ಇಟಲಿಗೆ ಹಾರಿದ ರಾಹುಲ್‌ ಗಾಂಧಿ: ಪ್ಲೀಸ್‌... ಪ್ಲೀಸ್‌... ಜನರಲ್ಲಿ ಕೈಮುಗಿದು ಹೀಗೆ ಬೇಡಿಕೊಂಡ್ರು ಕಾಂಗ್ರೆಸ್‌ ವಕ್ತಾರ!

rahul
Published on

ನವದೆಹಲಿ: ಕಾಂಗ್ರೆಸ್ ಪಕ್ಷದ 137ನೇ ಸಂಸ್ಥಾಪನಾ ದಿನವನ್ನು ದೆಹಲಿಯಲ್ಲಿ ಇದೇ 28ರಂದು ಆಚರಿಸಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ತವರುಮನೆ ಇಟಲಿಗೆ ಪ್ರಯಾಣ ಬೆಳೆಸಿದ್ದಾರೆ. ಇದಕ್ಕೆ ನಿಖರ ಕಾರಣವನ್ನು ಅವರು ಕೊಡಲಿಲ್ಲ.

ಆದರೆ ರಾಹುಲ್‌ ಗಾಂಧಿಯವರು ಪದೇ ಪದೇ ಈ ರೀತಿ ಇಟಲಿ ವಿದೇಶ ಪ್ರವಾಸ ಮಾಡುತ್ತಿರುವುದು ಖುದ್ದು ಕಾಂಗ್ರೆಸ್ಸಿಗರಿಗೇ ಹಲವು ಬಾರಿ ಮುಜುಗರ ಉಂಟು ಮಾಡಿದ್ದು ಇದೆ, ಇದು ಒಂದೆಡೆಯಾದರೆ ಇವರ ವಿರುದ್ಧ ಟ್ರೋಲ್‌ಗಳು ಸರ್ವೇ ಸಾಮಾನ್ಯವಾಗಿಬಿಟ್ಟಿದೆ.

ಅದಕ್ಕಾಗಿ ಜನರಿಗೆ ಮತ್ತು ಮಾಧ್ಯಮಗಳಿಗೆ ಕೈಮುಗಿದು ಬೇಡಿಕೊಂಡಿರುವ ಕಾಂಗ್ರೆಸ್​ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ, "ರಾಹುಲ್ ಗಾಂಧಿ ಅವರು ಇಟಲಿಗೆ ಹೋಗಿದ್ದು ನಿಜ. ಆದರೆ ಇದಕ್ಕೆ ಬೇರೆ ಏನೂ ವಿಷಯ ಕಟ್ಟಬೇಡಿ. ಅವರು ಸಣ್ಣದೊಂದು ವೈಯಕ್ತಿಕ ಪ್ರವಾಸದಲ್ಲಿದ್ದಾರೆ ಅಷ್ಟೇ. ಶೀಘ್ರದಲ್ಲೇ ಮರಳಲಿದ್ದಾರೆ. ಪ್ಲೀಸ್‌ ಈ ಬಗ್ಗೆ ಬಿಜೆಪಿ ಅಥವಾ ಇನ್ನಾವುದೇ ಪಕ್ಷದವರಾಗಲೀ, ಮಾಧ್ಯಮ ಸ್ನೇಹಿತರು ಅನಗತ್ಯ ವದಂತಿಗಳನ್ನು ಹರಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ ರಾಜ್ಯಗಳ ಚುನಾವಣೆ ಜನವರಿ ಮಧ್ಯದ ವೇಳೆಗೆ ಘೋಷಣೆಯಾಗುವ ನಿರೀಕ್ಷೆಯಿದೆ. ಜನವರಿ 3ರಂದು ರಾಹುಲ್ ಪಂಜಾಬ್‌ನ ಮೋಗಾದಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮವಿದೆ. ಇದರ ನಡುವೆಯೇ ಅವರು ಇಟಲಿ ಪ್ರವಾಸ ಕೈಗೊಂಡಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದ್ದರೆ, ಸುರ್ಜೇವಾಲಾ ಅವರ ಇಂಥ ಮನವಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೋಲ್‌ ಆಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net