

ಕೋಲ್ಕತಾ: ಕೋಲ್ಕತಾದಲ್ಲಿ ಚುನಾವಣೆ ಅಬ್ಬರ ಜೋರಾಗಿದೆ. ಇದಾಗಲೇ 4 ಹಂತಗಳ ಚುನಾವಣೆ ಮುಗಿದಿದ್ದು ಐದನೇ ಹಂತದ ಚುನಾವಣೆಗೆ ಭರ್ಜರಿ ಮತಬೇಟೆ ಮುಂದುವರೆದಿದೆ. ಜತೆಗೆ ಆರೋಪ, ಪ್ರತ್ಯಾರೋಪಗಳೂ ಮಾಮೂಲಾಗಿವೆ.
ಇದರ ಜತೆಗೆ ಒಂದು ಪಕ್ಷದ ಮೇಲೆ ಇನ್ನೊಂದು ಪಕ್ಷ ಗೂಬೆ ಕೂರಿಸುವುದು, ಪೋಸ್ಟ್ ಮಾಡುವುದು ಇವೆಲ್ಲವೂ ಮಾಮೂಲಿನಂತೆ ನಡೆದೇ ಇವೆ. ಇದರ ನಡುವೆ ಕೆಲ ದಿನಗಳಿಂದ ಬಿಜೆಪಿ ನಾಯಕನ ಮನೆಯಲ್ಲಿ ರಾಶಿ ರಾಶಿ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ.
ಯಾವ ನಾಯಕ ಎನ್ನುವ ಹೆಸರು ಇಲ್ಲದ ಈ ಪೋಸ್ಟ್ನಲ್ಲಿ ರಾಶಿ ರಾಶಿ ಹಣದ ಫೋಟೋ ಇದೆ. ಈ ಕಂತುಗಟ್ಟಲೆ ಹಣವನ್ನು ಚುನಾವಣೆಯಲ್ಲಿ ಹಂಚುವ ಸಲುವಾಗಿ ಬಿಜೆಪಿ ಈ ನಾಯಕನ ಮನೆಯಲ್ಲಿ ಹಣವನ್ನು ಇಟ್ಟಿರುವುದಾಗಿ ಸುದ್ದಿ ಹರಡಿದ್ದು, ಇದು ಉಳಿದ ಪಕ್ಷಗಳಿಗೆ ಆಹಾರವಾಗಿದೆ. ಜತೆಗೆ ಭಾರಿ ಚರ್ಚೆಗೂ ಗ್ರಾಸವಾಗಿದೆ.
ಇಷ್ಟೇ ಅಲ್ಲದೇ ಬಿಜೆಪಿ ನಾಯಕರೊಬ್ಬರ ಮನೆಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರೇ ಸುದ್ದಿಗೋಷ್ಠಿಯಲ್ಲಿ ಹೇಳುತ್ತಿರುವ ಫೋಟೋ ಕೂಡ ಇದೆ.
ಆದರೆ ಫ್ಯಾಕ್ಟ್ ಫೈಂಡಿಂಗ್ ಸಮಿತಿಯು ಇದರ ಅಸಲಿಯತ್ತನ್ನು ಬಹಿರಂಗಪಡಿಸಿದೆ. ನಿಜವಾದ ಸುದ್ದಿ ಏನೆಂದರೆ ಈ ಫೋಟೋ ತೆಗೆದಿರುವುದು 2019ರ ನವೆಂಬರ್ 2ರಲ್ಲಿ. ತೆಲಂಗಾಣ ಪೊಲೀಸರು ಖಮ್ಮಮ್ನಲ್ಲಿ ನಕಲಿ ನೋಟು ಜಾಲವನ್ನು ಭೇದಿಸಿ ನೋಟುಗಳನ್ನು ವಶಪಡಿಸಿಕೊಂಡಿದ್ದರು. ಇದು ಅದರ ಫೋಟೋವಾಗಿದೆ.
ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರ ಪುತ್ರಿಯ ಮನೆಯಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿ ಆರು ಕೋಟಿಗೂ ಮಿಕ್ಕಿದ ಹಣವನ್ನು ವಶಪಡಿಸಿಕೊಂಡಿತ್ತು ಎಂದು ಹೇಳಿದಾಗಲೂ ಇದೇ ನೋಟುಗಳು ಜಾಲತಾಣದಲ್ಲಿ ಶೇರ್ ಆಗಿದ್ದವು. .
ಯಾವುದೇ ಫೋಟೋಗಳ ಅಸಲಿಯತ್ತನ್ನು ಖಚಿತಪಡಿಸಿಕೊಳ್ಳಲು ಬಳಸುವ ಗೂಗಲ್ ರೆವರ್ಸ್ ಸರ್ಚ್ ಇಂಜಿನ್ ಬಳಸಿ ಇದರ ಅಸಲಿಯತ್ತನ್ನು ಬಹಿರಂಗಪಡಿಸಲಾಗಿದೆ.