

ತಿರುವನಂತಪುರ (ಕೇರಳ): ಏನೇ ತಪ್ಪು ಆಗಲಿ, ಮೊದಲು ಶಿರಚ್ಛೇದನ ಮಾಡಿ. ಅದೇ ಅವರಿಗೆ ಸರಿಯಾದ ಶಿಕ್ಷೆ ಎಂದು ಮದರಸಾಗಳಲ್ಲಿ ಕಲಿಸಿಕೊಡಲಾಗುತ್ತದೆ, ಇದನ್ನೇ ದೇವರ ನಿಯಮ ಎಂದು ಅಲ್ಲಿ ಕಲಿಸಿಕೊಡಲಾಗುತ್ತದೆ. ಅದಕ್ಕಾಗಿಯೇ ಈ ರೀತಿಯ ಕೃತ್ಯಗಳು ನಡೆಯುತ್ತಿರುವುದು ಎಂದು ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.
ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯಲಾಲ್ ಅವರ ರುಂಡವನ್ನು ಕತ್ತರಿಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಅವರು ಈ ಹೇಳಿಕೆ ನೀಡಿದ್ದಾರೆ. ಹಿಂದೂ ದೇವರನ್ನು ಅವಹೇಳನ ಮಾಡಿರುವ ಕೆಲ ವ್ಯಕ್ತಿಗಳ ಹೇಳಿಕೆಯನ್ನು ವಿರೋಧಿಸಿ ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ಬಿಜೆಪಿ ಮುಖಂಡೆ ನೂಪುರ್ ಶರ್ಮಾ ಹೇಳಿಕೆ ನೀಡಿದ್ದರು. ಇದರ ಕುರಿತು ಭಾರಿ ಪ್ರತಿಭಟನೆ ಶುರುವಾಗಿದೆ. ಆದರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಕನ್ಹಯ್ಯಲಾಲ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ವಿರೋಧಿಸಿ ಅವರ ಶಿರವನ್ನು ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಈ ಘಟನೆ ಕುರಿತು ರಾಷ್ಟ್ರವ್ಯಾಪಿ ಭಾರಿ ಖಂಡನೆ ವ್ಯಕ್ತವಾಗುತ್ತಲೇ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಈ ಮಾತನ್ನು ಹೇಳಿದ್ದಾರೆ.
ಮದರಸಾಗಳಲ್ಲಿ ಮಕ್ಕಳಿಗೆ ಏನು ಕಲಿಸಿಕೊಡುತ್ತಾರೆ ಎಂಬುವುದನ್ನು ಪರಿಶೀಲಿಸುವ ಅಗತ್ಯವಿದೆ. ಆದರೆ ನಾವು ಆ ಬಗ್ಗೆ ಚಿಂತೆ ಮಾಡುವುದೇ ಇಲ್ಲ. ಇಂಥ ಘಟನೆಗಳು ನಡೆದಾಗ, ಇಂಥ ರೋಗಲಕ್ಷಣಗಳು ಕಂಡು ಬಂದಾಗ ಮಾತ್ರವೇ ನಾವು ಚಿಂತಿಸುತ್ತೇವೆ. ಉಳಿದ ಸಂದರ್ಭದಲ್ಲಿ ಇಂಥ ಕ್ರೂರತೆಯ ಆಳವನ್ನು ತಿಳಿದುಕೊಳ್ಳಲು ನಾವು ನಿರಾಕರಿಸುತ್ತೇವೆ ಎಂದು ಖಾನ್ ಹೇಳಿದ್ದಾರೆ.