಿನವೂ ಸ್ಫೋಟಕ ಎನ್ನುವ ಮಾಹಿತಿಗಳು ಲಭ್ಯವಾಗುತ್ತಿವೆ.
ಪಿಎಫ್ಐನ ಒಂದು ಅಂಗಸಂಸ್ಥೆಯಾಗಿರುವುದು ಸಿಎಫ್ಐ ( CFI ), ಅಂದರೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಎಂದು ಇಸ್ಲಾಮಿಕ್ ಸಂಘಟನೆ. ಇದರ ಕಚೇರಿಯ ಮೇಲೆ ಇಂದು ಪೊಲೀಸರು ದಾಳಿ ನಡೆಸಿದ್ದು, ಆತಂಕಕಾರಿಯಾಗಿರುವ ಕೆಲವು ಸಾಕ್ಷ್ಯಾಧಾರಗಳು ಅವರ ಕೈಗೆ ಸಿಕ್ಕಿವೆ.
ಮುಸ್ಲಿಂ ಯುವಕರನ್ನು ಮತ್ತು ವಿಧ್ಯಾರ್ಥಿಗಳನ್ನು ಉಗ್ರತ್ವದ ಕಡೆಗೆ ಸೆಳೆಯಲು ಸಿಎಫ್ಐ ಸಂಘಟನೆ ಇದಾಗಲೇ ಹೇಗೆಲ್ಲಾ ಬ್ರೇನ್ವಾಷ್ ಮಾಡುತ್ತಿದೆ ಎಂಬ ಬಗ್ಗೆ ಶಾಕಿಂಗ್ ಸಾಕ್ಷ್ಯಾಧಾರಗಳು ಈ ದಾಳಿ ವೇಳೆ ಪೊಲೀಸರಿಗೆ ಸಿಕ್ಕಿವೆ. ಅದೇ ವೇಳೆ ಕೆಲವು ಇಸ್ಲಾಮಿಕ್ ಸಂಘಟನೆಗಳನ್ನು ನಿಷೇಧ ಮಾಡಿದ ಬಳಿಕ ಹೇಗೆ ಪ್ರತಿಕಾರ ತೀರಿಸಿಕೊಳ್ಳಬೇಕು ಎಂಬ ಯೋಜನೆ ರೂಪಿಸಲಾಗಿರುವ ಪತ್ರವೊಂದು ಪೊಲೀಸರಿಗೆ ಸಿಕ್ಕಿದೆ. ಅದುವೇ ಜಿನೋಸೈಡ್ ಲೆಟರ್ (ನರಮೇಧದ ಪತ್ರ). ಈ ಪತ್ರದಿಂದಾಗಿ ಸಿಎಫ್ಐ ಕ್ರೌರ್ಯದ ಮುಖ ಬಯಲಾಗಿದೆ.
ತಮಗೆ ಆಗದವರನ್ನು ಮುಗಿಸಲು ನರಮೇಧವೇ ತಮಗಿರುವ ದಾರಿ, ಪಿಎಫ್ಐ ಬ್ಯಾನ್ಗೆ ಪ್ರತಿಕಾರವೆಂದರೆ ಅದು ನರಮೇಧದಿಂದ ಮಾತ್ರವೇ ಎನ್ನುವ ತಾತ್ಪರ್ಯ ಇರುವ ಪತ್ರ ಇದಾಗಿದೆ. ನರಮೇಧವನ್ನು ನಡೆಸಲು ಯುವಕರು ಮತ್ತು ವಿದ್ಯಾರ್ಥಿಗಳ ಹಾದಿಯನ್ನು ಹೇಗೆ ತಪ್ಪಿಸಲು ಸಿಎಫ್ಐ ಯೋಜನೆ ರೂಪಿಸಿದೆ ಎಂಬ ಬಗೆಗಿನ ಸಾಕ್ಷ್ಯ ಇದಾಗಿದೆ. ಸಿಎಫ್ಐ ಯೋಜನೆಗಳ ಕುರಿತೂ ಈ ವೇಳೆ ಮಹತ್ವದ ಸಾಕ್ಷ್ಯಗಳು ಸಿಕ್ಕಿವೆ.
ಈ ಜಿನೋಸೈಡ್ ಪತ್ರದಲ್ಲಿ ಇರುವ ತಾತ್ಪರ್ಯ ಇಷ್ಟು...
ಕೇಂದ್ರದಲ್ಲಿ ಬಲಪಂಥೀಯ ಹಿಂದುತ್ವ ಸರ್ಕಾರ ಆಡಳಿಕ್ಕೆ ಬಂದ ಮೇಲೆ ಅಲ್ಪಸಂಖ್ಯಾತರು ಅದರಲ್ಲಿಯೂ ಮುಸ್ಲಿಂ ಸಮುದಾಯದವರ ಮೇಲೆ ಹಿಂಸಾಚಾರವು ಉಲ್ಬಣಗೊಂಡಿದೆ. ಈ ಸಮುದಾಯಗಳ ನಡುವೆ ದ್ವೇಷವನ್ನು ಹರಡಲು ಅವರು ಸಮಾಜದಲ್ಲಿ ಅರ್ಥಹೀನ ಸುಳ್ಳುಗಳನ್ನು ಹರಡುತ್ತಿದ್ದು, ಜನರು ಈ ಸುಳ್ಳುಗಳನ್ನು ನಂಬುತ್ತಿದ್ದಾರೆ. ಈ ಸುಳ್ಳುಗಳನ್ನೇ ನಂಬಿಕೊಂಡು ಈ ಸಮುದಾಯದವರ ವಿರುದ್ಧ ದಾಳಿ ನಡೆಸಲಾಗುತ್ತಿದೆ.
ಎಲ್ಲಿಯಾದರೂ ಹತ್ಯೆ, ಕೋಮುಗಲಭೆ ಇತ್ಯಾದಿಗಳು ನಡೆದಾಗ ಅಂಥ ಸಂದರ್ಭಗಳಲ್ಲಿ ಸುಮ್ಮನೇ ಈ ಸಮುದಾಯದವರನ್ನೇ ಗುರಿಯಾಗಿಸಿಕೊಂಡು ಫೈರಿಂಗ್ ನಡೆಯುತ್ತದೆ. ಯುವಕರನ್ನು ಜೈಲಿಗೆ ತಳ್ಳಲಾಗುತ್ತಿದೆ. ನಿಜವಾದ ಅರ್ಥದಲ್ಲಿ, ಇದೊಂದು ವ್ಯವಸ್ಥಿತ ಮತ್ತು ಸಂಘಟಿತ ಪಿತೂರಿಯ ಭಾಗವಾಗಿದೆ. ಇದಕ್ಕೆಲ್ಲಾ ಪ್ರತ್ಯುತ್ತರ ನೀಡಬೇಕು ಎಂದರೆ ಅದು ನರಮೇಧದಿಂದ ಮಾತ್ರ ಸಾಧ್ಯ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಸದ್ಯ ಸಿಎಫ್ಐ ಕಚೇರಿಯಲ್ಲಿ ಸಿಕ್ಕಿರೋ ದಾಖಲೆಗಳನ್ನ ವಶಪಡೆದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ (ದಿಗ್ವಿಜಯ ನ್ಯೂಸ್)