VIDEO: ರಸ್ತೆಯ ಮೇಲೆ ಹಿಮದ ಹಾಸಿಗೆ- ನೋಡುಗರಿಗೆ ರೋಮಾಂಚನ, ಸ್ಥಳೀಯರಿಗೆ ಆತಂಕ

hima
Published on

ಉತ್ತರಾಖಂಡ: ಹಿಮ ಮಳೆಯಾಗುತ್ತಿರುವ ದೃಶ್ಯವನ್ನು ನೋಡುತ್ತಿದ್ದರೆ ಹೊರಗಿನ ಜನರಿಗೆ ಏನೋ ರೋಮಾಂಚನ. ರಸ್ತೆಯಲ್ಲಿ ಹಿಮಹೊದ್ದು ಮಲಗಿದ್ದರೆ ಅದನ್ನು ನೋಡುವುದೇ ಒಂದುರೀತಿಯ ಖುಷಿ. ನಾವೂ ಇಲ್ಲಿ ಇರಬಾರದಿತ್ತೆ ಎಂದು ಅಂದುಕೊಳ್ಳುವುದೂ ಉಂಟು. ಆದರೆ ಸ್ಥಳೀಯ ನಿವಾಸಿಗಳಿಗೆ ಅಂದರೆ ಹಿಮಪಾತದಿಂದ ಸಂಕಷ್ಟಕ್ಕೆ ಒಳಗಾಗಿರುವ ಜನರ ಸ್ಥಿತಿ ಮಾತ್ರ ಅನುಭವಿಸಿದವರಿಗೇ ಗೊತ್ತು.

ಅದೇ ರೀತಿ ಉತ್ತರಾಖಂಡದಲ್ಲಿ ಹಿಮಪಾತ ಹೊಸತೇನಲ್ಲ. ಇಲ್ಲಿಯ ಜನರ ಬದುಕನ್ನು ಅಕ್ಷರಶಃ ನಲುಗಿಸಿ ಹಾಕುತ್ತವೆ ಹಿಮಪಾತ. ಕಳೆದ ಫೆಬ್ರುವರಿ ತಿಂಗಳಿನಲ್ಲಿ ಹಿಮ ಸುನಾಮಿಯೇ ಎದ್ದು, ನೂರಾರು ಜೀವಗಳನ್ನು ಬಲಿ ಪಡೆದಿತ್ತು. ಇಲ್ಲಿನ ಜನರ ಬದುಕು ಅಲ್ಲೋಲ ಕಲ್ಲೋಲವಾಗಿತ್ತು.

ಮಿಲಿಯನ್ ಮೆಟ್ರಿಕ್ ಟನ್ ಗಟ್ಟಲೆ ಹಿಮಪರ್ವತಗಳಿಂದ ಹಿಮಗಡ್ಡೆಗಳು ಹಠಾತ್ತನೆ ಕುಸಿದಿರುವುದರಿಂದ ಈ ಅವಘಡ ಸಂಭವಿಸಿದೆ ಎಂದು ಉತ್ತರಾಖಂಡದ ತಜ್ಞರು ಅಭಿಪ್ರಾಯ ಪಟ್ಟಿದ್ದರು. ಪರ್ವತಗಳ ಅಡಿಯಲ್ಲಿನ ಹಿಮ ನದಿ ಮೇಲಿನ ಒತ್ತಡ ಈ ಘಟನೆಗೆ ಕಾರಣವಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದರು. ಈ ಅಂತರ ನದಿಯು ಸುಮಾರು 4.5 ಮಿಲಿಯನ್ ಕ್ಯೂಬಿಕ್ ಮೀಟರ್‌ನಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಅರ್ಹತೆ ಹೊಂದಿದ್ದು, ಇದರ ಮೇಲಿನ ಒತ್ತಡವೂ ಹಿಮಪ್ರವಾಹ ಸಂಭವಿಸಲು ಕಾರಣವೂ ಇದ್ದಿರಬಹುದು ಎಂದು ಅಂದಾಜು ಮಾಡಲಾಗಿತ್ತು.

ಹೆಚ್ಚಿನ ಮಟ್ಟದ ಅಂತರ್ಜಲ ಶೇಖರಣೆಯಾಗಿ, ಮತ್ತೊಂದು ಕಡೆಯಿಂದ ನೀರು ಅಧಿಕ ಮಟ್ಟದಲ್ಲಿ ಹರಿದುಬಂದಿದ್ದು ಹಿಮಪ್ರವಾಹಕ್ಕೆ ಕಾರಣವಾಗಿದೆ ಹಾಗೂ ಕಣಿವೆಯಲ್ಲಿ ರಭಸದಿಂದ ಮುನ್ನುಗ್ಗಿದೆ ಎಂದೆಲ್ಲಾ ಊಹಿಸಲಾಗಿತ್ತು. ವಿಜ್ಞಾನಿಗಳ ನಿರೀಕ್ಷೆಗೂ ಮೀರಿ ಪ್ರಕೃತಿ ಇಲ್ಲಿ ಕೋಪಗೊಂಡ ಜನರ ಬದುಕನ್ನು ನರಕ ಮಾಡಿದ್ದಂತೂ ಸುಳ್ಳಲ್ಲ.

ಇದೀಗ ಅಂಥದ್ದೇ ಹಿಮಪಾತ ಉತ್ತರಾಖಂಡದ ಪಿಥೋರಗಢ ಜಿಲ್ಲೆಯ ಮುನ್ಸಿಯಾರಿಯಲ್ಲಿ ಉಂಟಾಗಿದೆ. ರಸ್ತೆಗಳೆಲ್ಲಾ ಹಿಮದಿಂದ ಹೊದ್ದು ಮಲಗಿದ್ದು, ಹಿಮದ ಹಾಸಿಗೆಯಂತೆ ಗೋಚಾರವಾಗುತ್ತಿದೆ. ಇಲ್ಲಿ ಭಾರಿ ಪ್ರಮಾಣದಲ್ಲಿ ಹಿಮಪಾತವಾಗುತ್ತಿದ್ದು ಮನೆ, ರಸ್ತೆ, ವಾಹನಗಳು ಹಿಮದಿಂದ ಕೂಡಿಹೋಗಿವೆ. ಸ್ಥಳೀಯರಿಗೆ ಇದು ಆತಂಕ ಸೃಷ್ಟಿಸುವಂತಿದ್ದು, ನೋಡುಗರಿಗೆ ಮಾತ್ರ ಪುಳಕ ಉಂಟು ಮಾಡುವಂತಿದೆ.

ಇಲ್ಲಿದೆ ನೋಡಿ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net