More

    ಬಡತನವೇ ಶಾಪವಾಗೋಯ್ತು ಮೇಡಂ, ವಯಸ್ಸಾದರೂ ಮದ್ವೆಯಾಗದೇ ವಿವಾಹಿತನ ಬಲೆಗೆ ಸಿಲುಕಿಬಿಟ್ಟೆ…

    ಬಡತನವೇ ಶಾಪವಾಗೋಯ್ತು ಮೇಡಂ, ವಯಸ್ಸಾದರೂ ಮದ್ವೆಯಾಗದೇ ವಿವಾಹಿತನ ಬಲೆಗೆ ಸಿಲುಕಿಬಿಟ್ಟೆ...ನನಗೀಗ 37 ವರ್ಷ. ಹೆಣ್ಣು ಬಡವರ ಮನೆಯಲ್ಲಿ ಹುಟ್ಟಬಾರದು ಅನ್ನಿಸ್ತಿದೆ. ಬಡತನದಿಂದಾಗಿ ಮದುವೆ ಮಾಡಲು ಹೆತ್ತವರಿಗೆ ಸಾಧ್ಯವೇ ಆಗಲಿಲ್ಲ. ಹೀಗೆ ಒಂಟಿತನದ ಇದ್ದ ನನಗೆ 50ವರ್ಷದ ಗಂಡಸೊಬ್ಬರು ಪರಿಚಯವಾದರು.

    ಅವರಿಗೆ ಮದುವೆಯಾಗಿ ಮಕ್ಕಳು ಇದ್ದು, ಆತ ತಮ್ಮ ಮಗಳಿಗೂ ಮದುವೆ ಮಾಡಿದ್ದರು. ಯಾವ ಕಾರಣಕ್ಕೋ ಆತನ ಹೆಂಡತಿ ಇವರ ಜತೆ ಜಗಳವಾಡಿಕೊಂಡು ತಮ್ಮ ತವರಿಗೆ ಹೋದವರು ವಾಪಸ್ ಬರಲೇ ಇಲ್ಲ. ತಮ್ಮ ಪತ್ನಿ ಸರಿಯಿಲ್ಲ ಎಂದೆಲ್ಲಾ ಕಥೆ ಹೇಳಿದರು. ಅವರ ಈ ಕಥೆ ಕೇಳುತ್ತ ನನಗೆ ಅವರ ಮೇಲೆ ಮರುಕಬಂತು. ನಮ್ಮ ಪರಿಚಯ ಹೀಗೆ ಪ್ರೇಮಕ್ಕೆ ತಿರುಗಿತು. ಆಗ ಅವರು ನಾನು ನಿನ್ನನ್ನು ಮದುವೆಯಾಗುವಂತಿಲ್ಲ,

    `ಲಿವಿಂಗ್ ಟುಗೆದರ್’ ರೀತಿಯಲ್ಲಿ ಸಂಬಂಧ ಬೆಳೆಸೋಣ ಎಂದರು. ನನಗೆ ನಿಜಕ್ಕೂ ಈ `ಲಿವಿಂಗ್ ಟುಗೆದರ್’ ಅಂದರೆ ಏನು ಎಂದು ಗೊತ್ತಿರಲಿಲ್ಲ ಮೇಡಂ ಆಗಲಿ ಎಂದು ಬಿಟ್ಟೆ. ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲ ನಮ್ಮ ಬದುಕು ಹೀಗೆ ಸಾಗಿತು. ನಾನು ತುಂಬ ಸುಖವಾಗಿಯೇ ಇದ್ದೆ. ಇದೀಗ ನಾನು ಗರ್ಭಿಣಿಯಾಗಿದ್ದೇನೆ. ಈ ವಿಷಯ ತಿಳಿಯುತ್ತಿದ್ದ ಹಾಗೆ ನನ್ನವರ ನಡವಳಿಕೆಯೇ ವಿಚಿತ್ರವಾಗಿ ಹೋಗಿದೆ. ಮನೆಗೆ ಬರುವಂತಿಲ್ಲ, ಹೆಚ್ಚು ಮಾತುಕತೆಯಿಲ್ಲ, ನನ್ನ ಆರೋಗ್ಯದ ಬಗ್ಗೆ ಕಾಳಜಿಯಿಲ್ಲ, ಬೇಕುಬೇಡಗಳಿಗೂ ತಮಗೂ ಏನೇನು ಸಂಬಂಧವೇ ಇಲ್ಲವೇನೋ ಎನ್ನುವ ಹಾಗೆ ನಡೆದುಕೊಳ್ಳುತ್ತಿದ್ದಾರೆ!

    ಮೊದಲಿನ ಹಾಗೆ ಪ್ರೀತಿಯ ಮಾತುಗಳು ಇಲ್ಲ. ನನಗಂತೂ ಜೀವನವೇ ಕತ್ತಲಲ್ಲಿ ಇಟ್ಟಹಾಗಿದೆ. ಇವರು ಈಗಲೇ ಹೀಗಾದರೆ ನಾಳೆ ನನ್ನ ಮಗುವಿನ ಗತಿಯೇನು? ಆ ಮಗುವಿಗೆ ಇವರು ಪ್ರೀತಿಯ `ಅಪ್ಪ’ ಆಗಿ ನಾವಿಬ್ಬರು ಅದನ್ನು ಮುಚ್ಚಟೆಯಿಂದ ಸಾಕಬೇಕಲ್ಲವೇ? ಇದನ್ನು ಕೇಳಿದರೆ ಮಗುವಿನ ಆಯ್ಕೆ ನಿನ್ನದು ನನ್ನದಲ್ಲ ಎನ್ನುತ್ತಾರೆ! ನನ್ನ ಪಾಲಿಗೂ ಪ್ರೀತಿಯಿಲ್ಲ, ನನ್ನ ಮಗುವಿನ ಪಾಲಿಗೂ ಪ್ರೀತಿಯಿಲ್ಲ ಎಂದಾದರೆ ನಾಳೆ ಇವರ ಆಸ್ತಿಯಲ್ಲಿ ನನಗು, ನನ್ನ ಮಗುವಿಗೂ ಏನು ಸಿಕ್ಕುತ್ತದೆ ಮೇಡಂ? ನನಗಂತೂ ದಿಕ್ಕೇ ತೋಚದಂತಾಗಿದೆ.

    ಉತ್ತರ: ನಿಮ್ಮ ಮುಗ್ಧತೆಯನ್ನು ಕಂಡು ನಿಜಕ್ಕೂ ನನಗೆ ಪರಿತಾಪವಾಗುತ್ತಿದೆ. ನೀವು ತೀರಾ ಮುಗ್ಧರಾಗಿ ನಮ್ಮ ಸಮಾಜದಲ್ಲಿ ಇನ್ನೂ ಅಷ್ಟಾಗಿ ಬೇರೂರಿಲ್ಲದ ವ್ಯವಸ್ಥೆಗೆ ಒಪ್ಪಿಕೊಂಡು ಬಿಟ್ಟಿದ್ದೀರಿ. ಹೀಗಾದಾಗ ಅದರ ಸಂಕಷ್ಟಗಳನ್ನು ಅನುಭವಿಸುವವಳು ಯಾವಾಗಲೂ ಹೆಣ್ಣೇ ಆಗಿರುತ್ತಾಳೆ. ಯಾಕೆಂದರೆ `ಹಡೆಯುವ ‘ ಕ್ರಿಯೆಯನ್ನು ಪ್ರಕೃತಿ ಹೆಣ್ಣಿಗೆ ಮಾತ್ರ ಕೊಟ್ಟಿರುವುದರಿಂದ! ‘ ಲಿವಿಂಗ್ ಟುಗೆದರ್’ ಗು, ಮದುವೆಗೂ ಅಜಗಜಾಂತರ ವ್ಯತ್ಯಾಸಗಳಿವೆ.

    ಮದುವೆಯಲ್ಲಿ ಲಗ್ನದ ಮುಹೂರ್ತ ಮುಗಿಯುತ್ತಿದ್ದ ಹಾಗೆ ಗಂಡು, ಹೆಣ್ಣುಗಳಿಬ್ಬರೂ ಕೆಲವು ನಿಬಂಧನೆಗಳಿಗೆ ಒಳಗಾಗುತ್ತಾರೆ. ಇಬ್ಬರ ಜವಾಬ್ದಾರಿಗಳು ಹೆಚ್ಚುತ್ತವೆ. ಸಂಸಾರ ಮತ್ತು ಕುಟುಂಬ ವ್ಯವಸ್ಥೆಯನ್ನು ತೂಗಿಸಿಕೊಂಡು ಹೋಗಲು ದಂಪತಿಗಳಿಬ್ಬರೂ ಈ `ಅಲಿಖಿತವಾದ’ ಕೆಲವು ನಿಯಮಗಳನ್ನು ಪಾಲಿಸಿಕೊಂಡು ಹೋಗಲೇಬೇಕಾಗುತ್ತದೆ. ಇದರಲ್ಲಿ ಯಾರೊಬ್ಬರೂ ತಮ್ಮ ಜವಾಬ್ದಾರಿಯಿಂದ ಜಾರಿಕೊಂಡರೂ ಕೋರ್ಟ್ ಸಹ ಅವರನ್ನು `ಅಪರಾಧಿ’ ಎಂದೇ ಪರಿಗಣಿಸುತ್ತದೆ. ಇವೆಲ್ಲವೂ ಭಾವುಕತೆ ಮತ್ತು ಸಾಮಾಜಿಕ ನಿಯಮಗಳಿಗನುಸಾರವಾಗಿ ಪ್ರಾಚೀನ ಕಾಲದಿಂದಲೂ ರೂಢಿಗೆ ಬಂದಿರುವ ಪದ್ಧತಿ.

    `ಲಿವಿಂಗ್ ಟುಗೆದರ್’ ನಲ್ಲಿ ಗಂಡು-ಹೆಣ್ಣು ತಮ್ಮ ದೈಹಿಕ ಅಗತ್ಯಗಳಿಗೆ ಮಾತ್ರ ಒಂದಾಗಿರುತ್ತಾರೆ. ಇಲ್ಲಿ ಭಾವನಾತ್ಮಕ ಚಿಂತನೆಗಳಿಗೆ ಅವಕಾಶವೇ ಇಲ್ಲ. ಯಾರು, ಯಾರ ಮೇಲೂ ಹಕ್ಕನ್ನು ಸಾಧಿಸುವಂತಿಲ್ಲ. ಅನೇಕ ಜೋಡಿಗಳು ಒಂದೇ ಮನೆಯಲ್ಲಿದ್ದರೂ ತಮ್ಮ ತಮ್ಮ ಅಡುಗೆಯನ್ನು ತಾವೇ ಮಾಡಿಕೊಂಡು ಊಟ ಮಾಡುತ್ತಾರೆ. `ನೀನು ಹೆಣ್ಣು ಆದ್ದರಿಂದ ನನಗೆ ಅಡುಗೆ ಮಾಡಿ ಹಾಕು’ ಎಂದು ಗಂಡು ಕೇಳುವಂತಿಲ್ಲ. ಹೆಚ್ಚಿನಂಶ ಇಬ್ಬರೂ ಉದ್ಯೋಗಸ್ಥರಾಗಿರುತ್ತಾರೆ. ತಮ್ಮತಮ್ಮ ಖರ್ಚುಗಳನ್ನೂ ತಾವೇ ಮಾಡಿಕೊಳ್ಳುತ್ತಾರೆ.

    `ನೀನು ಗಂಡು ಮನೆಯ ಖರ್ಚು, ವೆಚ್ಚಗಳನ್ನು ನೀನೇ ನಿಭಾಯಿಸು’ ಎಂದು ಹೆಣ್ಣೂ ಹೇಳುವಂತಿಲ್ಲ. ತಮಗಾಗಿಯೇ ಬೇಕೆನಿಸಿದರೆ ಉಡುಗೊರೆಗಳನ್ನು ಕೊಟ್ಟುಕೊಳ್ಳಬಹುದು ಅಷ್ಟೇ. ಆದರೆ ನಿರೀಕ್ಷಿಸುವಂತಿಲ್ಲ. ಇಬ್ಬರಿಗೂ ಮನಸ್ಸು ಹೊಂದಿದರೆ ಮುಂದೆ ಮದುವೆಯನ್ನೂ ಮಾಡಿಕೊಳ್ಳಬಹುದು. ಲಿವಿಂಗ್ ಟುಗೆದರ್ ವ್ಯವಸ್ಥೆಯೇ `ಜವಾಬ್ದಾರಿಯಿಂದ ಮುಕ್ತ ‘ ವಾಗುವ ಹಂಬಲ ಇರುವವರು ಮಾಡಿಕೊಂಡಿರುವಂಥದ್ದು. ನೀವು ನೋಡಿದರೆ, ಆತ ನಿಮ್ಮನ್ನು ಸಂಗಾತಿಯಾಗಿ ಆರಿಸಿಕೊಳ್ಳುವ ಮುನ್ನವೇ `ನಮ್ಮದು ಲಿವಿಂಗ್ ಟುಗೆದರ್’ ಸಂಬಂಧ ಎಂದು ಹೇಳಿದರು, ಅದನ್ನು ಸರಿಯಾಗಿ ಅರಿಯದೇ ನನ್ನ ಮಗುವಿಗೆ ಪ್ರೀತಿಯ ಅಪ್ಪನಾಗಬೇಡವೇ ನಾವಿಬ್ಬರು ಮಗುವನ್ನು ಮುಚ್ಚಟೆಯಿಂದ ಸಾಕಬೇಡವೇ ಎಂದೆಲ್ಲ ಹಲುಬುತ್ತಿದ್ದೀರಿ.

    ಇಂಥ ಸಂಬಂಧಗಳನ್ನು ಒಪ್ಪಿಕೊಳ್ಳುವಾಗ ನಮ್ಮ ಜಾಣತನವನ್ನು ಬಳಸಬೇಕಲ್ಲವೇ? ಸಂಗಾತಿಯೊಬ್ಬ ಸಿಕ್ಕಿದ, ಅವನು ನನ್ನ ಯಜಮಾನನಾಗಿಯೇ ಬಿಡುತ್ತಾನೆ ಎಂದೆಲ್ಲ ಕನಸನ್ನು ಹೇಗೆ ಕಂಡಿರಿ ತಾಯಿ? ಆದರೂ ಕೋರ್ಟಿನ ನಿಯಮಗಳು ಅಲ್ಪಸ್ವಲ್ಪ ಬದಲಾಗುತ್ತಿವೆ. ನಿಮಗಿಲ್ಲದ ಹಕ್ಕುಗಳು ನಿಮ್ಮ ಮಗುವಿಗೆ ಸಿಗಬಹುದು. ನೀವೊಮ್ಮೆ ವಕೀಲರನ್ನು ಭೇಟಿ ಮಾಡಿ.

    ಹೆಣ್ಣಾಗಿ ಹುಟ್ಟಿದ್ದೇ ತಪ್ಪಾಯ್ತು! ಕರುಳಕುಡಿಯನ್ನೇ ಜೀವಂತ ಸಮಾಧಿ ಮಾಡಿದ ಅಪ್ಪ-ಅಮ್ಮ….

    VIDEO: ಅಧಿಕಾರಿಗಳ ಎಡವಟ್ಟಿನಿಂದ ರಾಜ್ಯದತ್ತ ಧಾವಿಸಿ ಬರುತ್ತಿದೆ ‘ಮಹಾ‘ ಜಲಾಶಯದ ನೀರು: ಹೈ ಅಲರ್ಟ್‌ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts