

ಉದಯಪುರ (ರಾಜಸ್ಥಾನ): ಬಿಜೆಪಿ ಮುಖಂಡೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಕಾರಣಕ್ಕೆ ರಾಜಸ್ಥಾನದ ಉದಯಪುರದ ಟೈಲರ್ ಕನ್ಹಯ್ಯಲಾಲ್ ಅವರನ್ನು ಭೀಕರವಾಗಿ ಕೊಲೆ ಮಾಡಿರುವ ಪಾತಕಿಗಳಿಗೆ ಪಾಕಿಸ್ತಾನದ ಲಿಂಕ್ ಇದೆ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.
ಟೈಲರ್ ಭೀಕರ ಕೊಲೆ ಮಾಡಿ, ಅದರ ವಿಡಿಯೋ ಮಾಡಿದ್ದ ಆರೋಪಿಗಳಾದ ಗೌಸ್ ಮೊಹಮ್ಮದ್ ಮತ್ತು ರಿಯಾಜ್ ಅಹ್ಮದ್ ಅವರನ್ನು ಮಂಗಳವಾರ ರಾತ್ರಿ ರಾಜ್‍ಸಮಂದ್ ಜಿಲ್ಲೆಯ ಭೀಮ್ ಪ್ರದೇಶದಲ್ಲಿ ಬಂಧಿಸಲಾಗಿದೆ. ಈ ಇಬ್ಬರೂ ಆರೋಪಿಗಳು ಪಾಕಿಸ್ತಾನ ಮೂಲದ ತೀವ್ರ ಮುಸ್ಲಿಂ ಮೂಲಭೂತವಾದಿ ಸಂಘಟನೆಯಾದ ದಾವತ್-ಎ-ಇಸ್ಲಾಮಿಯೊಂದಿಗೆ ಸಂಬಂಧ ಹೊಂದಿರುವುದಾಗಿ ತಿಳಿದುಬಂದಿದೆ. ಗೌಸ್ ಮೊಹಮ್ಮದ್ ಎಂಟು ಬೇರೆಬೇರೆ ಮೊಬೈಲ್ಗಳ ಮೂಲಕ ಪಾಕಿಸ್ತಾನದ ಜತೆ ಸಂಪರ್ಕ ಹೊಂದಿರುವುದು ತಿಳಿದುಬಂದಿದೆ.
ಸದ್ಯ ಈ ಪ್ರಕರಣದ ಹೊಣೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ವಹಿಸಲಾಗಿದೆ. ಈ ಘಟನೆಯ ಹಿಂದೆ ಇನ್ನಾವ ಭಯೋತ್ಪಾದಕರ ನಂಟು ಇದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಆರೋಪಿಗಳು ಭಯೋತ್ಪಾದಕರ ಗುಂಪಿನೊಂದಿಗೆ ಸಂಪರ್ಕದಲ್ಲಿರಬಹುದು. ಇದನ್ನು ಖಚಿತಪಡಿಸಿಕೊಳ್ಳಲು, ರಾಷ್ಟ್ರೀಯ ತನಿಖಾ ಸಂಸ್ಥೆ ತಂಡವು ಉದಯಪುರದಲ್ಲಿ ತನಿಖೆಗೆ ಮುಂದಾಗಿದೆ ಎಂದು ತಿಳಿದುಬಂದಿದೆ.
ಇದರ ಬೆನ್ನಲ್ಲೇ, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರಿಗೆ ಬಡ್ತಿ ನೀಡಲು ರಾಜ್ಯಸ್ಥಾನ ಸರ್ಕಾರ ನಿರ್ಧರಿಸಿದೆ. ಜೀವದ ಹಂಗುತೊರೆದು ಈ ಇಬ್ಬರು ಪಾತಕಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ತೇಜ್‌ಪಾಲ್, ನರೇಂದ್ರ, ಶೌಕತ್, ವಿಕಾಸ್ ಮತ್ತು ಗೌತಮ್ ಎಂಬ ಐವರು ಪೊಲೀಸರಿಗೆ ಬಡ್ತಿ ನೀಡಲಾಗುವುದು ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.