ವಿಮಾನ ನಿಲ್ದಾಣ ಮಾಡಲು ಬಡವರ ಜಮೀನೇ ಬೇಕಾ? ಸರ್ಕಾರದ ವಿರುದ್ಧ ರೈತರ ಭಾರಿ ಪ್ರತಿಭಟನೆ

protest
Published on

ಬಾಗಲಕೋಟೆ: ವಿಮಾನ ನಿಲ್ದಾಣ ಹಾಗೂ ಕೈಗಾರಿಕೆ ಪ್ರದೇಶ ಅಭಿವೃದ್ಧಿಗೆ ಭೂಸ್ವಾಧೀನಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದು, ಸರ್ಕಾರ ಹಾಗೂ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಸಿಡಿದೆದ್ದಿದ್ದಾರೆ.

ಬಾದಾಮಿ ತಾಲೂಕಿನ ಬೀಳಗಿ ವಿಧಾನಸಭಾ ಕ್ಷೇತ್ರದ ಹಲಕುರ್ಕಿ, ಹಂಗರಗಿ, ಬೇಡರಬೂದಿಹಾಳ ರೈತರಿಂದ ಉಗ್ರ ಪ್ರತಿಭಟನೆ ಶುರುವಾಗಿದೆ. ಈ ಪ್ರತಿಭಟನೆಯಲ್ಲಿ ಸಾವಿರಾರು ರೈತರು ಭಾಗಿಯಾಗಿದ್ದು, ವಿವಿಧ ಪಕ್ಷಗಳು,‌ರೈತ ಸಂಘಟನೆಗಳು ಬೆಂಬಲ ಸೂಚಿಸುತ್ತಿವೆ.

ಎತ್ತು ಚಕ್ಕಡಿ, ನೇಗಿಲು ಸೇರಿ ಕೃಷಿ ಪರಿಕರ ಹಿಡಿದು ಭಾರಿ ಪ್ರಮಾಣದಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ. ಭೂಸ್ವಾಧೀನ ಪ್ರಕ್ರಿಯೆ ಕೈ ಬಿಡುವಂತೆ ಒತ್ತಾಯಿಸಿ ಸರ್ಕಾರದ ವಿರುದ್ದ ಘೋಷಣೆ ಕೂಗಲಾಗುತ್ತಿದೆ.

ಕೈಗಾರಿಕೆ ಹಾಗೂ ವಿಮಾನ ನಿಲ್ದಾಣ ಸ್ಥಾಪಿಸಲು, ಹಲಕುರ್ಕಿ ಗ್ರಾಮದ ವ್ಯಾಪ್ತಿಯ 1800 ಎಕರೆ ಸೇರಿ 2218 ಎಕರೆ ಜಮೀನು ಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ. ಇದು ಬಲವಂತದ ಭೂಸ್ವಾಧೀನ ಎಂಬುದು ರೈತರ ಆಕ್ರೋಶ. ಯಾವುದೇ ಕಾರಣಕ್ಕೂ ಜಮೀನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲವೆಂದು ರೈತರ ಬಿಗಿಪಟ್ಟು ಹಿಡಿದಿದ್ದಾರೆ.

ಸಚಿವ ನಿರಾಣಿ ಅವರಿಗೆ ವಿಮಾನ ನಿಲ್ದಾಣ ಮಾಡಲು ಬಡ ಮತ್ತು ದಲಿತರ ಜಮೀನು ಬೇಕಾ? ಬಲಾಢ್ಯರ ಜಮೀನು ಪಡೆಯಲಿ ನೋಡೋಣ ಎಂದು ಆಕ್ರೋಶ ಹೊರಹಾಕುತ್ತಿರುವ ರೈತರು, ತಲೆತಲಾಂತರದಿಂದ ಬಂದ ಜಮೀನು ನಾವು ಕೊಡುವುದಿಲ್ಲ. ವಿಮಾನ ನಿಲ್ದಾಣ ಜೀವನಾವಶ್ಯಕ ವಸ್ತು ಅಲ್ಲ. ನೀರಾವರಿ ಯೋಜನೆಗೆ ಒಳಪಟ್ಟಿದ್ದ ಜಮೀನು ಕಾನ್ಸಲ್ ಮಾಡಿ, ಈಗ ವಿಮಾನ ನಿಲ್ದಾಣಕ್ಕೆ ಪಡೆಯುತ್ತಿದ್ದಾರೆ. ಯಾವುದೇ ಕಾರಣಕ್ಕೂ ಜಮೀನು ಕೊಡಲ್ಲ ಎಂದು ಸಚಿವ ಮುರುಗೇಶ್ ನಿರಾಣಿ ವಿರುದ್ಧ ಅನ್ನದಾತರು ಕಿಡಿಯಾಗಿದ್ದಾರೆ.
ಕಳೆದ 15 ದಿನಗಳಿಂದ ಹಲಕುರ್ಕಿ ಗ್ರಾಮದಲ್ಲಿ ಇದರ ವಿರುದ್ಧ ರೈತರು ಅನಿರ್ದಿಷ್ಟ ಧರಣಿ ನಡೆಸುತ್ತಿದ್ದು, ಇಂದು ತಾಲೂಕು ಕೇಂದ್ರ ಬಾದಾಮಿಯಲ್ಲಿ ಬೀದಿಗೆ ಇಳಿದಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net