

ಚೆನ್ನೈ: ಹೆಣ್ಣುಮಗು ಹುಟ್ಟಿತ್ತೆಂಬ ಕಾರಣಕ್ಕೆ ಆರು ದಿನಗಳ ಶಿಶುವನ್ನು ಖುದ್ದು ತಂದೆ-ತಾಯಿಯೇ ಜೀವಂತ ಸಮಾಧಿ ಮಾಡಿರುವ ಘಟನೆ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ನಡೆದಿದೆ.
ಮುತ್ತುಪಾಂಡಿ (30) ಮತ್ತು ಎಂ.ಕೌಸಲ್ಯ (23) ದಂಪತಿಗೆ ಈಗಾಗಲೇ 4 ಮತ್ತು 2 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೂರನೆಯ ಮಗು ಗಂಡಾಗುವ ನಿರೀಕ್ಷೆಯಲ್ಲಿ ಇದ್ದರು. ಆದರೆ ಅದು ಕೂಡ ಹೆಣ್ಣು ಹುಟ್ಟಿದ್ದರಿಂದ ಇಂಥದ್ದೊಂದು ಭಯಾನಕ ಕೃತ್ಯ ಎಸಗಿದ್ದಾರೆ.
ಈ ಘಟನೆ ಬೆಳಕಿಗೆ ಬರುತ್ತಲೇ ಇರಲಿಲ್ಲ. ಡಿ.21ರಂದು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಮಗು ಹುಟ್ಟಿತ್ತು. ಅದಾದ ಬಳಿ ಕೌಸಲ್ಯ ಅವರನ್ನು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಲಾಗಿತ್ತು. ಆರನೆಯ ದಿನ ಅಲ್ಲಿಯೇ ಸಮೀಪದಲ್ಲಿ ಇರುವ ಆಸ್ಪತ್ರೆಯ ನರ್ಸ್, ಮಗುವಿನ ಆರೋಗ್ಯವನ್ನು ವಿಚಾರಿಸಲು ಬಂದಿದ್ದಾರೆ.
ಈ ವೇಳೆ ಮಗು ಇಲ್ಲದಿರುವುದನ್ನು ನೋಡಿ ವಿಚಾರಿಸಿದ್ದಾರೆ. ಅದಕ್ಕೆ ಆಕೆ ಮಗು ಮೃತಪಟ್ಟಿದೆ. ಮನೆಯ ಹಿಂದುಗಡೆ ಸಮಾಧಿ ಮಾಡಿದ್ದೇವೆ ಎಂದಿದ್ದಾಳೆ. ಆದರೆ ತುಂಬಾ ಆರೋಗ್ಯದಿಂದ ಇದ್ದ ಮಗು ಮೃತಪಡಲು ಸಾಧ್ಯವೇ ಇಲ್ಲ ಎಂದು ಅನುಮಾನಗೊಂಡ ನರ್ಸ್ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಬಂದಾಗಲೂ ಮಗು ಅನಾರೋಗ್ಯದಿಂದ ಮೃತಪಟ್ಟಿರುವುದಾಗಿ ದಂಪತಿ ಹೇಳೀದ್ದಾರೆ. ಆದರೆ ಶಿಶು ಮೃತಪಟ್ಟಿರುವ ಬಗ್ಗೆ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡದೇ ಹೂತು ಹಾಕಿದ್ದು ಸಂದೇಹಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ.