

ಬೆಂಗಳೂರು: ವೈದ್ಯಕೀಯ ವಿದ್ಯಾರ್ಥಿಗಳು ಮ್ಯಾನೇಜ್ಮೆಂಟ್ ಕೋಟಾ ಅಥವಾ ಎನ್ಆರ್ಐ ಕೋಟಾದಿಂದ ಪ್ರವೇಶ ಪಡೆದಿದ್ದರೆ, ಅಂಥವರು ಕೂಡ ಒಂದು ವರ್ಷ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಬೇಕು ಎಂಬ ನಿಯಮದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ಹಲವರು ವೈದ್ಯರನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಸ್ನಾತಕೋತ್ತದ ವೈದ್ಯಕೀಯ ಕೋರ್ಸ್ ಪಡೆದ ವಿದ್ಯಾರ್ಥಿಗಳು ಕಡ್ಡಾಯವಾಗಿ ಒಂದು ವರ್ಷ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಬೇಕು ಎನ್ನುವುದು ಸರಿಯಿಲ್ಲ, ಸರ್ಕಾರಿ ಕೋಟಾದಡಿ ಪ್ರವೇಶ ಪಡೆದಿರುವ ಅಭ್ಯರ್ಥಿಗಳಿಗೆ ಇರುವ ಈ ನಿಯಮವನ್ನು ತಮಗೂ ಅನ್ವಯ ಮಾಡಿರುವುದು ಸರಿಯಲ್ಲ ಎಂದು 280 ಮಂದಿ ವೈದ್ಯಕೀಯ ವಿದ್ಯಾ್ಥಿಗಳು ಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಅರ್ಜಿಯನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ನೇತೃತ್ವದ ಪೀಠ, ಮ್ಯಾನೇಜ್ಮೆಂಟ್ ಕೋಟಾದಲ್ಲಿ ಅಂಥ ವಿಶೇಷತೆ ಏನಿದೆ? ಒಂದು ವರ್ಷ ಗ್ರಾಮೀಣ ವಿಭಾಗದಲ್ಲಿ ಸೇವೆ ಸಲ್ಲಿಸಬೇಕು ಎಂದರೆ ಈ ರೀತಿ ಆಡುವುದೇಕೆ ಎಂದು ಪ್ರಶ್ನಿಸಿದೆ.
ಅದಕ್ಕೆ ವೈದ್ಯರ ಪರ ವಕೀಲೆ ಅಕ್ಕಮಹಾದೇವಿ ಅವರು, ಮ್ಯಾನೇಜ್ಮೆಂಟ್ ಕೋಟಾದಲ್ಲಿ ಪ್ರವೇಶ ಪಡೆದವರೂ ಈ ರೀತಿ ಸೇವೆ ಸಲ್ಲಿಸಬೇಕು ಎಂದು ಕಾಲೇಜುಗಳ ಬ್ರೋಷರ್ನಲ್ಲಿ ಉಲ್ಲೇಖವಾಘಿಲ್ಲ. ಮ್ಯಾನೇಜ್ಮೆಂಟ್ ಕೋಟಾದಡಿ ವಿದ್ಯಾರ್ಥಿಗಳು ಲಕ್ಷಾನುಗಟ್ಟಲೆ ಫೀಸ್ ಕೊಟ್ಟು ಪ್ರವೇಶ ಪಡೆದಿರುತ್ತಾರೆ. ಕೆಲವರು ಕೋಟಿ ರೂಪಾಯಿಗಳನ್ನೂ ಕೊಡುವುದಿದೆ. ಇಷ್ಟು ದೊಡ್ಡ ಮೊತ್ತದ ಹಣ ಕೊಟ್ಟರೂ ಅವರು ಗ್ರಾಮೀಣ ವಿಭಾಗದಲ್ಲಿ ಸೇವೆ ಸಲ್ಲಿಸಬೇಕು ಎನ್ನುವುದು ಸರಿಯಲ್ಲ ಎಂದರು.
ಅದಕ್ಕೆ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿದರು. ಈ ಕೋಟಾದಡಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಆಕಾಶದಿಂದ ಬಂದು ಇಳಿದಿಲ್ಲ. ಹೆಚ್ಚು ಶುಲ್ಕ ಕೊಟ್ಟ ಮಾತ್ರಕ್ಕೆ ಅವರು ಸೇವೆ ಸಲ್ಲಿಸಬಾರದು ಎಂದು ಅರ್ಥವಲ್ಲ. ಕೋವಿಡ್ನಂಥ ಗಂಭೀರ ಸ್ಥಿತಿಯಲ್ಲಿ ಜನರು ಬೋದಿ ಹೆಣವಾಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿಯೂ ನಾನು ಅಲ್ಲಿ ಸೇವೆ ಮಾಡುವುದಿಲ್ಲ, ಇಲ್ಲಿ ಸೇವೆ ಮಾಡುವುದಿಲ್ಲ ಎಂದರೆ ಹೇಗೆ? ಎಲ್ಲಾ ವೈದ್ಯರೂ ಸೇವೆ ಸಲ್ಲಿಸಬೇಕು ಎಂದು ಸರ್ಕಾರ ಕೇಳಿಕೊಂಡರೆ ಅದರಲ್ಲಿ ತಪ್ಪು ಏನಿದೆ? ಹೆಚ್ಚು ಶುಲ್ಕ ಕೊಟ್ಟ ಮಾತ್ರಕ್ಕೆ ಸ್ವರ್ಗದಿಂದ ಇಳಿದುಬಂದವರು ಎಂದು ಅರ್ಥ ಅಲ್ಲವಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದರು.
ದೀರ್ಘ ವಾದ, ಪ್ರತಿವಾದ ಆಲಿಸಿದ ಕೋರ್ಟ್, ಈ ನಿಟ್ಟಿನಲ್ಲಿ ಅಡ್ವೊಕೇಟ್ ಜನರಲ್ ಅವರು ಬಂದು ವಾದ ಮಂಡಿಸುವಂತೆ ಆದೇಶಿಸಿದೆ. ಅಲ್ಲಿಯವರೆಗೆ (ನವೆಂಬರ್ 11) ಕೋರ್ಟ್ಗೆ ಅರ್ಜಿ ಸಲ್ಲಿಸಿರುವ ಅರ್ಜಿದಾರ ವೈದ್ಯರಿಗೆ ಗ್ರಾಮೀಣ ವಿಭಾಗದಲ್ಲಿ ಸೇವೆ ಸಲ್ಲಿಸುವುದಕ್ಕೆ ಒತ್ತಾಯ ಮಾಡದಂತೆ ಸರ್ಕಾರಕ್ಕೆ ಆದೇಶಿಸಿದೆ. ಆದರೆ ಇದು ಕೇವಲ ಮಧ್ಯಂತರ ಆದೇಶವಷ್ಟೇ. ಇದನ್ನೇ ಅಂತಿಮ ಎಂದುಕೊಳ್ಳಬಾರದು ಎಂದು ಸ್ಪಷ್ಟಪಡಿಸಿರುವ ಕೋರ್ಟ್, ವಿಚಾರಣೆಯನ್ನು ಮುಂದೂಡಿದೆ.