

ಉದಯಪುರ (ರಾಜಸ್ಥಾನ): ಹಿಂದೂ ದೇವರಿಗೆ ಅವಹೇಳನ ಮಾಡಿದ್ದನ್ನು ವಿರೋಧಿಸಿ ಬಿಜೆಪಿ ಮುಖಂಡೆ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ವಿರುದ್ಧ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಕಾರಣಕ್ಕೆ ಮೊನ್ನೆ ರಾಜಸ್ಥಾನದ ಉದಯಪುರದ ಟೈಲರ್ ಕನ್ಹಯ್ಯಲಾಲ್ ಅವರ ಶಿರಚ್ಛೇದನ ಮಾಡಲಾಗಿದೆ. ಈ ಘಟನೆ ರಾಷ್ಟ್ರವ್ಯಾಪಿ ಭಾರಿ ಪ್ರತಿಭಟನೆಗೆ ಕಾರಣವಾಗಿದೆ.
ಅತ್ಯಂತ ಕ್ರೂರವಾಗಿ ನಡೆದಿರುವ ಈ ಘಟನೆಯನ್ನು ಅತ್ಯಂತ ಸಣ್ಣ ಘಟನೆ ಎಂದಿದ್ದಾರೆ ಭಾರತೀಯ ಕಿಸಾನ್ ಯೂನಿಯನ್ ಉಚ್ಚಾಟಿತ ವಕ್ತಾರ ರಾಕೇಶ್ ಟಿಕಾಯತ್! ಈ ಘಟನೆಯ ತನಿಖೆ ನಡೆಸಿದಾಗ, ರುಂಡ ಕತ್ತರಿಸಿದ ನಂತರ ವಿಡಿಯೋ ಮಾಡಿ ಹರಿಬಿಟ್ಟಿದ್ದ ಪಾತಕಿಗಳ ಪೈಕಿ ಒಬ್ಬನಿಗೆ ಪಾಕಿಸ್ತಾನದ ಉಗ್ರ ಸಂಘಟನೆ ನಂಟು ಇರುವುದು ತಿಳಿದುಬಂದಿದೆ. ಈತ ಕರಾಚಿಯಲ್ಲಿ ದವಾತ್ ಎ ಇಸ್ಲಾಮಿ ಉಗ್ರಗಾಮಿ ಸಂಘಟನೆಯಿಂದ ತರಬೇತಿ ಪಡೆದು ಬಂದಿರುವುದು ಬಹಿರಂಗಗೊಂಡಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟಿಕಾಯತ್, ಸಣ್ಣ ಸಣ್ಣ ಘಟನೆಗಳಿಗೂ ಪಾಕಿಸ್ತಾನದ ನಂಟು ಎಂದು ಹೇಳುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ಘಟನೆ ನಡೆದಿರುವುದು ಕಾಂಗ್ರೆಸ್ ಸರ್ಕಾರ ಇರುವ ರಾಜಸ್ಥಾನದಲ್ಲಿ. ಇದನ್ನು ಸಮರ್ಥಿಸಿಕೊಂಡು ಮಾತನಾಡಿರುವ ಟಿಕಾಯತ್. ಬಿಜೆಪಿ, ಪ್ರತಿಪಕ್ಷವಿರುವ ರಾಜ್ಯಗಳಲ್ಲಿಯೇ ಇಂಥ ಘಟನೆ ನಡೆಯುವುದು ಏಕೆ ಎಂದಿದ್ದಾರೆ? ಬಿಜೆಪಿ ಸರ್ಕಾರವಿರದ ರಾಜ್ಯದಲ್ಲಿ ಈ ಪ್ರಕರಣ ನಡೆದಿದೆ. ಪಂಜಾಬ್ ಅಥವಾ ರಾಜಸ್ಥಾನದಲ್ಲಿ ಇಂಥ ಘಟನೆಗಳು ಹೆಚ್ಚಾಗಲಿವೆ. ಇದರಿಂದ ಅನುಮಾನ ಬರುವುದಿಲ್ಲವೆ ಎಂದು ಪ್ರಶ್ನಿಸಿದ್ದಾರೆ!
ಯಾವುದೋ ಒಂದು ಸಣ್ಣ ಘಟನೆ ನಡೆದರೂ ಅದರ ಹಿಂದೆ ಪಾಕಿಸ್ತಾನ ಕೈವಾಡವಿದೆ ಎಂದು ಬಿಜೆಪಿ ಹೇಳುತ್ತದೆ. ಇಷ್ಟು ಸಣ್ಣ ಘಟನೆಗಳನ್ನು ದೊಡ್ಡದಾಗಿ ಮಾಡಲು ಪ್ರಯತ್ನಿಸುತ್ತಿದೆ. ಇದರಲ್ಲಿ ಪಾಕಿಸ್ತಾನ ಏನು ಮಾಡುತ್ತದೆ? ಅದರ ಕೈವಾಡ ಇರಲು ಹೇಗೆ ಸಾಧ್ಯ ಎಂದು ಬಿಜೆಪಿ ವಿರುದ್ಧ ಈ ಉಚ್ಚಾಟಿತ ಮುಖಂಡ ಹೇಳಿದ್ದಾರೆ.
ಅಂದಹಾಗೆ ರಾಕೇಶ್ ಟಿಕಾಯತ್ ಅವರನ್ನು ಉಚ್ಚಾಟನೆ ಮಾಡಿರುವುದಕ್ಕೆ ಕಾರಣ ನೀಡಿದ್ದ, ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ಉಪಾಧ್ಯಕ್ಷ ರಾಜೇಶ್ ಸಿಂಗ್ ಚೌಹಾಣ್, ನಮ್ಮ ನಾಯಕ ಎನಿಸಿಕೊಂಡಿರೋ ರಾಕೇಶ್ ಟಿಕಾಯತ್ ರಾಜಕೀಯ ಪ್ರೇರಿತರಾಗಿ ಕಾಣಿಸಿಕೊಂಡರು. ನಮ್ಮ ನಾಯಕರು ಯಾವುದೋ ರಾಜಕೀಯ ಪಕ್ಷದ ಪ್ರಭಾವಕ್ಕೆ ಒಳಗಾಗಿ ಒಂದು ಪಕ್ಷದ ಪರ ಪ್ರಚಾರ ಮಾಡುವಂತೆ ಆದೇಶ ನೀಡಿರುವುದನ್ನು ನೋಡಿದ್ದೇವೆ. ನಮ್ಮ ಕೆಲಸ ರಾಜಕೀಯ ಮಾಡುವುದು ಅಥವಾ ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುವುದು ಅಲ್ಲ. ರೈತ ಪರ ಹೋರಾಟವೇ ಕೆಲಸ ಆಗಬೇಕು. ಆದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದರು.