ತಿರುಪತಿಯ ಪುರೋಹಿತನ ಮನೆಯಲ್ಲಿ ಐಟಿ ರೇಡ್‌- 128 ಕೆ.ಜಿ ಚಿನ್ನ, 70 ಕೋಟಿ ರೂ ವಜ್ರ ವಶಕ್ಕೆ! ಅಸಲಿಯತ್ತು ಇಲ್ಲಿದೆ ನೋಡಿ...

ತಿರುಪತಿ ಪುರೋಹಿತನ ಮನೆಯಲ್ಲಿ ಐಟಿ ರೇಡ್‌- 128 ಕೆ.ಜಿ ಚಿನ್ನ, 70 ಕೋಟಿ ರೂ ವಜ್ರ ವಶಕ್ಕೆ! ಅಸಲಿಯತ್ತು ಇಲ್ಲಿದೆ ನೋಡಿ - youtube
Published on

ತಿರುಮಲ: ದೇಶದ ನಂ.1 ಹಾಗೂ ವಿಶ್ವದ ಟಾಪ್‌ಮೋಸ್ಟ್‌ ಸಿರಿವಂತರ ದೇವರು ಎನಿಸಿಕೊಂಡಿರುವುದು ತಿರುಮಲ ತಿರುಪತಿಯ ವೆಂಕಟೇಶ್ವರ. ವರ್ಷಕ್ಕೆ ಏನಿಲ್ಲವೆಂದರೂ ಒಂದೂವರೆ ಸಾವಿರ ಕೋಟಿ ರೂಪಾಯಿಗಳ ಆದಾಯ ಈ ದೇವಾಲಯಕ್ಕಿದೆ. ಅದೇನೇ ಇದ್ದರೂ ಇದೀಗ ಈ ದೇವಾಲಯದ ಪುರೋಹಿತ ಎನಿಸಿಕೊಂಡವರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿದ್ದಾರೆ.

ಇಲ್ಲಿರುವ 16 ಪುರೋಹಿತರಲ್ಲಿ ಒಬ್ಬ ಪುರೋಹಿತರ ಮನೆಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು, ಅವರ ಮನೆಯಲ್ಲಿ ಅಪಾರ ನಗದು, ಚಿನ್ನ, ವಜ್ರಾಭರಣಗಳು ಪತ್ತೆಯಾಗಿರುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ಕಾಣಬಹುದು. ಇದರಲ್ಲಿ ವಜ್ರ, ಚಿನ್ನಾಭರಣಗಳನ್ನು ಸಾಲಾಗಿ ಜೋಡಿಸಿಟ್ಟಿರುವುದು ಮತ್ತು ಒಂದಷ್ಟು ಜನರು ಪೊಲೀಸ್‌ ಯೂನಿಫಾರ್ಮ್‌ನಲ್ಲಿ ಇರುವುದು ಕಾಣಬಹುದಾಗಿದೆ.

ಇಲ್ಲಿರುವ ಮಾಹಿತಿ ಪ್ರಕಾರ, ‘ತಿರುಪತಿ ತಿಮ್ಮಪ್ಪನ ಸೇವೆ ಮಾಡುವ 16 ಪುರೋಹಿತರಲ್ಲಿ ಒಬ್ಬ ಪುರೋಹಿತರ ಮನೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ 128 ಕೆ.ಜಿ ಚಿನ್ನ, 150 ಕೋಟಿ ರೂಪಾಯಿ ನಗದು, 70 ಕೋಟಿ ರೂಪಾಯಿ ಬೆಲೆಯ ವಜ್ರ ಸಿಕ್ಕಿದೆ ಎಂದಿದೆ. ಇದರ ಸತ್ಯಾಸತ್ಯತೆಯನ್ನು ಅರಿಯದೇ ಇನ್ನುಮುಂದೆ ಯಾರೂ ತಿರುಪತಿಗೆ ಕಾಣಿಕೆ ಸಲ್ಲಿಸಬೇಡಿ ಎಂದೂ ಅದರಲ್ಲಿ ಬರೆಯಲಾಗಿದೆ. ಯೂಟ್ಯೂಬ್‌ನಲ್ಲಿ ಕೂಡ ಈ ವಿಡಿಯೋ ಹರಿದಾಡುತ್ತಿದೆ.

ಆದರೆ ನಿಜವಾಗಿಯೂ ಹೀಗೆ ರೇಡ್‌ ಆಗಿದ್ದು ಹೌದಾ? ಇಷ್ಟು ಬೆಲೆಬಾಳುವ ಆಭರಣ, ನಗದು ಪುರೋಹಿತನ ಮನೆಯಲ್ಲಿ ಸಿಕ್ಕಿದ್ದು ನಿಜನಾ ಎಂಬ ಬಗ್ಗೆ ಫ್ಯಾಕ್ಟ್‌ಚೆಕ್‌ ಮಾಡಿದಾಗ ಸಿಕ್ಕಿದ್ದೇ ಬೇರೆ ವಿಷಯ. ಅದೇನೆಂದರೆ ಇದು ಸುಳ್ಳು ಸುದ್ದಿ. ಯಾವುದೇ ಪುರೋಹಿತನ ಮನೆಯಲ್ಲಿ ದಾಳಿಯೂ ಆಗಲಿಲ್ಲ, ಇವೆಲ್ಲಾ ಸಿಕ್ಕಿಯೂ ಇಲ್ಲ.

ಅಸಲಿಗೆ ಈ ವಿಡಿಯೋ ತಮಿಳುನಾಡಿನಲ್ಲಿ ನಡೆದ ಚಿನ್ನಾಭರಣಗಳ ಅಂಗಡಿಯ ದರೋಡೆ ಪ್ರಕರಣದಲ್ಲಿ ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿರುವ ನಗದು, ಚಿನ್ನಾಭರಣಗಳದ್ದಾಗಿದೆ. ತಮಿಳುನಾಡಿನ ವೆಲ್ಲೂರಿನಲ್ಲಿ ಇರುವ ಜೋಸ್‌ ಅಲುಕ್ಕಾಸ್‌ ಷೋರೂಂನಲ್ಲಿ ಡಿ.14ರಂದು ನಡೆದಿದ್ದ ದರೋಡೆಗೆ ಸಂಬಂಧಿಸಿದಂತೆ ಆರೋಪಿಗಳಿಂದ ಇದನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಇದರ ವರದಿಯನ್ನು ತಮಿಳುನಾಡಿನ ಟೀವಿ ಚಾನೆಲ್‌ ‌ಗಳಲ್ಲಿ ಇದೇ ಡಿಸೆಂಬರ್‌ 22ರಂದು ಪ್ರಸಾರವಾಗಿತ್ತು.

ಆರೋಪಿಗಳು ಸ್ಮಶಾನದಲ್ಲಿ ಹೂತಿಟ್ಟಿದ್ದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಡೀಕಾರಾಮನ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಯುತ್ತಿದೆ. ಈ ವಿಡಿಯೋದಲ್ಲಿ ವಶಪಡಿಸಿಕೊಂಡಿರುವ 15 ಕೆಜಿ ಚಿನ್ನ ಮತ್ತು ಸುಮಾರು 500 ಗ್ರಾಂ ವಜ್ರಗಳನ್ನು ಪೊಲೀಸರು ಪ್ರದರ್ಶಿಸುತ್ತಿದ್ದಾರೆ. ಆದರೆ ಇದೇ ವಿಡಿಯೋ ಇಟ್ಟುಕೊಂಡು ತಿರುಪತಿಯ ಪುರೋಹಿತರ ಮನೆಯಲ್ಲಿ ನಡೆದ ದಾಳಿ ಎಂಬ ಸುದ್ದಿ ಹರಿಬಿಡಲಾಗಿದೆ.

ತಮಿಳುನಾಡಿನ ವೆಲ್ಲೂರಿನಲ್ಲಿ ಇರುವ ಜೋಸ್‌ ಅಲುಕ್ಕಾಸ್‌ ಷೋರೂಂ ಸುದ್ದಿ ಟಿವಿಯಲ್ಲಿ ಪ್ರಸಾರವಾಗಿರುವುದು ಇಲ್ಲಿದೆ ನೋಡಿ: (ಕೃಪೆ ಶಾಲಿನಿ ನ್ಯೂಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net