ಕ್ರಿಕೆಟ್​ ದಿಗ್ಗಜ ಕಪಿಲ್​ ದೇವ್​ಗೆ ಹೃದಯಾಘಾತ- ಆಸ್ಪತ್ರೆಗೆ ದಾಖಲು

kapil
Published on

ನವದೆಹಲಿ: ಕ್ರಿಕೆಟ್​ ಕ್ಷೇತ್ರದ ದಿಗ್ಗಜ, ವಿಶ್ವಕಪ್ ವಿಜೇತ ಕಪಿಲ್ ದೇವ್ ಅವರಿಗೆ ಹೃದಯಾಘಾತ ಉಂಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

61 ವರ್ಷದ ಕಪಿಲ್ ದೇವ್ ಅವರನ್ನು ನವದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಪತ್ರಕರ್ತೆ ಟೀನಾ ಠಾಕೂರ್ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕಪಿಲ್ ದೇವ್ ಅವರಿಗೆ ಆಂಜಿಯೋಪ್ಲ್ಯಾಸ್ಟಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

1959ರ ಜನವರಿ 6ರಂದು ಚಂಡೀಗಢದಲ್ಲಿ ಜನಿಸಿರುವ ಕಪಿಲ್​ ದೇವ್​ ಅವರು, 1978ರಲ್ಲಿ ಪಾಕಿಸ್ತಾನದ ವಿರುದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಮೂಲಕ ಕ್ರಿಕೆಟ್​ ಲೋಕಕ್ಕೆ ಪದಾರ್ಪಣೆ ಮಾಡಿದ್ದಾರೆ. 1983ರಲ್ಲಿ ವೆಸ್ಟ್ ಇಂಡೀಸ್​ನಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ ಇವರ ನಾಯಕತ್ವದ ಭಾರತ ತಂಡ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿತ್ತು. ಫೈನಲ್ ಪಂದ್ಯದಲ್ಲಿ ಭಾರತ ಬಲಿಷ್ಠ ವೆಸ್ಟ್ ಇಂಡೀಸ್ ವಿರುದ್ಧ ರೋಚಕ ಜಯ ಸಾಧಿಸಿದ್ದರು.

ಟೀಂ ಇಂಡಿಯಾ ಪರ 131 ಟೆಸ್ಟ್ ಪಂದ್ಯಗಳನ್ನು ಆಡಿರುವ ಕಪಿಲ್ ಅವರು, 5,248 ರನ್ ಗಳಿಸಿದ್ದು, 8 ಶತಕಗಳನ್ನು ಸಿಡಿಸಿದ್ದಾರೆ. 225 ಏಕದಿನ ಪಂದ್ಯಗಳಲ್ಲಿ 3,783 ರನ್ ಗಳಿಸಿದ್ದಾರೆ. ಅಲ್ಲದೇ ಟೆಸ್ಟ್ ನಲ್ಲಿ 434 ವಿಕೆಟ್, ಏಕದಿನ ಮಾದರಿ ಕ್ರಿಕೆಟ್‍ನಲ್ಲಿ 253 ವಿಕೆಟ್ ಪಡೆದುಕೊಂಡಿದ್ದಾರೆ.

2020ರ ಐಪಿಎಲ್ ಟೂರ್ನಿಯ ಕುರಿತು ತಮ್ಮ ಅಭಿಪ್ರಾಯಗಳನ್ನು ಕಪಿಲ್ ದೇವ್ ಹಂಚಿಕೊಳ್ಳುತ್ತಿದ್ದರು. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಪಿಲ್ ದೇವ್ ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಲವು ಗಣ್ಯರು, ಅಭಿಮಾನಿಗಳು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net