ಮೋದಿಜೀ... ಸುಳ್​ ಹೇಳ್ಬೇಡಿ... ಬಿಹಾರಿಗಳಿಗೆ ಎಷ್ಟು ಉದ್ಯೋಗ ಕೊಟ್ಟಿದ್ದೀರಿ?

rahul
Published on

ನವಾಡಾ (ಬಿಹಾರ): ಬಿಹಾರದಲ್ಲಿ ಚುನಾವಣೆಯ ರಂಗು ಕಾವೇರುತ್ತಿರುವ ನಡುವೆಯೇ, ಆರೋಪ- ಪ್ರತ್ಯಾರೋಪಗಳ ಸುರಿಮಳೆ ಶುರುವಾಗಿದೆ.

ಬಿಹಾರದ ನವಾಡಾ ಜಿಲ್ಲೆಯ ಹಿಸುವಾದಲ್ಲಿ ತೇಜಸ್ವಿ ಯಾದವ್ ಜತೆ 'ಬದಲಾವ್ ಸಂಕಲ್ಪ್' ರ‍್ಯಾಲಿಯಲ್ಲಿ ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೋದಿಯವರೇ, ಬಿಹಾರದ ಜನರ ಮುಂದೆ ಸುಳ್ಳು ಹೇಳಬೇಡಿ. ನೀವು ಬಿಹಾರಿಗಳಿಗೆ ಉದ್ಯೋಗ ನೀಡಿದ್ದೀರಾ? ಕಳೆದ ಚುನಾವಣೆಯಲ್ಲಿ ನೀವು 2 ಕೋಟಿ ಉದ್ಯೋಗದ ಭರವಸೆ ಕೊಟ್ಟಿದ್ದಿರಿ. ಆದರೆ ಯಾರೊಬ್ಬರಿಗೂ ಉದ್ಯೋಗ ಸಿಕ್ಕಿಲ್ಲ ಎಂದು ಹರಿಹಾಯ್ದರು.

ಮೋದಿಯವರು ಸೇನಾಪಡೆ , ರೈತರು, ಕಾರ್ಮಿಕರು ಮತ್ತು ವ್ಯಾಪಾರಿಗಳ ಮುಂದೆ ತಲೆ ಬಾಗುತ್ತೇನೆ ಎಂದು ಹೇಳುತ್ತಿದ್ದಾರೆ. ಮನೆಗೆ ಹೋದ ಮೇಲೆ ಅಂಬಾನಿ ಮತ್ತು ಅದಾನಿಗೆ ಮಾತ್ರ ಕೆಲಸ ಮಾಡುತ್ತಾರೆ ಎಂದು ಹೇಳಿದರು.

ಕಪ್ಪು ಹಣದ ವಿರುದ್ಧ ಹೋರಾಡುವುದಾಗಿ ಮೋದಿಯವರು ಹೇಳಿದ್ದರು. ಆದರೆ ಅದಾನಿ, ಅಂಬಾನಿ ಸರತಿ ಸಾಲಿನಲ್ಲಿ ನಿಂತಿರುವುದನ್ನು ನೀವು ನೋಡಿದ್ದೀರಾ? ಇವರೆಲ್ಲರೂ ಹವಾನಿಯಂತ್ರಿತ ಕೋಣೆಗಳಲ್ಲಿರುತ್ತಾರೆ. ನಮ್ಮ ಪ್ರಧಾನಿಯವರು ಶ್ರೀಮಂತರ ಪರವಾಗಿದ್ದಾರೆ. ರೈತರು ಮತ್ತು ಸಣ್ಣ ಉದ್ಯಮಿಗಳನ್ನು ಕಡೆಗಣಿಸುತ್ತಿದ್ದಾರೆ.

ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತರುವ ಮೂಲಕ ರೈತರ ವಿರೋಧಿ ಎನ್ನುವುದು ಸಾಬೀತು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಚೀನಾ ವಿರುದ್ಧದ ಸಂಘರ್ಷದಲ್ಲಿ ನಮ್ಮ 20 ಯೋಧರು ಹುತಾತ್ಮರಾದರು. ಚೀನಾ ನಮ್ಮ 1200 ಕಿಮಿ ಭೂಭಾಗವನ್ನು ಅತಿಕ್ರಮಿಸಿತು. ಚೀನಾ ನಮ್ಮ ಗಡಿಯೊಳಗೆ ನುಗ್ಗಿದರೂ ಯಾರೊಬ್ಬರೂ ಒಳಗೆ ಬಂದಿಲ್ಲ ಎಂದು ಹೇಳುವ ಮೂಲಕ ಪ್ರಧಾನಿ ನಮ್ಮ ಯೋಧರನ್ನು ಅವಮಾನಿಸಿದ್ದು ಯಾಕೆ? ಇವತ್ತು ನಾನು ತಲೆಬಾಗುತ್ತಿದ್ದೇನೆ ಅಂತಿದ್ದಾರೆ ಎಂದು ಮೋದಿ ವಿರುದ್ಧ ರಾಹುಲ್ ಹೇಳಿದರು.

ಈ ಸಂದರ್ಭದಲ್ಲಿ ತೇಜಸ್ವಿ ಯಾದವ್​ ಕೂಡ ಮಾತನಾಡಿ ಬಿಹಾರಿಗಳ ಉದ್ಯೋಗವನ್ನು ಮೋದಿ ಕಸಿದುಕೊಂಡಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net